SK Home Ad
Home ನಮ್ಮ ಜಿಲ್ಲೆ ಬಾಗಲಕೋಟೆ ಬಾರಕೋಲು ಜಡಿದು ಹುಬ್ಬಳ್ಳಿಯತ್ತ ರೈತರ ಪಾದಯಾತ್ರೆ

ಬಾರಕೋಲು ಜಡಿದು ಹುಬ್ಬಳ್ಳಿಯತ್ತ ರೈತರ ಪಾದಯಾತ್ರೆ

0
61

ಬಾಗಲಕೋಟೆ: ರೈತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲವಾಗಿ ಇಂದು ಸುತ್ತ ಗ್ರಾಮದ ಸಾವಿರಾರು ರೈತರು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಜಮಾಯಿಸಿ ಬಾರಕೋಲು ಜಡಿಯುವ ಮೂಲಕ ಒಗ್ಗಟ್ಟನ್ನು ಪ್ರದರ್ಶಿಸಿ ರಾಷ್ಟ್ರೀಯ ಹೆದ್ದಾರಿ 218ರ ಮೂಲಕ ಹುಬ್ಬಳ್ಳಿ ಕಡೆಗೆ ಪಾದಯಾತ್ರೆ ಪ್ರಾರಂಭಿಸಿದರು.

ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಮಾರ್ಗದರ್ಶನದಲ್ಲಿ ಇಂದು ಈ ಪಾದಯಾತ್ರೆ ಪ್ರಾರಂಭವಾಗಿದೆ. 82 ಕಿಮೀ ಹುಬ್ಬಳ್ಳಿ ತಲುಪುವವರೆಗೂ ಪಾದಯಾತ್ರೆ ನಡೆಯಲಿದೆ. ಬಾಗಲಕೋಟೆ ಜಿಲ್ಲೆಯಿಂದ ಪಾದಯಾತ್ರೆ ಪ್ರಾರಂಭವಾಗಿದ್ದು ಮದ್ಯದಲ್ಲಿ ಬರುವ ನರಗುಂದ, ನವಲಗುಂದ ತಾಲೂಕು ಸೇರಿದಂತೆ ಗ್ರಾಮ/ಪಟ್ಟಣಗಳಿಂದ ಸಹಸ್ರಾರು ರೈತರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರವಿವಾರ ರಾತ್ರಿ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ವಾಸ್ತವ್ಯ ಮಾಡಿ ನಾಳೆ ಸೋಮವಾರ ಮತ್ತೆ ಪಾದಯಾತ್ರೆ ಪ್ರಾರಂಭಗೊಳ್ಳಲಿದೆ ಎಂದು ರೈತ ಮುಖಂಡರು ತಿಳಿಸಿದರು.

ನಾವು ಹುಬ್ಬಳ್ಳಿ ತಲುವ ಮೊದಲೇ ನಮ್ಮ ರೈತರ ಬೇಡಿಕೆ ಈಡೇರಿಸಿದರೆ ಜೋಶಿಯವರಿಗೆ ಬನ್ನಿ ಕೊಟ್ಟು ಬಂಗಾರದಂಗ ಇರೋಣ ಅಂತ ದಸರಾ ಹಬ್ಬದ ಶುಭಾಶಯ ಕೋರುತ್ತೇವೆ. ಇಲ್ಲದಿದ್ದರೆ ಬೇರೆ ರೀತಿ ಶುಭ ಹಾರೈಕೆ ಹೇಳಿ ಮತ್ತೆ ನಮ್ಮ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಬಾರಕೋಲು ಜಡಿದು ಹಸಿರು ಶಾಲು ಬೀಸಿ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಪಾದಯಾತ್ರೆ ಪ್ರಾರಂಭದಲ್ಲಿ ರೈತರೊಂದಿಗೆ ಗ್ರಾಮಸ್ಥರು ವ್ಯಾಪಾರಸ್ಥರು ಬೆಂಬಲ ಸೂಚಿಸಿದರು. ಬಾಗಲಕೋಟೆ ಜಿಲ್ಲೆ ಗಡಿಭಾಗ ಮಲಪ್ರಭಾ ನದಿ ದಾಟುವವರೆಗೂ ಪೊಲೀಸರು ಇದ್ದರು.