SK Home Ad
Home ನಮ್ಮ ಜಿಲ್ಲೆ ಚಿತ್ರದುರ್ಗ ಧರ್ಮಪುರದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಭಾವುಕ ಭಾಷಣ: ಹಿರಿಯೂರು ಅಭಿವೃದ್ಧಿಗೆ ₹2,200 ಕೋಟಿ ಕೊಡುಗೆ!

ಧರ್ಮಪುರದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಭಾವುಕ ಭಾಷಣ: ಹಿರಿಯೂರು ಅಭಿವೃದ್ಧಿಗೆ ₹2,200 ಕೋಟಿ ಕೊಡುಗೆ!

0
31

ಚಿತ್ರದುರ್ಗ: ಹಿರಿಯೂರು ತಾಲೂಕಿನ ಧರ್ಮಪುರ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ತಮ್ಮ ಆಪ್ತ ಮಿತ್ರ ಡಿ.ಸುಧಾಕರ್ ಅವರನ್ನು ಸ್ಮರಿಸಿ ತೀವ್ರ ಭಾವುಕರಾದರು. ಸುಧಾಕರ್ ಅವರಿಗೆ ಯಾವುದೇ ಜಾತಿ, ಧರ್ಮದ ಭೇದಭಾವವಿರಲಿಲ್ಲ, ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಗುಣವಿತ್ತು ಎಂದು ಸ್ಮರಿಸಿದ ಸಿಎಂ, ಹಿರಿಯೂರು ಕ್ಷೇತ್ರದ ಅಭಿವೃದ್ಧಿಗೆ ಈಗಾಗಲೇ 2,200 ಕೋಟಿ ರೂಪಾಯಿ ಅನುದಾನ ಬಿಡುಗಡೆಗೆ ಆದೇಶ ಹೊರಡಿಸಲಾಗಿದೆ ಎಂದರು.

ರಾಜ್ಯದಲ್ಲಿ ಬಡವರಿಗಾಗಿ ೫ ಲಕ್ಷ ನಿವೇಶನ ಹಂಚಿಕೆ, ಪ್ರಜಾಸೇವೆ ಹಾಗೂ ಭೂಮಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಪ್ರಾಯೋಗಿಕವಾಗಿ ನೀರು ಹರಿಸಲಾಗಿದ್ದು, ಧರ್ಮಪುರ ಕೆರೆಗೆ ನೀರು ತುಂಬಿಸಿದ ಕೀರ್ತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ. ಹಿರಿಯೂರು ಕ್ಷೇತ್ರವು ತಮಗೆ ಕನಕಪುರದಷ್ಟೇ ಮುಖ್ಯವಾಗಿದ್ದು, ಕ್ಷೇತ್ರಕ್ಕೆ ಯಾವುದೇ ಹಣಕಾಸಿನ ಕೊರತೆ ಬರದಂತೆ ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದರು. ಇದೇ ವೇಳೆ, ಕೇಂದ್ರ ಸರ್ಕಾರ ಭದ್ರಾ ಯೋಜನೆಗೆ ಪ್ರಕಟಿಸಿದ್ದ 5,300 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿಲ್ಲ ಎಂದು ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಮುಂಬರುವ ಚುನಾವಣೆಯ ಅಭ್ಯರ್ಥಿ ಆಯ್ಕೆ ಕುರಿತು ಸ್ಪಷ್ಟನೆ ನೀಡಿದ ಸಿಎಂ, ತಾವು ಕೇವಲ ಕಾಂಗ್ರೆಸ್ ಅಧ್ಯಕ್ಷರಷ್ಟೇ ಅಲ್ಲದೆ, ಪ್ರತಿಯೊಂದು ಕ್ಷೇತ್ರದಲ್ಲಿ ಅಭ್ಯರ್ಥಿಯಿದ್ದಂತೆ ಕೆಲಸ ಮಾಡುತ್ತಿರುವುದಾಗಿ ಹೇಳಿದರು. ಈಗಾಗಲೇ ನಾಲ್ಕು ಬಾರಿ ಸಮೀಕ್ಷೆ ನಡೆಸಲಾಗಿದ್ದು, ಅರ್ಹ ಅಭ್ಯರ್ಥಿಯನ್ನೇ ಕಣಕ್ಕಿಳಿಸಲಾಗುವುದು. ಚನ್ನಪಟ್ಟಣ ಉಪಚುನಾವಣೆಯಲ್ಲಿ ಯೋಗೇಶ್ವರ್ ಗೆದ್ದು, ಜಂಟಿ ವಿಪಕ್ಷಗಳ ನಾಯಕರ ಮಕ್ಕಳು ಸೋತಿದ್ದನ್ನು ಉಲ್ಲೇಖಿಸಿದ ಅವರು, ಅಧಿಕಾರವಿದ್ದಾಗ ಕೆಲಸ ಮಾಡದವರು ಈಗೇನೂ ಮಾಡಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.