SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಕಾಂಗ್ರೆಸ್‌ನಿಂದ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಯತ್ನ

ಕಾಂಗ್ರೆಸ್‌ನಿಂದ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಯತ್ನ

0
66

ದಾವಣಗೆರೆ: ದೇಶದಲ್ಲಿ ಸಂವಿಧಾನ ಬಾಹಿರ ಹಾಗೂ ಕಾನೂನು ಬಾಹಿರ ಚಟುವಟಿಕೆಗಳ ಮೂಲಕ ಅಶಾಂತಿ ಮತ್ತು ಹಿಂಸೆಯನ್ನು ಪ್ರಚೋದಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಸ್ಥಿರಗೊಳಿಸಲು ಕಾಂಗ್ರೆಸ್ ಪಕ್ಷ ಹಾಗೂ ಅದರ ನಾಯಕರು ಪ್ರಯತ್ನಿಸುತ್ತಿದ್ದಾರೆ ಎಂದು ಕಾರವಾರ ಸಂಸದ, ಮಾಜಿ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಸದೃಢವಾಗಿದ್ದು, ಜನರು ಜಾಗೃತರಾಗಿದ್ದಾರೆ. ಆದರೆ ಅಧಿಕಾರ ಕಳೆದುಕೊಂಡ ಹತಾಶೆಯಿಂದ ಕಾಂಗ್ರೆಸ್ ದೇಶದ ಹಿತಾಸಕ್ತಿಗೆ ಧಕ್ಕೆ ತರುವಂತಹ ಚಟುವಟಿಕೆಗಳಲ್ಲಿ ತೊಡಗಿದೆ ಎಂದು ದೂರಿದರು.

ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಆಶಯಗಳನ್ನು ಈಡೇರಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಆದರೆ ಕಾಂಗ್ರೆಸ್ ಪಕ್ಷದ ನಾಯಕರು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಕೆಲವು ನಾಯಕರು ವಿದೇಶಿ ಶಕ್ತಿಗಳ ಪ್ರಭಾವಕ್ಕೆ ಒಳಗಾಗಿ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಇವಿಎಂ, ಚುನಾವಣಾ ಆಯೋಗ, ಸುಪ್ರೀಂ ಕೋರ್ಟ್, ಸಿಬಿಐ ಸೇರಿದಂತೆ ಸಂವಿಧಾನಬದ್ಧ ಸಂಸ್ಥೆಗಳ ಬಗ್ಗೆ ಜನರಲ್ಲಿ ಅಪನಂಬಿಕೆ ಮೂಡಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಚುನಾವಣೆಯಲ್ಲಿ ಸೋತಾಗ ಇವಿಎಂ ದೋಷಪೂರಿತ ಎಂದು ಆರೋಪಿಸುವ ಕಾಂಗ್ರೆಸ್ ನಾಯಕರು, ತಾವು ಗೆದ್ದಾಗ ಅದೇ ಇವಿಎಂ ವ್ಯವಸ್ಥೆಯನ್ನು ಸಮರ್ಥಿಸಿಕೊಳ್ಳುತ್ತಾರೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ದೇಶದಲ್ಲಿ ಕಾನೂನುಬದ್ಧವಾಗಿ ಹೋರಾಟ ನಡೆಸಲು ಮತ್ತು ಸಂವಿಧಾನಾತ್ಮಕವಾಗಿ ಧ್ವನಿ ಎತ್ತಲು ಅವಕಾಶವಿದೆ. ಕಾಂಗ್ರೆಸ್‌ಗೆ ಯಾವುದೇ ಅನ್ಯಾಯವಾಗಿದ್ದರೆ ಸುಪ್ರೀಂ ಕೋರ್ಟ್ ಅಥವಾ ಚುನಾವಣಾ ಆಯೋಗದ ಮೊರೆ ಹೋಗಬಹುದು. ಆದರೆ ಸೂಕ್ತ ದಾಖಲೆಗಳಿಲ್ಲದೆ ‘ವೋಟ್ ಚೋರಿ’ ಹಾಗೂ ಎಸ್‌ಐಆರ್ ಪ್ರಕ್ರಿಯೆ ಸರಿಯಿಲ್ಲ ಎಂದು ಆರೋಪಿಸುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸಲಾಗುತ್ತಿದೆ. ಸುಪ್ರೀಂ ಕೋರ್ಟ್ ಹಾಗೂ ಪ್ರಧಾನಮಂತ್ರಿಯವರ ನಿವಾಸದ ಎದುರು ಧರಣಿ, ಮೆರವಣಿಗೆ ನಡೆಸುವುದು ಪ್ರಜಾಪ್ರಭುತ್ವದ ನಿಯಮಾವಳಿಗಳಿಗೆ ವಿರುದ್ಧವಾಗಿದೆ ಎಂದು ಟೀಕಿಸಿದರು.

ಮತದಾರರ ಪಟ್ಟಿ ಪರಿಷ್ಕರಣೆ ನಿರಂತರ ಪ್ರಕ್ರಿಯೆಯಾಗಿದ್ದು, ಮೃತಪಟ್ಟವರು, ಶಾಶ್ವತವಾಗಿ ಸ್ಥಳಾಂತರಗೊಂಡವರು ಹಾಗೂ ಒಂದಕ್ಕಿಂತ ಹೆಚ್ಚು ಕಡೆ ಹೆಸರು ಹೊಂದಿರುವವರ ಹೆಸರುಗಳನ್ನು ತೆಗೆದುಹಾಕುವುದು ಸಹಜ. ನೈಜ ಮತದಾರರ ಹೆಸರು ಬಿಟ್ಟುಹೋಗಿದ್ದರೆ ಅದನ್ನು ಮರುಸೇರ್ಪಡೆ ಅಥವಾ ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶವಿದೆ. ದಾವಣಗೆರೆಯಲ್ಲಿ ಮತಗಳ್ಳತನ ನಡೆದಿದೆ ಎಂದು ಆರೋಪಿಸುವ ಕಾಂಗ್ರೆಸ್ ನಾಯಕರು, ಮತದಾನದ ಹಕ್ಕು ಕಳೆದುಕೊಂಡಿರುವ ಒಬ್ಬನೇ ಒಬ್ಬ ಮತದಾರನನ್ನಾದರೂ ಮಾಧ್ಯಮಗಳ ಮುಂದೆ ಹಾಜರುಪಡಿಸಲಿ ಎಂದು ಸವಾಲು ಹಾಕಿದರು.

ವಿದೇಶಿ ಶಕ್ತಿಗಳ ಸಂಚಿನ ಆರೋಪ: ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ ಹಾಗೂ ಫ್ರಾನ್ಸ್ ಸೇರಿದಂತೆ ವಿವಿಧ ದೇಶಗಳಲ್ಲಿ ಆಡಳಿತ ವ್ಯವಸ್ಥೆಯನ್ನು ಅಸ್ಥಿರಗೊಳಿಸಿದ ರೀತಿಯಲ್ಲೇ ಭಾರತದಲ್ಲಿಯೂ ಅಶಾಂತಿ ಸೃಷ್ಟಿಸಲು ವಿದೇಶಿ ಶಕ್ತಿಗಳು ಪ್ರಯತ್ನಿಸುತ್ತಿವೆ ಎಂದು ಕಾಗೇರಿ ಆರೋಪಿಸಿದರು.

ಜಾಗತಿಕ ಮಟ್ಟದಲ್ಲಿ ಭಾರತ ಸ್ವಾವಲಂಬನೆ, ತಂತ್ರಜ್ಞಾನ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುತ್ತಿರುವುದನ್ನು ಸಹಿಸದ ಕೆಲವು ದೇಶಗಳು ಇಂತಹ ಸಂಚು ರೂಪಿಸುತ್ತಿವೆ. ಇದಕ್ಕೆ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಪಕ್ಷಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂಬುದು ಅವರ ಆರೋಪವಾಗಿತ್ತು.

ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ 2047ರ ವೇಳೆಗೆ ವಿಕಸಿತ ಭಾರತ ನಿರ್ಮಿಸುವ ಸಂಕಲ್ಪವನ್ನು ಸಾಕಾರಗೊಳಿಸಲು ಬಿಜೆಪಿ ಮುಂದಾಗಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಜಾಗೃತಿ ಮೆರವಣಿಗೆಗಳು, ಪ್ರಬುದ್ಧರ ಸಭೆಗಳು ಹಾಗೂ ಯುವಜನರೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.