SK Home Ad
Home ನಮ್ಮ ಜಿಲ್ಲೆ ಬೆಂಗಳೂರು ಹೆಣ್ಣೂರು ಸ್ಪರ್ಶ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ‘ನ್ಯೂರೋ ಐಸಿಯು’ ಲೋಕಾರ್ಪಣೆ

ಹೆಣ್ಣೂರು ಸ್ಪರ್ಶ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ‘ನ್ಯೂರೋ ಐಸಿಯು’ ಲೋಕಾರ್ಪಣೆ

0
24

ಬೆಂಗಳೂರು: ಉತ್ತರ ಬೆಂಗಳೂರಿನಲ್ಲಿ ನರರೋಗ ಚಿಕಿತ್ಸಾ ಸೌಲಭ್ಯಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಹೆಣ್ಣೂರಿನ ಸ್ಪರ್ಶ್ ಆಸ್ಪತ್ರೆಯಲ್ಲಿ 10 ಹಾಸಿಗೆಗಳ ಅತ್ಯಾಧುನಿಕ ನ್ಯೂರೋ ಇಂಟೆನ್ಸಿವ್ ಕೇರ್ ಯೂನಿಟ್‌ (ನ್ಯೂರೋ ಐಸಿಯು) ಆರಂಭಿಸಲಾಗಿದೆ.

ಇಸ್ರೋದ ಯು.ಆರ್. ರಾವ್ ಉಪಗ್ರಹ ಕೇಂದ್ರದ ಉಪನಿರ್ದೇಶಕ ಡಾ. ಎಸ್. ವೆಂಕಟೇಶ್ವರ ಶರ್ಮಾ ಅವರು ನೂತನ ಘಟಕವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸ್ಪರ್ಶ್ ಆಸ್ಪತ್ರೆಗಳ ಸಮೂಹದ ಸಿಇಒ ಜಸ್‌ದೀಪ್ ಸಿಂಗ್, ಕ್ಲಸ್ಟರ್ ಸಿಒಒ ಕರ್ನಲ್ ರಾಹುಲ್ ತಿವಾರಿ, ನರಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಮುರಳಿ ಮೋಹನ್ ಸೇರಿದಂತೆ ಹಿರಿಯ ವೈದ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಗಂಭೀರ ನರರೋಗಗಳಿಗೆ ತುರ್ತು ಚಿಕಿತ್ಸೆ: ಪಾರ್ಶ್ವವಾಯು, ಮೆದುಳು ಮತ್ತು ಬೆನ್ನುಹುರಿಯ ಗಂಭೀರ ಗಾಯಗಳು, ಮೂರ್ಛೆ ರೋಗ, ಮೆದುಳಿನ ಸೋಂಕು, ಗಿಲ್ಲನ್-ಬ್ಯಾರೆ ಸಿಂಡ್ರೋಮ್ ಹಾಗೂ ಮೈಸ್ತೇನಿಯಾ ಗ್ರ್ಯಾವಿಸ್‌ನಂತಹ ಗಂಭೀರ ನರರೋಗ ಸಮಸ್ಯೆಗಳಿಗೆ ತ್ವರಿತ ಮತ್ತು ಸಮಗ್ರ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಈ ಘಟಕವನ್ನು ಸ್ಥಾಪಿಸಲಾಗಿದೆ.

ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನಗಳನ್ನು ಹೊಂದಿರುವ ನ್ಯೂರೋ ಐಸಿಯುನಲ್ಲಿ ನಿರಂತರ ವಿಡಿಯೋ ಇಇಜಿ, ತಲೆಗೆ ಗಾಯವಾದ ರೋಗಿಗಳ ಮೆದುಳಿನ ಒತ್ತಡವನ್ನು ಅಳೆಯುವ ಇಂಟ್ರಾಕ್ರೇನಿಯಲ್ ಪ್ರೆಶರ್ ಮಾನಿಟರಿಂಗ್ ವ್ಯವಸ್ಥೆ ಸೇರಿದಂತೆ ಹಲವು ಸೌಲಭ್ಯಗಳಿವೆ. ಅಗತ್ಯವಿರುವ ರೋಗಿಗಳಿಗೆ ಮೆಕ್ಯಾನಿಕಲ್ ವೆಂಟಿಲೇಶನ್, ಹಿಮೋಡೈನಾಮಿಕ್ ಮಾನಿಟರಿಂಗ್ ಹಾಗೂ ಕಂಟಿನ್ಯೂಯಸ್ ರೀನಲ್ ರಿಪ್ಲೇಸ್‌ಮೆಂಟ್ ಥೆರಪಿ (ಸಿಆರ್‌ಆರ್‌ಟಿ) ಸೌಲಭ್ಯವನ್ನೂ ಒದಗಿಸಲಾಗುತ್ತದೆ.

ಇದಲ್ಲದೆ, ತ್ವರಿತ ರೋಗನಿರ್ಣಯಕ್ಕಾಗಿ ಸಿಟಿ, ಎಂಆರ್‌ಐ ಹಾಗೂ ನ್ಯೂರೋ ಇಂಟರ್‌ವೆನ್ಷನಲ್ ರೇಡಿಯಾಲಜಿ ಸೇವೆಗಳು ಲಭ್ಯವಿವೆ. ನ್ಯೂರೋ ಇಂಟೆನ್ಸಿವಿಸ್ಟ್‌ಗಳು, ನರರೋಗ ತಜ್ಞರು, ನರಶಸ್ತ್ರಚಿಕಿತ್ಸಕರು ಹಾಗೂ ಕ್ರಿಟಿಕಲ್ ಕೇರ್ ನರ್ಸ್‌ಗಳ ತಂಡ ದಿನದ 24 ಗಂಟೆಯೂ ರೋಗಿಗಳ ಆರೈಕೆಗೆ ಸನ್ನದ್ಧವಾಗಿರಲಿದೆ.

ಸ್ಟ್ರೋಕ್ ಚಿಕಿತ್ಸೆಗೆ ವಿಶೇಷ ಮಾರ್ಗಸೂಚಿ: ನ್ಯೂರೋ ಐಸಿಯು ಉದ್ಘಾಟನೆಯೊಂದಿಗೆ ಆಸ್ಪತ್ರೆಯ ವೈದ್ಯಕೀಯ ತಂಡಕ್ಕಾಗಿ ಸಿದ್ಧಪಡಿಸಿರುವ ‘ಸ್ಟ್ರೋಕ್ ಮ್ಯಾನ್ಯುಯಲ್’ ಅನ್ನೂ ಬಿಡುಗಡೆ ಮಾಡಲಾಯಿತು. ಇದರಲ್ಲಿ ಸಮಗ್ರ ಸ್ಟ್ರೋಕ್ ಮ್ಯಾನ್ಯುಯಲ್, ಅಕ್ಯೂಟ್ ಸ್ಟ್ರೋಕ್ ವರ್ಕ್‌ಬುಕ್ ಹಾಗೂ ಪಾಕೆಟ್ ಗೈಡ್ ಒಳಗೊಂಡಿವೆ.

ಪಾರ್ಶ್ವವಾಯು ಪ್ರಕರಣಗಳಲ್ಲಿ ರೋಗಲಕ್ಷಣಗಳ ಗುರುತಿಸುವಿಕೆ, ತ್ವರಿತ ಸ್ಕ್ಯಾನಿಂಗ್, ಚಿಕಿತ್ಸೆಯ ನಿರ್ಧಾರ, ಐಸಿಯು ಆರೈಕೆ ಹಾಗೂ ಪುನರ್ವಸತಿಯವರೆಗಿನ ಹಂತಗಳಿಗೆ ಸ್ಪಷ್ಟ ಮಾರ್ಗಸೂಚಿಗಳನ್ನು ಈ ಕೈಪಿಡಿ ಒಳಗೊಂಡಿದೆ. ಇದರಿಂದ ತುರ್ತು ಸಂದರ್ಭಗಳಲ್ಲಿ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ವಿಳಂಬವಿಲ್ಲದೆ ಏಕರೂಪದ ಚಿಕಿತ್ಸಾ ಕ್ರಮ ಅನುಸರಿಸಲು ಅನುಕೂಲವಾಗಲಿದೆ.

ಮೆದುಳು-ಹೃದಯದ ಕಾಯಿಲೆ ತಡೆಗೆ ಕ್ಲಿನಿಕ್: ಇದೇ ವೇಳೆ ನರರೋಗ, ನರಶಸ್ತ್ರಚಿಕಿತ್ಸೆ ಹಾಗೂ ಹೃದಯರೋಗ ವಿಭಾಗಗಳನ್ನು ಒಂದೇ ಸೂರಿನಡಿ ತರುವ ಸಮಗ್ರ ಮೆದುಳು ಮತ್ತು ಹೃದಯ ಕಾಯಿಲೆ ತಡೆಗಟ್ಟುವಿಕೆ ಕ್ಲಿನಿಕ್ ಅನ್ನೂ ಆರಂಭಿಸಲಾಗಿದೆ.

ಮೆದುಳು ಮತ್ತು ಹೃದಯದ ಸಮಸ್ಯೆಗಳಿಗೆ ಕಾರಣವಾಗುವ ಹಲವು ಅಪಾಯಕಾರಿ ಅಂಶಗಳು ಒಂದೇ ಆಗಿರುವ ಹಿನ್ನೆಲೆಯಲ್ಲಿ, ಅಪಾಯದ ಸಾಧ್ಯತೆ ಇರುವವರನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಸೂಕ್ತ ತಪಾಸಣೆ ಮತ್ತು ಚಿಕಿತ್ಸೆ ನೀಡುವುದು ಈ ಕ್ಲಿನಿಕ್‌ನ ಉದ್ದೇಶವಾಗಿದೆ. ಪಾರ್ಶ್ವವಾಯು ಹಾಗೂ ಹೃದಯಾಘಾತ ಸಂಭವಿಸುವ ಮುನ್ನವೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಇದು ನೆರವಾಗಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸ್ಪರ್ಶ್ ಆಸ್ಪತ್ರೆಗಳ ಕ್ಲಸ್ಟರ್ ಸಿಒಒ ಕರ್ನಲ್ ರಾಹುಲ್ ತಿವಾರಿ, ಬೆಂಗಳೂರು ನಗರ ವಿಸ್ತಾರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜನರಿಗೆ ತಮ್ಮ ಸಮೀಪದಲ್ಲೇ ಅತ್ಯಾಧುನಿಕ ವೈದ್ಯಕೀಯ ಸೇವೆಗಳು ಲಭ್ಯವಾಗುವುದು ಅಗತ್ಯವಾಗಿದೆ. ಹೆಣ್ಣೂರಿನಲ್ಲಿ ಆರಂಭಿಸಿರುವ ನ್ಯೂರೋ ಐಸಿಯು ಮೂಲಕ ವೈದ್ಯಕೀಯ ಪರಿಣತಿ ಹಾಗೂ ಗುಣಮಟ್ಟದ ಚಿಕಿತ್ಸೆಯನ್ನು ಜನರಿಗೆ ಸುಲಭವಾಗಿ ತಲುಪಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಸ್ಪರ್ಶ್ ಆಸ್ಪತ್ರೆಯ ನರಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಮುರಳಿ ಮೋಹನ್ ಮಾತನಾಡಿ, ಗಂಭೀರ ನರರೋಗ ಸಮಸ್ಯೆಗಳಿಗೆ ನಿರಂತರ ನಿಗಾ ಹಾಗೂ ಸಕಾಲಿಕ ಚಿಕಿತ್ಸೆ ಅತ್ಯಗತ್ಯ. ನೂತನ ನ್ಯೂರೋ ಐಸಿಯುನಲ್ಲಿ ಮೆದುಳಿನ ಕಾರ್ಯವೈಖರಿಯನ್ನು ನಿರಂತರವಾಗಿ ಗಮನಿಸುವುದರ ಜತೆಗೆ, ಸಂಭವನೀಯ ತೊಡಕುಗಳನ್ನು ಆರಂಭದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ನೀಡಲು ಸಾಧ್ಯವಾಗಲಿದೆ. ವಿಶೇಷವಾಗಿ ಪಾರ್ಶ್ವವಾಯು ಮತ್ತು ಮೆದುಳಿನ ಗಾಯದ ಪ್ರಕರಣಗಳಲ್ಲಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡುವುದು ರೋಗಿಯ ಚೇತರಿಕೆಗೆ ನಿರ್ಣಾಯಕವಾಗಿದೆ ಎಂದರು.

ಬಹುತೇಕ ಪಾರ್ಶ್ವವಾಯು ಪ್ರಕರಣಗಳಿಗೆ ಆರಂಭದಲ್ಲೇ ಗುರುತಿಸಿ ನಿಯಂತ್ರಿಸಬಹುದಾದ ಅಪಾಯಕಾರಿ ಅಂಶಗಳೇ ಕಾರಣವಾಗುತ್ತವೆ. ಹೀಗಾಗಿ, ಗಂಭೀರ ಸ್ಥಿತಿ ತಲುಪುವ ಮುನ್ನವೇ ತಪಾಸಣೆ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ನೂತನ ಕ್ಲಿನಿಕ್ ಸಹಕಾರಿಯಾಗಲಿದೆ. ಒಂದು ವೇಳೆ ಪಾರ್ಶ್ವವಾಯು ಸಂಭವಿಸಿದರೂ, ಸ್ಟ್ರೋಕ್ ಮ್ಯಾನ್ಯುಯಲ್ ಮೂಲಕ ವೈದ್ಯಕೀಯ ತಂಡ ತ್ವರಿತವಾಗಿ ಮತ್ತು ಸಮನ್ವಯದಿಂದ ಚಿಕಿತ್ಸೆ ನೀಡಲು ಸಾಧ್ಯವಾಗಲಿದೆ ಎಂದು ಅವರು ವಿವರಿಸಿದರು.

ಅತ್ಯಾಧುನಿಕ ಮೂಲಸೌಕರ್ಯ, ತಜ್ಞ ವೈದ್ಯರ ತಂಡ ಹಾಗೂ ಸಂಘಟಿತ ತುರ್ತು ಚಿಕಿತ್ಸಾ ವ್ಯವಸ್ಥೆಯ ಮೂಲಕ ಉತ್ತರ ಬೆಂಗಳೂರಿನಲ್ಲಿ ಗುಣಮಟ್ಟದ ನರರೋಗ ಚಿಕಿತ್ಸೆಯನ್ನು ಒದಗಿಸುವ ಗುರಿಯನ್ನು ಸ್ಪರ್ಶ್ ಆಸ್ಪತ್ರೆ ಹೊಂದಿದೆ.