ರಬಕವಿ–ಬನಹಟ್ಟಿ: ಕಬ್ಬು ಬೆಳೆಗಾರರಿಗೆ ಪ್ರತಿ ಟನ್ಗೆ ₹5,500 ಬೆಲೆ ನಿಗದಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸೇರಿದಂತೆ ರೈತ ಸಂಘಟನೆಗಳು ಶನಿವಾರ ಕರೆ ನೀಡಿರುವ ಸ್ವಯಂಪ್ರೇರಿತ ಕರ್ನಾಟಕ ಬಂದ್ಗೆ ರಬಕವಿ–ಬನಹಟ್ಟಿ ಭಾಗದಲ್ಲಿ ಬೆಳಿಗ್ಗೆ 4 ಗಂಟೆಯಿಂದಲೇ ಚಾಲನೆ ದೊರೆತಿದೆ.
ಕಬ್ಬು ಬೆಳೆಗಾರರ ಹಿತ ಕಾಯುವ ನಿಟ್ಟಿನಲ್ಲಿ ರೈತರು ಬಂದ್ಗೆ ಕರೆ ನೀಡಿದ್ದು, ರಬಕವಿ–ಬನಹಟ್ಟಿ ನಗರದಲ್ಲಿ ಬಂದ್ ಆಚರಿಸಲಾಗುತ್ತಿದೆ. ಜಮಖಂಡಿ–ಕುಡಚಿ ರಾಜ್ಯ ಹೆದ್ದಾರಿಯಲ್ಲಿ ಟ್ರ್ಯಾಕ್ಟರ್ಗಳನ್ನು ನಿಲ್ಲಿಸಿ ರಸ್ತೆ ತಡೆ ನಡೆಸುವ ಮೂಲಕ ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
₹5,500 ಬೆಲೆಗೆ ರೈತರ ಪಟ್ಟು: ಪ್ರತಿ ಟನ್ ಕಬ್ಬಿಗೆ ಸಕ್ಕರೆ ಕಾರ್ಖಾನೆಗಳಿಂದ ₹4,500 ಹಾಗೂ ರಾಜ್ಯ ಸರ್ಕಾರದಿಂದ ₹1,000 ಪ್ರೋತ್ಸಾಹಧನ ಸೇರಿ ಒಟ್ಟು ₹5,500 ನೀಡಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿದೆ. ಕಬ್ಬಿನ ತೂಕದಲ್ಲಿ ನಡೆಯುವ ಮೋಸ, ಕಳೆ ಹಾಗೂ ಮಣ್ಣಿನ ಹೆಸರಿನಲ್ಲಿ ಮಾಡುವ ಅನಗತ್ಯ ಕಡಿತಕ್ಕೆ ಕಡಿವಾಣ ಹಾಕಬೇಕು. ಎಂ.ಎಸ್. ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಅನುಷ್ಠಾನಕ್ಕೆ ಒತ್ತಾಯಿಸಿ ಬಿರುಸಿನ ತಡೆ ನಡೆಸಿದ್ದಾರೆ.





















