ಬೆಂಗಳೂರು: “ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಸಿದರೆ ಅದಕ್ಕೆ ಅನುಗುಣವಾಗಿ ರಾಜ್ಯದಲ್ಲೂ ಬಸ್ ಪ್ರಯಾಣ ದರ ಕಡಿಮೆ ಮಾಡಲು ಸಿದ್ಧ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ಸಂಸ್ಥೆಗಳು ನಷ್ಟದಲ್ಲಿವೆ. ಮೂರು ವಾರ ಅಥವಾ ಹತ್ತು ದಿನಗಳ ಮುಂಚಿತವಾಗಿಯೇ ಡೀಸೆಲ್ ಖರೀದಿಸಲು ಹಣವಿಲ್ಲದ ಪರಿಸ್ಥಿತಿ ಎದುರಾಗಿತ್ತು. ಸರಕಾರವೇ ಹಣ ನೀಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸಿರುವುದರಿಂದ ಸಾರಿಗೆ ಸಂಸ್ಥೆಗಳ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬಿದ್ದಿದೆ. ಹೀಗಾಗಿ ಒಂದೊಂದು ಹಂತದಲ್ಲಿ ಎರಡು, ಮೂರು ರೂಪಾಯಿ ದರ ಹೆಚ್ಚಿಸಿರಬಹುದು ಎಂದು ಹೇಳಿದರು.
ಡೀಸೆಲ್, ಪೆಟ್ರೋಲ್ ಬೆಲೆ ಹೆಚ್ಚಾದಾಗ ವಿಪಕ್ಷಗಳು ಏಕೆ ಮಾತನಾಡಲಿಲ್ಲ? ಅಡುಗೆ ಅನಿಲದ ಬೆಲೆ ಏರಿಕೆಯಾದಾಗ ಏಕೆ ಧ್ವನಿ ಎತ್ತಲಿಲ್ಲ? ರಸಗೊಬ್ಬರ, ಕೀಟನಾಶಕ, ಕಬ್ಬಿಣ, ಸಿಮೆಂಟ್ ಹಾಗೂ ಔಷಧಗಳ ಬೆಲೆ ಹೆಚ್ಚಳದ ಬಗ್ಗೆ ಏಕೆ ಪ್ರತಿಭಟಿಸಲಿಲ್ಲ? ರೈತರು ಬಳಸುವ ಕೃಷಿ ಪರಿಕರಗಳ ಬೆಲೆ ಎಷ್ಟು ಹೆಚ್ಚಾಗಿದೆ ಎಂಬುದರ ಬಗ್ಗೆ ವಿಪಕ್ಷಗಳಿಗೆ ಕಾಳಜಿ ಇಲ್ಲವೇ? ಎಂದು ಪ್ರಶ್ನಿಸಿದರು.
ರಾಜ್ಯದ ಬರಗಾಲ ಸಂದರ್ಭದಲ್ಲಿ ರೈತರು ಎಷ್ಟು ಕಷ್ಟಪಡುತ್ತಿದ್ದಾರೆ ಎಂಬ ಅರಿವು ನನಗಿದೆ. ಅವರ ಬದುಕಿನ ಸಂಕಷ್ಟವೂ ನಮಗೆ ಗೊತ್ತಿದೆ. ಅದೇ ರೀತಿ ಸಾರಿಗೆ ಸಂಸ್ಥೆಗಳೂ ಉಳಿಯಬೇಕು. ಅವುಗಳಿಗೂ ಆರ್ಥಿಕವಾಗಿ ಚೇತರಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿ, ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಧಿಸುತ್ತಿರುವ ಸೆಸ್ ಹಾಗೂ ತೆರಿಗೆ ಹೊರೆ ಕಡಿಮೆ ಮಾಡಿಸಲಿ. ಕೇಂದ್ರ ಸರ್ಕಾರ ಇಂಧನ ಬೆಲೆ ಇಳಿಸಿದರೆ ರಾಜ್ಯ ಸರ್ಕಾರವೂ ಅದಕ್ಕೆ ತಕ್ಕಂತೆ ಕ್ರಮ ಕೈಗೊಳ್ಳಲಿದೆ ಎಂದು ವಿಪಕ್ಷಗಳಿಗೆ ಸವಾಲು ಹಾಕಿದರು.
ಹಾಲಿನ ದರ ಏರಿಕೆ ಬಗ್ಗೆ ಸ್ಪಷ್ಟನೆ: ಕೆಲವು ಕಡೆ ಹಾಲಿನ ದರ ಲೀಟರ್ಗೆ 8 ರೂ. ಬದಲಿಗೆ 12 ರೂ. ಹೆಚ್ಚಳವಾಗಿದೆ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ, “ಹಾಲಿನ ದರದಲ್ಲಿ ವ್ಯತ್ಯಾಸವಾಗಲು ಅದರ ಗುಣಮಟ್ಟ ಹಾಗೂ ಕೊಬ್ಬಿನ ಅಂಶ ಕಾರಣ” ಎಂದು ತಿಳಿಸಿದರು. “ಎಲ್ಲ ಹಾಲೂ ಒಂದೇ ರೀತಿಯಲ್ಲಿರುವುದಿಲ್ಲ. ಸಾಮಾನ್ಯ ಹಾಲು, ನಾಟಿ ಹಸುವಿನ ಹಾಲು ಹಾಗೂ ಎಮ್ಮೆ ಹಾಲು ಬೇರೆ ಬೇರೆಯಾಗಿರುತ್ತವೆ. ಅವುಗಳ ಕೊಬ್ಬಿನ ಅಂಶವೂ (ಫ್ಯಾಟ್) ವಿಭಿನ್ನವಾಗಿರುತ್ತದೆ. ಈ ವ್ಯತ್ಯಾಸಗಳನ್ನು ಜನರು ಅರ್ಥಮಾಡಿಕೊಳ್ಳಬೇಕು” ಎಂದರು.



















