ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರ 3 ವರ್ಷಗಳಲ್ಲಿ ಒಂದಿಲ್ಲೊಂದು ಬೆಲೆ ಏರಿಕೆ ಮಾಡುತ್ತಲೇ ಬಂದಿದೆ. ಗ್ಯಾರಂಟಿ ಹೆಸರಲ್ಲಿ ಒಂದು ಕೈಯಿಂದ ಕೊಟ್ಟು, ಮತ್ತೊಂದು ಕೈಯಿಂದ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲು, ಪೆಟ್ರೋಲ್-ಡೀಸೆಲ್, ಬಸ್ ದರ, ವಿದ್ಯುತ್, ನೀರು, ಮದ್ಯ ಸೇರಿದಂತೆ ಎಲ್ಲ ದರ ಹೆಚ್ಚಾಗಿದೆ. ಪೆಟ್ರೋಲ್-ಡೀಸೆಲ್ 3 ಬಾರಿ, ಬಸ್ ದರ 2 ಬಾರಿ, ವಿದ್ಯುತ್ ದರ 2 ಬಾರಿ ಹೆಚ್ಚಾಗಿದೆ. ನೀರಿನ ದರ ಶೇ. 10, ಒಳಚರಂಡಿ ಶೇ. 25, ಮದ್ಯ ಶೇ. 20, ಪರವಾನಗಿ ಶುಲ್ಕ ಶೇ. 50 ಹೆಚ್ಚಾಗಿದೆ. ಈ ಹೆಚ್ಚಳಗಳಿಂದ ಸರ್ಕಾರಕ್ಕೆ ವಾರ್ಷಿಕ ಸುಮಾರು 60 ಸಾವಿರ ಕೋಟಿ ರೂ. ಹೆಚ್ಚುವರಿ ಆದಾಯ ಬರುತ್ತಿದೆ. ಇಷ್ಟೆಲ್ಲ ಸಂಗ್ರಹಿಸುವ ಸರ್ಕಾರ ಕೇಂದ್ರದ ಮೇಲೆ ಆರೋಪ ಮಾಡುವುದು ಸರಿಯೇ ಎಂದು ಪ್ರಶ್ನಿಸಿದರು.
ಎಸ್ಐಆರ್ ಹೊಸದಲ್ಲ, 1952ರಿಂದಲೂ ಹಲವು ಬಾರಿ ನಡೆದಿದೆ. ಕಾಂಗ್ರೆಸ್ ಸೋಲಿಗೆ ಎಸ್ಐಆರ್, ಇವಿಎಂ ಕಾರಣವಲ್ಲ ಎಂದರು.
ಎಥೆನಾಲ್ ಮಿಶ್ರಣದ ಬಗ್ಗೆ ಅಪಪ್ರಚಾರ: ಪೆಟ್ರೋಲ್ನಲ್ಲಿ ಶೇ. 31ರಷ್ಟು ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ರಾಜ್ಯ ಸರ್ಕಾರದ ಆರೋಪವೂ ಆಧಾರರಹಿತವಾಗಿದೆ ಎಂದ ಸಚಿವ ಜೋಶಿ ಅವರು, ದೇಶದಲ್ಲಿ ನಿಗದಿತ ನೀತಿಯಂತೆ ಪ್ರಸ್ತುತ ಶೇ. 20ರಷ್ಟು ಎಥೆನಾಲ್ ಮಿಶ್ರಣದ ಗುರಿ ಜಾರಿಯಲ್ಲಿದೆ. ಪರೀಕ್ಷೆಗೆ ಸಂಗ್ರಹಿಸಿದ 63 ಮಾದರಿಗಳ ಪೈಕಿ ಪ್ರಕಟಿಸಿರುವ 14 ಫಲಿತಾಂಶಗಳಲ್ಲಿ 11 ಮಾದರಿಗಳು ನಿಗದಿತ ಶೇ. 20ರ ಮಿತಿಯೊಳಗಿವೆ ಎಂದರು.
ಎಥೆನಾಲ್ ಮಿಶ್ರಣಕ್ಕೆ ಸಂಬಂಧಿಸಿದಂತೆ ತೈಲ ಮಾರುಕಟ್ಟೆ ಕಂಪನಿಗಳು ಮತ್ತು ಸಚಿವಾಲಯ ನಿಗದಿಪಡಿಸಿದ ಪರೀಕ್ಷಾ ಕ್ರಮಗಳಿವೆ. ಅವುಗಳನ್ನು ಅನುಸರಿಸದೆ ಅಪಪ್ರಚಾರ ಮಾಡುವುದು ಸರಿಯಲ್ಲ. ಎಥೆನಾಲ್ ಬಳಕೆಯಿಂದ ಕಬ್ಬು ಬೆಳೆಗಾರರಿಗೆ ಅನುಕೂಲವಾಗುವುದರ ಜತೆಗೆ ವಿದೇಶಿ ಇಂಧನ ಆಮದು ಅವಲಂಬನೆ ಕಡಿಮೆಯಾಗಲಿದೆ. ದೇಶದ ಒಟ್ಟು ತೈಲ ಅಗತ್ಯದ ಶೇ. 85ರಿಂದ 90ರಷ್ಟು ಆಮದು ಮಾಡಿಕೊಳ್ಳಲಾಗುತ್ತಿದೆ. ಇಂಧನ ಸ್ವಾವಲಂಬನೆಗೆ ಎಥೆನಾಲ್ ಮಿಶ್ರಣ ಪ್ರಮುಖ ಹೆಜ್ಜೆಯಾಗಿದೆ. ಎಥೆನಾಲ್ ಖರೀದಿಯಿಂದ ಸಕ್ಕರೆ ಕಾರ್ಖಾನೆಗಳಿಗೆ ಬರುವ ಹಣ ರೈತರಿಗೆ ತಲುಪುವಂತೆ ಆದ್ಯತೆ ನೀಡಬೇಕು ಎಂದರು.




















