ಬೆಂಗಳೂರು: ಯೋಗ ಪರಂಪರೆಯನ್ನು ಶ್ರೀಮಂತಗೊಳಿಸುವಲ್ಲಿ ಕರ್ನಾಟಕ ಮಹತ್ವದ ಪಾತ್ರ ವಹಿಸಿದೆ. ಪ್ರಾಚೀನ ಕಾಲದಿಂದಲೂ ಈ ನಾಡು ಯೋಗ ಸಾಧನೆ ಮತ್ತು ಆಧ್ಯಾತ್ಮಿಕ ಚಿಂತನೆಯ ಪ್ರಮುಖ ಕೇಂದ್ರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಬೆಂಗಳೂರಿನ ಆನೇಕಲ್ನಲ್ಲಿರುವ ಪ್ರಶಾಂತಿ ಕುಟೀರದ ಸ್ವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯೋಗದ ಮಹತ್ವ ಹಾಗೂ ಅದರ ಅಗತ್ಯತೆಯನ್ನು ಜಗತ್ತಿಗೆ ಸಾರುವ ಅವಕಾಶ ಕರ್ನಾಟಕದಲ್ಲಿ ದೊರೆತಿರುವುದು ಸಂತಸ ತಂದಿದೆ ಎಂದರು.
ಯೋಗದ ಪ್ರಾಯೋಗಿಕ ಮಾರ್ಗದರ್ಶನ ನೀಡಿದ ಅನೇಕ ಆಚಾರ್ಯರಿಗೆ ಕರ್ನಾಟಕ ಜನ್ಮ ನೀಡಿದೆ. ಯೋಗದ ಪರಂಪರೆಯನ್ನು ಪೋಷಿಸಿ, ಬೆಳೆಸಿದ ಕೀರ್ತಿ ಈ ನಾಡಿಗೆ ಸಲ್ಲುತ್ತದೆ. ಕನ್ನಡದ ವರನಟ ಡಾ. ರಾಜ್ಕುಮಾರ್ ಅವರೂ ಯೋಗಾಭ್ಯಾಸದ ಮೂಲಕ ಗಮನ ಸೆಳೆದಿದ್ದರು ಎಂದು ಮೋದಿ ಸ್ಮರಿಸಿದರು.
ಸೇವೆ ಮತ್ತು ಸಮರ್ಪಣೆಯ ಮೂಲಕ ಮಾದರಿ ಕಾರ್ಯ ಮಾಡುತ್ತಿರುವ ಕರ್ನಾಟಕದ ಮಾದರಿಯನ್ನು ದೇಶದ ಇತರ ರಾಜ್ಯಗಳೂ ಅನುಸರಿಸಬೇಕು ಎಂದು ಕರೆ ನೀಡಿದರು. ಒಂದು ಸಾಮಾನ್ಯ ಯೋಗ ಕೇಂದ್ರವಾಗಿ ಆರಂಭವಾದ ಪ್ರಶಾಂತಿ ಕುಟೀರ ಇಂದು ಬೃಹತ್ ಸಂಸ್ಥೆಯಾಗಿ ಬೆಳೆದಿರುವುದು ಅದರ ನಿರಂತರ ಪರಿಶ್ರಮ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಶಾಂತಿ ಕುಟೀರದೊಂದಿಗೆ ನಂಟು ಹೊಂದಿರುವ ಲಕ್ಷಾಂತರ ಜನರಿಗೆ ಸ್ವರ್ಣ ಮಹೋತ್ಸವದ ಶುಭಾಶಯಗಳನ್ನು ತಿಳಿಸಿದ ಪ್ರಧಾನಿ, ಹೊ.ವೆ. ಶೇಷಾದ್ರಿ(ಹೊಂಗಸಂದ್ರ ವೆಂಕಟರಾಮಯ್ಯ ಶೇಷಾದ್ರಿ) ಅವರ ಜನ್ಮಶತಮಾನೋತ್ಸವದ ಸಂದರ್ಭವನ್ನೂ ಸ್ಮರಿಸಿದರು.
ತಮ್ಮ ಇಡೀ ಜೀವನವನ್ನು ಸಮಾಜದ ಉನ್ನತಿಗಾಗಿ ಮುಡಿಪಾಗಿಟ್ಟ ಹೊ.ವೆ. ಶೇಷಾದ್ರಿ ಅವರು, ದೇಶದ ಪ್ರಗತಿಗೆ ಸಮರ್ಪಿತ, ಸಮರ್ಥ ಹಾಗೂ ಶಿಸ್ತುಬದ್ಧ ನಾಗರಿಕರ ಅಗತ್ಯವಿದೆ ಎಂಬ ಸಂದೇಶವನ್ನು ಸಾರಿದ್ದರು ಎಂದು ಪ್ರಧಾನಿ ಮೋದಿ ಹೇಳಿದರು.





















