
ಅಂತ್ಯವಿಲ್ಲದ ಸ್ಕ್ರೋಲಿಂಗ್ಗೆ ಬ್ರೇಕ್: ಭಾರತಕ್ಕೆ ಕಾಲಿಟ್ಟ Google Dreambeans ಕನ್ನಡದಲ್ಲೂ ಲಭ್ಯವಿರುವ ಗೂಗಲ್ನ ‘Dreambeans’ ಆ್ಯಪ್ ಬಿಡುಗಡೆ!
ಬೆಂಗಳೂರು: ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳಿಗೆ ಹೆಸರುವಾಸಿಯಾಗಿರುವ ಗೂಗಲ್, ತನ್ನ Google Labs ವಿಭಾಗದ ಪ್ರಾಯೋಗಿಕ ಅಪ್ಲಿಕೇಶನ್ ಆದ Dreambeans ಅನ್ನು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ.
18 ವರ್ಷ ಮೇಲ್ಪಟ್ಟ ಭಾರತೀಯ ಬಳಕೆದಾರರು ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳಲ್ಲಿ ಈ ಆ್ಯಪ್ ಬಳಸಬಹುದಾಗಿದೆ. ಬಳಕೆದಾರರು ನಿರಂತರವಾಗಿ ಸಾಮಾಜಿಕ ಮಾಧ್ಯಮಗಳ ಫೀಡ್ಗಳನ್ನು ಸ್ಕ್ರಾಲ್ ಮಾಡುವ ಬದಲು, ಅವರ ಆಸಕ್ತಿ ಮತ್ತು ದೈನಂದಿನ ಚಟುವಟಿಕೆಗಳಿಗೆ ಸಂಬಂಧಿಸಿದ ವೈಯಕ್ತಿಕ ಕಥೆಗಳ ಸಂಗ್ರಹವನ್ನು ಪ್ರತಿದಿನ ಒದಗಿಸುವುದು ಈ ಆ್ಯಪ್ನ ಪ್ರಮುಖ ಉದ್ದೇಶವಾಗಿದೆ.
Dreambeans ಆ್ಯಪ್ ಹೇಗೆ ಕಾರ್ಯನಿರ್ವಹಿಸುತ್ತದೆ? : ಸಾಮಾನ್ಯವಾಗಿ ಬಳಕೆದಾರರು ತಮಗೆ ಬೇಕಾದ ಮಾಹಿತಿ ಪಡೆಯಲು ಪ್ರತ್ಯೇಕವಾಗಿ ಹುಡುಕಾಟ ನಡೆಸಬೇಕು ಅಥವಾ AI ಚಾಟ್ಬಾಟ್ಗಳಿಗೆ ಪ್ರಶ್ನೆಗಳನ್ನು ಕೇಳಬೇಕು. ಆದರೆ Dreambeans ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ. ಬಳಕೆದಾರರ ಅನುಮತಿಯೊಂದಿಗೆ ಅವರು ಆಯ್ಕೆ ಮಾಡಿಕೊಂಡಿರುವ ಗೂಗಲ್ ಸೇವೆಗಳಲ್ಲಿನ ಮಾಹಿತಿಯನ್ನು ಆಧರಿಸಿ, ಪ್ರತಿದಿನ ವೈಯಕ್ತಿಕ ಕಥೆಗಳ ಸಂಗ್ರಹವನ್ನು ಸಿದ್ಧಪಡಿಸುತ್ತದೆ.
ಇದಕ್ಕಾಗಿ Google Calendar, Gemini, Gmail, Google Photos, Google Search ಮತ್ತು YouTube ಸೇರಿದಂತೆ ವಿವಿಧ ಸೇವೆಗಳಿಂದ ಮಾಹಿತಿಯನ್ನು ಬಳಸಿಕೊಳ್ಳುತ್ತದೆ. ಉದಾಹರಣೆಗೆ, ಬಳಕೆದಾರರ ಕ್ಯಾಲೆಂಡರ್ನಲ್ಲಿರುವ ಮುಂಬರುವ ಕಾರ್ಯಕ್ರಮಗಳು, ಇಷ್ಟದ ವಿಷಯಗಳು, ಪ್ರವಾಸದ ಆಸಕ್ತಿ ಅಥವಾ ಸ್ಥಳೀಯ ಚಟುವಟಿಕೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಆಧರಿಸಿ ಹೊಸ ಸ್ಥಳಗಳ ಪರಿಚಯ, ಕಲೆ ಮತ್ತು ಕರಕುಶಲ ಚಟುವಟಿಕೆಗಳ ಸಲಹೆ ಹಾಗೂ ಸಮೀಪದಲ್ಲಿ ನಡೆಯಲಿರುವ ಕಾರ್ಯಕ್ರಮಗಳ ವಿವರಗಳನ್ನು ಕಥೆಗಳ ರೂಪದಲ್ಲಿ ನೀಡಬಹುದು.
ಪ್ರತಿ ಕಥೆಯನ್ನು ತೆರೆದು ಅದರ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದು. ಇಷ್ಟವಾದ ವಿಷಯಗಳನ್ನು ಮುಂದಿನ ಬಳಕೆಗಾಗಿ ಬುಕ್ಮಾರ್ಕ್ ಮಾಡಿಕೊಳ್ಳಬಹುದು ಅಥವಾ ಇತರರೊಂದಿಗೆ ಹಂಚಿಕೊಳ್ಳಬಹುದು. ಆ್ಯಪ್ ನೀಡುವ ಸಲಹೆಗಳು ಮತ್ತು ಕಥೆಗಳ ಕುರಿತು ಬಳಕೆದಾರರು ತಮ್ಮ ಅಭಿಪ್ರಾಯವನ್ನೂ ಹಂಚಿಕೊಳ್ಳಬಹುದು. ಇದರಿಂದ ಮುಂದಿನ ದಿನಗಳಲ್ಲಿ ದೊರೆಯುವ ಕಥೆಗಳನ್ನು ಇನ್ನಷ್ಟು ಪ್ರಸ್ತುತವಾಗಿಸಲು ನೆರವಾಗುತ್ತದೆ.
14 ಭಾಷೆಗಳಲ್ಲಿ ಬಳಕೆಗೆ ಅವಕಾಶ : ಭಾರತದ ಭಾಷಾ ವೈವಿಧ್ಯವನ್ನು ಗಮನದಲ್ಲಿಟ್ಟುಕೊಂಡು Dreambeans ಅನ್ನು ಒಟ್ಟು 14 ಭಾಷೆಗಳಲ್ಲಿ ಪರಿಚಯಿಸಲಾಗಿದೆ. ಕನ್ನಡ ಸೇರಿದಂತೆ ಹಿಂದಿ, ಬಂಗಾಳಿ, ತಮಿಳು, ತೆಲುಗು, ಮರಾಠಿ, ಉರ್ದು, ಗುಜರಾತಿ, ಇಂಗ್ಲೀಷ, ಮಲಯಾಳಂ, ಒಡಿಯಾ, ಪಂಜಾಬಿ, ಅಸ್ಸಾಮಿ ಮತ್ತು ನೇಪಾಳಿ ಭಾಷೆಗಳಲ್ಲಿ ಬಳಸಲು ಅವಕಾಶವಿದೆ. ಇದರಿಂದ ಕನ್ನಡದಲ್ಲಿಯೂ ವೈಯಕ್ತಿಕ ಕಥೆಗಳ ಸಂಗ್ರಹವನ್ನು ಪಡೆಯಬಹುದು.
ಆದರೆ ಸದ್ಯಕ್ಕೆ ಬಳಕೆದಾರರು ಕಥೆಗಳನ್ನು ರಚಿಸಲು ಒಂದು ಸಮಯದಲ್ಲಿ ಒಂದೇ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ವಿವಿಧ ಭಾಷೆಗಳಲ್ಲಿರುವ ಮಾಹಿತಿಯನ್ನು ಆ್ಯಪ್ ಪರಿಗಣಿಸಬಹುದಾದರೂ, ಒಂದೇ ಕಥೆಯಲ್ಲಿ ಎರಡು ಅಥವಾ ಹೆಚ್ಚಿನ ಭಾಷೆಗಳನ್ನು ಮಿಶ್ರಣ ಮಾಡುವ ಸೌಲಭ್ಯ ಸದ್ಯಕ್ಕೆ ಲಭ್ಯವಿಲ್ಲ ಎಂದು ವರದಿಗಳು ತಿಳಿಸಿವೆ.
ವೈಯಕ್ತಿಕ ಮಾಹಿತಿಯ ಗೌಪ್ಯತೆ ಹೇಗೆ? : Dreambeans ಬಳಕೆದಾರರ ವೈಯಕ್ತಿಕ ಗೂಗಲ್ ಸೇವೆಗಳ ಮಾಹಿತಿಯನ್ನು ಆಧರಿಸಿ ಕಾರ್ಯನಿರ್ವಹಿಸುವುದರಿಂದ ಗೌಪ್ಯತೆಯ ವಿಚಾರವೂ ಮುಖ್ಯವಾಗುತ್ತದೆ. ಬಳಕೆದಾರರು ಯಾವ ಗೂಗಲ್ ಸೇವೆಗಳಿಗೆ ಆ್ಯಪ್ ಪ್ರವೇಶ ನೀಡಬೇಕು ಎಂಬುದನ್ನು ತಾವೇ ಆಯ್ಕೆ ಮಾಡಿಕೊಳ್ಳಬಹುದು. ಅಗತ್ಯವಿದ್ದಾಗ ಸಂಪರ್ಕಿತ ಸೇವೆಗಳ ಪ್ರವೇಶವನ್ನು ಕಡಿತಗೊಳಿಸುವ ಹಾಗೂ ಆ್ಯಪ್ನಲ್ಲಿರುವ ತಮ್ಮ ವೈಯಕ್ತಿಕ ಡೇಟಾವನ್ನು ಅಳಿಸುವ ಆಯ್ಕೆಯೂ ಇದೆ ಎಂದು ಗೂಗಲ್ ತಿಳಿಸಿದೆ.
ಹೀಗಾಗಿ ಆ್ಯಪ್ ಬಳಸುವ ಮೊದಲು ಯಾವ ಮಾಹಿತಿಗೆ ಪ್ರವೇಶ ನೀಡಲಾಗುತ್ತಿದೆ ಎಂಬುದನ್ನು ಗಮನಿಸುವುದು ಸೂಕ್ತ. ವಿಶೇಷವಾಗಿ Gmail, Photos ಮತ್ತು Calendarನಂತಹ ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿರುವ ಸೇವೆಗಳನ್ನು ಸಂಪರ್ಕಿಸುವಾಗ ಬಳಕೆದಾರರು ತಮ್ಮ ಗೌಪ್ಯತಾ ಆದ್ಯತೆಗಳನ್ನು ಪರಿಶೀಲಿಸಬೇಕು.
ಭಾರತವೇ ಮೊದಲ ಅಂತಾರಾಷ್ಟ್ರೀಯ ಮಾರುಕಟ್ಟೆ : ಗೂಗಲ್ 2026ರ ಜೂನ್ನಲ್ಲಿ ಅಮೆರಿಕದಲ್ಲಿ Dreambeans ಅನ್ನು ಪ್ರಾಯೋಗಿಕವಾಗಿ ಪರಿಚಯಿಸಿತ್ತು. ಆರಂಭದಲ್ಲಿ ಸೀಮಿತ ಬಳಕೆದಾರರಿಗೆ ಲಭ್ಯವಿದ್ದ ಈ ಸೇವೆಯನ್ನು ಸೆಪ್ಟೆಂಬರ್ನಲ್ಲಿ ಅಮೆರಿಕದ ಅರ್ಹ ವಯಸ್ಕ ಬಳಕೆದಾರರಿಗೆ ವಿಸ್ತರಿಸಲಾಗಿತ್ತು. ಇದೀಗ ಭಾರತವು ಅಮೆರಿಕದ ಹೊರಗೆ ಈ ಆ್ಯಪ್ ಲಭ್ಯವಾಗುತ್ತಿರುವ ಮೊದಲ ಅಂತಾರಾಷ್ಟ್ರೀಯ ಮಾರುಕಟ್ಟೆಯಾಗಿದೆ.
ಪ್ರಸ್ತುತ Dreambeans ಆ್ಯಪ್ ಆಂಡ್ರಾಯ್ಡ್ ಮತ್ತು ಐಒಎಸ್ ಎರಡೂ ವೇದಿಕೆಗಳಲ್ಲಿ 18 ವರ್ಷ ಮೇಲ್ಪಟ್ಟ ಭಾರತೀಯ ಬಳಕೆದಾರರಿಗೆ ಲಭ್ಯವಿದೆ. ವೈಯಕ್ತಿಕ Google ಖಾತೆಯ ಮೂಲಕ ಪ್ರವೇಶಿಸಿ, ತಮಗೆ ಬೇಕಾದ ಸೇವೆಗಳನ್ನು ಆಯ್ಕೆ ಮಾಡಿಕೊಂಡು ಬಳಸಬಹುದು. ಸಾಮಾನ್ಯ AI ಚಾಟ್ಬಾಟ್ನಂತೆ ಪ್ರಶ್ನೆಗಳಿಗೆ ಉತ್ತರಿಸುವುದಕ್ಕಿಂತ, ಬಳಕೆದಾರರ ಆಸಕ್ತಿ ಮತ್ತು ದಿನನಿತ್ಯದ ಬದುಕಿಗೆ ಸಂಬಂಧಿಸಿದ ವಿಷಯಗಳನ್ನು ಮುಂಚಿತವಾಗಿಯೇ ಕಥೆಗಳ ರೂಪದಲ್ಲಿ ಪರಿಚಯಿಸುವ ಪ್ರಯೋಗ ಇದಾಗಿದೆ.
- ಅರವಿಂದ್ ಅಡಿಗ ಕಾದಂಬರಿ ಆಧಾರಿತ ‘ಲಾಸ್ಟ್ ಮ್ಯಾನ್ ಇನ್ ಟವರ್’ ಈ ವಾರ OTTಯಲ್ಲಿ!
- ಹಾಲಿನ ದರ ಏರಿಕೆ ಖಂಡಿಸಿ ಬ್ಲಾಕ್ ಟೀ ಪ್ರತಿಭಟನೆ
- ಹೋಂಡಾದಿಂದ ಹೊಸ EV ಅಧ್ಯಾಯ: ‘SUV ಆಲ್ಫಾ’ ಜಾಗತಿಕ ಅನಾವರಣಕ್ಕೆ ದಿನಾಂಕ ನಿಗದಿ!
- ಧರ್ಮಪುರದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಭಾವುಕ ಭಾಷಣ: ಹಿರಿಯೂರು ಅಭಿವೃದ್ಧಿಗೆ ₹2,200 ಕೋಟಿ ಕೊಡುಗೆ!
- ದಿವಂಗತ ಡಿ. ಸುಧಾಕರ್ರನ್ನು ಸ್ಮರಿಸಿ ಭಾವುಕರಾದ ಸಿಎಂ ಡಿ.ಕೆ. ಶಿವಕುಮಾರ್



















