SK Home Ad
Home ಸುದ್ದಿ ದೇಶ ಕೇರಳದ ಮರಿಯಾನೆಯ ಪ್ರಾಣ ಉಳಿಸಲು ವನತಾರಾ ಭರವಸೆಯ ಬೆಳಕು

ಕೇರಳದ ಮರಿಯಾನೆಯ ಪ್ರಾಣ ಉಳಿಸಲು ವನತಾರಾ ಭರವಸೆಯ ಬೆಳಕು

0
41

ಜಾಮ್‌ ನಗರ: ಆಗಷ್ಟೇ ಕಣ್ಣು ಬಿಟ್ಟ ನವಜಾತ ಮರಿಯಾನೆ! ತಾಯಿ ಹಿಂಡಿನೊಂದಿಗೆ ನದಿ ದಾಟಿ ಹೋದಾಗ, ದಡದಲ್ಲೇ ಒಬ್ಬಂಟಿಯಾಗಿ ಉಳಿದುಹೋಗಿತ್ತು. ಹೇಗೋ ಕೇರಳದ ಅರಣ್ಯ ಸಿಬ್ಬಂದಿಯ ಕಣ್ಣಿಗೆ ಬಿದ್ದು, ಅವರ ಮಮತೆಯ ಮಡಿಲಲ್ಲಿ ಬೆಳೆದ 18 ತಿಂಗಳ ಈ ಪುಟ್ಟ ಆನೆಮರಿ, ಆಟವಾಡುವಾಗ ಬಿದ್ದು ಮುರಿದ ಮೂಳೆಗಳ ನೋವಿನಿಂದ ನರಳುತ್ತಾ ಸಾವು-ಬದುಕಿನ ನಡುವೆ ಹೋರಾಡುತ್ತಿದೆ. ಆದರೆ ಕತ್ತಲ ಹಾದಿಯಲ್ಲಿ ನರಳುತ್ತಿದ್ದ ಈ ಜೀವಕ್ಕೆ ಇದೀಗ ʻವನತಾರಾʼ ಭರವಸೆಯ ಬೆಳಕಾಗಿ ಧಾವಿಸಿದೆ.

ಮರಿಯಾನೆ ಮಾಯಾ ಕಳೆದ 18 ತಿಂಗಳುಗಳ ಕಾಲ ಪ್ರೀತಿಯಿಂದ ಬೆಳೆದರೂ, ಇತ್ತೀಚೆಗೆ ಎರಡೂ ಮುಂಗಾಲುಗಳು ಮುರಿದು, ನಿಲ್ಲಲೂ ಶಕ್ತಿಯಿಲ್ಲದೆ ಕುಗ್ಗಿತ್ತು. ಹೀಗಿದ್ದರೂ, ಅನಂತ್ ಅಂಬಾನಿ ಅವರ ಹೃದಯಪೂರ್ವಕ ಕಳಕಳಿ ಹಾಗೂ ವನತಾರಾ ಸಂಸ್ಥೆಯ ಚುರುಕಿನ ಕಾರ್ಯಾಚರಣೆಯಿಂದಾಗಿ, ಕೇರಳದ ಮುಖ್ಯ ವನ್ಯಜೀವಿ ವಾರ್ಡನ್ ಡಾ. ಪಿ. ಪುಗಳೇಂಧಿ (ಐಎಫ್‌ ಎಸ್) ಅವರ ಅನುಮತಿ ಲಭಿಸುತ್ತಿದ್ದಂತೆ, ನವೆಂಬರ್ 6 ರಂದು ಅತ್ಯಾಧುನಿಕ ವೈದ್ಯಕೀಯ ವಿಮಾನದ ಮೂಲಕ ಮಾಯಾಳನ್ನು ಜಾಮ್‌ ನಗರದ ವನತಾರಾ ತೀವ್ರ ನಿಗಾ ಆಸ್ಪತ್ರೆಗೆ ಕರೆತರಲಾಯಿತು.

ಕಳೆದ 2025ರ ಏಪ್ರಿಲ್ 19ರಂದು ಮಲಯಾತ್ತೂರ್ ವಿಭಾಗದ ಕಪ್ರಿಕ್ಕಾಡ್ ಬಳಿ ತಾಯಿಯ ಎದೆಹಾಲೂ ಇಲ್ಲದೆ, ನಿರ್ಜಲೀಕರಣದಿಂದ ಬಳಲಿ ಬಿದ್ದಿದ್ದ ಈ ಪುಟ್ಟ ಜೀವಕ್ಕೆ ಹಾಲು ಹೀರುವ ಶಕ್ತಿಯೂ ಇರಲಿಲ್ಲ. ಅಂತಹ ಸಂದರ್ಭದಲ್ಲಿ ಸಹಾಯಕ ಅರಣ್ಯ ಪಶುವೈದ್ಯಾಧಿಕಾರಿ ಡಾ. ಬಿನೋಯ್ ಸಿ. ಬಾಬು ಮತ್ತು ಆರೈಕೆದಾರರ ತಂಡ ಹಗಲು-ರಾತ್ರಿ ಕಣ್ಣಿಟ್ಟು, ಸಾಕಿ ಸಲಹಿದರು. ಪ್ರೀತಿಯಿಂದ ಆನೆ ಮರಿಗೆ ʻಮಾಯಾʼ ಎಂದು ಹೆಸರಿಟ್ಟರು.

ಆದರೆ ವಿಧಿಯ ಆಟ ಬೇರೆಯೇ ಇತ್ತು. 2026ರ ಜುಲೈನಲ್ಲಿ ಆಟವಾಡುತ್ತಿದ್ದಾಗ ಜಾರಿ ಬಿದ್ದು ಮಾಯಾಳ ಹೆಗಲಿಗೆ ಪೆಟ್ಟಾಯಿತು. ಫಿಸಿಯೋಥೆರಪಿ, ಪಟ್ಟಿಗಳು, ಪೌಷ್ಟಿಕಾಂಶದ ಔಷಧಿಗಳನ್ನು ನೀಡಿದರೂ ಆಕೆಯ ಮೂಳೆಗಳು ಕರಗುತ್ತಾ ಬಂದವು. ಅಕ್ಟೋಬರ್ ವೇಳೆಗೆ ಎರಡೂ ಮುಂಗಾಲುಗಳು ಮುರಿದು, ಎದೆ ಸೋಂಕು ಮತ್ತು ಮೈಯೆಲ್ಲಾ ಗಾಯಗಳಾಗಿ ಮಾಯಾ ಏಳಲಾಗದೆ ಮಲಗಿದಲ್ಲೇ ಉಳಿದುಬಿಟ್ಟಳು. ಆಕೆಯ ಜೀವದ ದೀಪ ಆರಿಹೋಗುವ ಭೀತಿ ಎದುರಾಯಿತು.

ಮಾಯಾಳನ್ನು ಉಳಿಸಿಕೊಳ್ಳಲು ಅರಣ್ಯಾಧಿಕಾರಿಗಳು ಕೊನೆಯ ಪ್ರಯತ್ನವಾಗಿ ದೇಶದ ಶ್ರೇಷ್ಠ ಪಶು ವೈದ್ಯರ ಮೊರೆ ಹೋದರು. ಪ್ರಸಿದ್ಧ ಆನೆ ಪಶುವೈದ್ಯರು ಹಾಗೂ ವಂತಾರಾದ ಸಲಹೆಗಾರರಾದ ಪದ್ಮಶ್ರೀ ಡಾ. ಕುಶಾಲ್ ಕನ್ವರ್ ಶರ್ಮಾ ಮತ್ತು ವಂತಾರಾ ಆನೆಗಳ ಆರೈಕೆ ಕೇಂದ್ರದ ಮುಖ್ಯ ಪಶುವೈದ್ಯ ಡಾ. ಯದುರಾಜ್ ಖಾಡ್ಪೇಕರ್ ಅವರು ಮಾಯಾಳ ದೇಹದಲ್ಲಿದ್ದ ಪ್ಯಾರಾಥೈರಾಯ್ಡ್ ಸಮಸ್ಯೆಯನ್ನು ಗುರುತಿಸಿದರು. “ಇನ್ನೂ ಭರವಸೆ ಇದೆ, ಈ ಕಂದಮ್ಮನಿಗೆ ಚಿಕಿತ್ಸೆ ನೀಡೋಣ” ಎಂದು ವೈದ್ಯಕೀಯ ಮಂಡಳಿ ಒಮ್ಮತದಿಂದ ನಿರ್ಧರಿಸಿತು.

ಅತ್ಯಾಧುನಿಕ ಜೀವ ರಕ್ಷಕ ವ್ಯವಸ್ಥೆಯಿರುವ ವಿಮಾನದಲ್ಲಿ ಮೂವರು ತಜ್ಞ ವೈದ್ಯರು, ಆರೈಕೆದಾರರ ಜೊತೆಗೆ, ಮಾಯಾಳಿಗೆ ಪರಿಚಿತರಾಗಿದ್ದ ಡಾ. ಬಿನೋಯ್ ಸಿ. ಬಾಬು ಮತ್ತು ಪ್ರೀತಿಯ ಸಾಕುತಂದೆಯಂತಿದ್ದ ನಿಖಿಲ್ ಬಾಬು ಕೂಡ ಜೊತೆಯಾಗಿದ್ದಾರೆ. ವಂತಾರಾದಲ್ಲಿ ಆಕೆಗೆ 24 ಗಂಟೆಯೂ ನಿರಂತರ ಆರೈಕೆ, ನೋವು ಶಮನ ಚಿಕಿತ್ಸೆ, ಹೈಡ್ರಾಲಿಕ್ ಲಿಫ್ಟಿಂಗ್ ಬೆಂಬಲ ಹಾಗೂ ಜಲಚಿಕಿತ್ಸೆ (ಹೈಡ್ರೋಥೆರಪಿ) ಲಭಿಸಲಿದೆ. ಚಿಕಿತ್ಸೆಯ ಸಂಪೂರ್ಣ ಉಸ್ತುವಾರಿಯನ್ನು ಕೇರಳ ಅರಣ್ಯ ಇಲಾಖೆಯೇ ವಹಿಸಿದ್ದು, ಮಾಯಾ ಗುಣಮುಖಳಾದ ತಕ್ಷಣವೇ ಆಕೆಯನ್ನು ಮತ್ತೆ ಸ್ವಂತ ಮನೆ ಅಭಯಾರಣ್ಯಕ್ಕೆ ಕರೆದೊಯ್ಯಲಾಗುತ್ತದೆ.

“ಮಾಯಾ ತನ್ನ ಹುಟ್ಟಿನಿಂದಲೂ ಪ್ರತಿಯೊಂದು ಕ್ಷಣವೂ ಬದುಕಿಗಾಗಿ ಹೋರಾಡಿದ್ದಾಳೆ. ಈಗ ಆಕೆಗಾಗಿ ಹೋರಾಡುವುದು ನಮ್ಮ ಕರ್ತವ್ಯ. ನಮ್ಮ ತಂಡ ಆಕೆಯ ಬಳಿಯಿಂದ ಒಂದು ಕ್ಷಣವೂ ದೂರ ಸರಿಯುವುದಿಲ್ಲ. ಪ್ರತಿಯೊಂದು ಜೀವವೂ ಅಮೂಲ್ಯವಾದದ್ದು, ಈ ಪುಟ್ಟ ಮಗು ಬೇಗ ಗುಣಮುಖರಾಗಲಿ ಎಂದು ನಾವೆಲ್ಲರೂ ಪ್ರಾರ್ಥಿಸೋಣ,” ಎಂದು ವಂತಾರಾದ ಸಿಇಒ ವಿವಾನ್ ಕರಾನಿ ಭಾವನಾತ್ಮಕವಾಗಿ ನುಡಿದಿದ್ದಾರೆ.

ಮಾಯಾ ಚೇತರಿಸಿಕೊಳ್ಳುವ ಹಾದಿ ಇನ್ನೂ ಸುದೀರ್ಘವಾಗಿದೆ, ಸವಾಲುಗಳಿಂದ ಕೂಡಿದೆ. ಆದರೆ, ಪ್ರೀತಿ ಮತ್ತು ಕರುಣೆಯ ಬಲವಿರುವಾಗ ಈ ಪುಟ್ಟ ಮಾಯಾ ಖಂಡಿತ ಗೆದ್ದು ಬರುವಳು ಎಂಬ ಹಾರೈಕೆ, ನಿರೀಕ್ಷೆ ಎಲ್ಲರದ್ದಾಗಿದೆ.