ಬೆಳಗಾವಿ: ನಾಲ್ಕು ವರ್ಷ ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿದ್ದ ಯುವಕನೊಬ್ಬ, ಮದುವೆಗೆ ಒತ್ತಾಯಿಸಿದ ಪ್ರೇಯಸಿಯನ್ನು ಕೊಲೆ ಮಾಡಿ ಗೋಕಾಕ ಫಾಲ್ಸ್ ಸಮೀಪದ ಗುಡ್ಡದ ಇಳಿಜಾರಿನಲ್ಲಿ ತಳ್ಳಿ ಹಾಕಿದ ಘಟನೆ ನಡೆದಿದೆ.
ಮೃತ ಯುವತಿಯನ್ನು ರಾಯಬಾಗ ತಾಲೂಕಿನ ಹಾರೂಗೇರಿ ಗ್ರಾಮದ ರಕ್ಷಿತಾ ಸಾರಿಕರ್ (25) ಎಂದು ಗುರುತಿಸಲಾಗಿದೆ. ಅಥಣಿ ತಾಲೂಕಿನ ಅಡಳಹಟ್ಟಿ ಗ್ರಾಮದ ಬಸಪ್ಪ ಸಿದ್ದಪ್ಪ ಸಾತನ್ನವಣ್ಣರ ಕೊಲೆ ಮಾಡಿದ ಆರೋಪಿ.
ಅ. 28 ರಂದು ರಕ್ಷಿತಾಳನ್ನು ಬಸಪ್ಪ ಹಾರೂಗೇರಿಯಿಂದ ಗೋಕಾಕ ಫಾಲ್ಸ್ಗೆ ಕರೆದುಕೊಂಡು ಬಂದಿದ್ದಾನೆ. ಸಂಜೆ ಸುಮಾರು 4 ಗಂಟೆಗೆ ಫಾಲ್ಸ್ ರಸ್ತೆಯ ಪಕ್ಕದ ಕಟ್ಟೆಯ ಮೇಲೆ ಇಬ್ಬರೂ ಕುಳಿತು ಮಾತಿಗೆ ಇಳಿದಿದ್ದಾರೆ. `ಈಗಾಗಲೇ ನಮ್ಮ ಪ್ರೀತಿಗೆ 4 ವರ್ಷ ತುಂಬಿದೆ. ಬೇಗ ಮದುವೆಯಾಗೋಣ’ ಎಂದು ರಕ್ಷಿತಾ ಬಸಪ್ಪನಿಗೆ ಒತ್ತಾಯಿಸಿದ್ದಾಳೆ. ಆದರೆ ಬಸಪ್ಪ ಇದಕ್ಕೆ ಒಪ್ಪದೇ ಏಕಾಏಕಿ ಕೋಪಗೊಂಡಿದ್ದಾನೆ. ಮದುವೆಗೆ ಅರ್ಜಂಟ್ ಏನಿದೆ ಎಂದು ಗದರಿದ್ದಾನೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದ್ದು, ಯಾವುದೇ ಕಾರಣಕ್ಕೂ ಇನ್ನು ವಿಳಂಬ ಮಾಡದಂತೆ ಯುವತಿ ಪ್ರಿಯಕರನಿಗೆ ದಂಬಾಲು ಬಿದ್ದಿದ್ದಾಳೆ.
ಈ ವೇಳೆ ಆಕ್ರೋಶಗೊಂಡ ಆರೋಪಿಯು ಯುವತಿಯ ಕೆನ್ನೆಗೆ ಬಲವಾಗಿ ಹೊಡೆದು, ಕೈಯಿಂದ ಕುತ್ತಿಗೆ ಹಿಸುಕಿ ಬಳಿಕ ದುಪ್ಪಟ್ಟಾದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ, ನಂತರ ಮೃತದೇಹವನ್ನು ಫಾಲ್ಸ್ನ ಗುಡ್ಡದ ಇಳಿಜಾರಿನಲ್ಲಿರುವ ಮುಳ್ಳಿನ ಪೊದೆಗಳ ಮಧ್ಯೆ ಎಸೆದು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾನೆ. ಯುವತಿಯ ಕುಟುಂಬದವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿರುವ ಗೋಕಾಕ ಶಹರ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.





















