ಕಾರವಾರ: ರಾಜ್ಯದ ಸಾಂಸ್ಕೃತಿಕ ಹಿರಿಮೆಯನ್ನು ಪ್ರತಿಬಿಂಬಿಸುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಆಯ್ಕೆಯಲ್ಲೂ ಉತ್ತರ ಕನ್ನಡ ಜಿಲ್ಲೆಗೆ ಅನ್ಯಾಯವಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.
ಕಲೆ, ಸಾಹಿತ್ಯ, ಯಕ್ಷಗಾನ, ಜಾನಪದ, ರಂಗಭೂಮಿ, ಸಮಾಜಸೇವೆ, ಪರಿಸರ ಸಂರಕ್ಷಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿರುವ ಜಿಲ್ಲೆಯ ಅರ್ಹರನ್ನು ಗುರುತಿಸುವಲ್ಲಿ ಸರ್ಕಾರ ವಿಫಲವಾಗಿರುವುದಲ್ಲದೆ, ಹೊರ ಜಿಲ್ಲೆಯ ಸಾಧಕರನ್ನು ಉತ್ತರಕನ್ನಡದ ಸಾಧಕರೆಂದು ಗುರುತಿಸಿರುವುದು ವಿವಾದಕ್ಕೆ ಕಾರಣವಾಗಿದೆ.
2026ನೇ ಸಾಲಿನ 71ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳನ್ನು ಸರ್ಕಾರ ಘೋಷಿಸಿದ್ದು, ಈ ಪಟ್ಟಿಯಲ್ಲಿ ಉತ್ತರಕನ್ನಡ ಜಿಲ್ಲೆಯ ಮೂಲದ ಅರ್ಹ ಸಾಧಕರಿಗೆ ಪ್ರಾತಿನಿಧ್ಯ ದೊರೆತಿಲ್ಲ ಎಂಬ ಅಸಮಾಧಾನ ಕೇಳಿಬಂದಿದೆ. ಜಿಲ್ಲೆಯಲ್ಲಿಯೇ ಹಲವು ದಶಕಗಳಿಂದ ವಿವಿಧ ಕ್ಷೇತ್ರಗಳಲ್ಲಿ ಸದ್ದಿಲ್ಲದೆ ಸೇವೆ ಸಲ್ಲಿಸುತ್ತಿರುವ ಸಾಧಕರಿದ್ದರೂ, ಅವರ ಸಾಧನೆಯನ್ನು ಗುರುತಿಸುವ ಪ್ರಯತ್ನವಾಗಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಪ್ರಶಸ್ತಿ ಆಯ್ಕೆಯಲ್ಲಿ ಜಿಲ್ಲೆಯ ಸಾಧಕರನ್ನು ಕಡೆಗಣಿಸಿರುವುದರ ಜತೆಗೆ, ಜಿಲ್ಲೆಯ ಹಿನ್ನೆಲೆಯೇ ಇಲ್ಲದ ವ್ಯಕ್ತಿಯೊಬ್ಬರನ್ನು ಜಿಲ್ಲೆಯ ಹೆಸರಿನಲ್ಲಿ ಗುರುತಿಸಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.
ಹೊರ ಜಿಲ್ಲೆಯ ಸಾಧಕರಿಗೆ ಉತ್ತರ ಕನ್ನಡದ ಹಣೆಪಟ್ಟಿ: ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಆದರ್ಶ ಚಾರಿಟೆಬಲ್ ಟ್ರಸ್ಟ್ನ ಡಾ.ಜಿ.ಎಸ್. ಚಂದ್ರಶೇಖರ್ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದೆ. ಆದರೆ, ಮೂಲತಃ ಚಿಕ್ಕಮಗಳೂರಿನವರಾಗಿದ್ದು, ಪ್ರಸ್ತುತ ಉಡುಪಿಯಲ್ಲಿ ನೆಲೆಸಿರುವ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಸಾಧಕರೆಂದು ಗುರುತಿಸಿರುವುದು ಸ್ಥಳೀಯ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಜಿಲ್ಲೆಯವರೇ ಆದ ಅನೇಕ ಸಾಧಕರನ್ನು ಗುರುತಿಸುವಲ್ಲಿ ವಿಫಲವಾಗಿರುವ ಸರ್ಕಾರ, ಹೊರ ಜಿಲ್ಲೆಯ ಸಾಧಕರೊಬ್ಬರನ್ನು ಉತ್ತರ ಕನ್ನಡದ ಹೆಸರಿನಲ್ಲಿ ಗುರುತಿಸಿರುವುದು ಯಾವ ಮಾನದಂಡದ ಆಧಾರದಲ್ಲಿ ಎಂಬ ಪ್ರಶ್ನೆ ಎದುರಾಗಿದೆ. ಪ್ರಶಸ್ತಿ ಆಯ್ಕೆ ವೇಳೆ ಸಾಧಕರ ಮೂಲ, ಕಾರ್ಯಕ್ಷೇತ್ರ ಹಾಗೂ ಜಿಲ್ಲೆಯೊಂದಿಗಿನ ಅವರ ಸಂಬಂಧವನ್ನು ಸಮರ್ಪಕವಾಗಿ ಪರಿಶೀಲಿಸಲಾಗಿದೆಯೇ ಎಂಬ ಅನುಮಾನವೂ ಮೂಡಿದೆ. ಜಿಲ್ಲೆಯ ಸಾಧಕರಿಗೆ ಪ್ರಶಸ್ತಿ ನೀಡದಿರುವುದಕ್ಕಿಂತಲೂ, ಬೇರೆ ಜಿಲ್ಲೆಯ ವ್ಯಕ್ತಿಯನ್ನು ಉತ್ತರ ಕನ್ನಡದ ಸಾಧಕರೆಂದು ಗುರುತಿಸಿರುವುದು ಆಯ್ಕೆ ಪ್ರಕ್ರಿಯೆಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಾಗಿದೆ ಎಂಬ ಅಭಿಪ್ರಾಯವ್ಯಕ್ತವಾಗಿದೆ.
ಆಯ್ಕೆ ಸಮಿತಿಯ ಕಣ್ಣಿಗೆ ಜಿಲ್ಲೆಯ ಸಾಧಕರು ಕಾಣಿಸಲಿಲ್ಲವೇ?: ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲು ಉನ್ನತ ಮಟ್ಟದ ಸಮಿತಿ ರಚಿಸಲಾಗಿತ್ತು. ವಿವಿಧ ಕ್ಷೇತ್ರಗಳ ಪ್ರತಿನಿಧಿಗಳನ್ನೂ ಸಮಿತಿಯಲ್ಲಿ ಸೇರ್ಪಡೆಗೊಳಿಸಲಾಗಿತ್ತು. ಇಷ್ಟೆಲ್ಲ ವ್ಯವಸ್ಥೆಗಳಿದ್ದರೂ ಉತ್ತರ ಕನ್ನಡ ಜಿಲ್ಲೆಯ ಸಾಧಕರಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸಲು ಸಾಧ್ಯವಾಗದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಪ್ರಚಾರದ ಹಂಬಲವಿಲ್ಲದೆ ಕಲೆ, ಸಾಹಿತ್ಯ, ಜನಪದ, ಸಾಮಾಜಿಕ ಸೇವೆ ಹಾಗೂ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಅನೇಕರು ಇದ್ದಾರೆ. ಅವರ ಸಾಧನೆಗಳನ್ನು ಗುರುತಿಸಿ ಸರ್ಕಾರದ ಗಮನಕ್ಕೆ ತರುವ ಜವಾಬ್ದಾರಿ ಸಂಬಂಧಪಟ್ಟ ಇಲಾಖೆಗಳ ಮೇಲಿದೆ. ಆದರೆ, ಜಿಲ್ಲಾ ಮಟ್ಟದಲ್ಲಿ ಅರ್ಹರ ಮಾಹಿತಿ ಸಂಗ್ರಹಿಸಿ, ಅವರ ಸಾಧನೆಗಳನ್ನು ಪರಿಶೀಲಿಸಿ ಶಿಫಾರಸ್ಸು ಮಾಡುವ ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸಿದೆಯೇ ಎಂಬ ಪ್ರಶ್ನೆ ಇದೀಗ ಮುನ್ನೆಲೆಗೆ ಬಂದಿದೆ.
ಸಾಂಸ್ಕೃತಿಕ ಪ್ರಾತಿನಿಧ್ಯದಲ್ಲೂ ನಿರಂತರ ನಿರ್ಲಕ್ಷ್ಯ?: ರಾಜ್ಯೋತ್ಸವ ಪ್ರಶಸ್ತಿ ವಿಚಾರವೊಂದೇ ಅಲ್ಲದೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿವಿಧ ಅಕಾಡೆಮಿ ಹಾಗೂ ಪ್ರಾಧಿಕಾರಗಳ ಅಧ್ಯಕ್ಷರ ನೇಮಕಾತಿ, ಸಾಂಸ್ಕೃತಿಕ ಅನುದಾನ ಹಂಚಿಕೆ ಮತ್ತು ರಾಜ್ಯ ಮಟ್ಟದ ಗೌರವಗಳ ವಿಚಾರದಲ್ಲಿಯೂ ಉತ್ತರ ಕನ್ನಡ ಜಿಲ್ಲೆಗೆ ನಿರೀಕ್ಷಿತ ಪ್ರಾತಿನಿಧ್ಯ ದೊರೆಯುತ್ತಿಲ್ಲ ಎಂಬ ಅಸಮಾಧಾನ ಹಿಂದಿನಿಂದಲೂ ಇದೆ. ಕರಾವಳಿ ಮತ್ತು ಮಲೆನಾಡಿನ ವಿಶಿಷ್ಟ ಸಾಂಸ್ಕೃತಿಕ ಪರಂಪರೆ ಹೊಂದಿರುವ ಉತ್ತರ ಕನ್ನಡ ಜಿಲ್ಲೆ ಯಕ್ಷಗಾನ, ಜನಪದ ಕಲೆ, ಸಾಹಿತ್ಯ, ಸಂಗೀತ, ರಂಗಭೂಮಿ ಹಾಗೂ ಪರಿಸರ ಸಂರಕ್ಷಣೆಯ ಕ್ಷೇತ್ರಗಳಿಗೆ ಮಹತ್ವದ ಕೊಡುಗೆ ನೀಡಿದೆ. ವಿಭಿನ್ನ ಭಾಷಾ ಸೊಗಡು, ಸಂಪ್ರದಾಯ, ಕಲಾಪ್ರಕಾರ ಹಾಗೂ ಸಾಮಾಜಿಕ ಚಟುವಟಿಕೆಗಳಿಂದ ಗುರುತಿಸಿಕೊಂಡಿರುವ ಜಿಲ್ಲೆಯಲ್ಲಿ ರಾಜ್ಯ ಮಟ್ಟದಲ್ಲಿ ಗೌರವಿಸಬಹುದಾದ ಸಾಧಕರಿಗೆ ಕೊರತೆಯಿಲ್ಲ. ಆದರೆ, ಜಿಲ್ಲೆಯ ನೈಸರ್ಗಿಕ ಸಂಪನ್ಮೂಲಗಳು, ಬಂದರು, ಅರಣ್ಯ ಹಾಗೂ ಅಭಿವೃದ್ಧಿ ಯೋಜನೆಗಳ ವಿಚಾರ ಬಂದಾಗ ರಾಜ್ಯದ ಗಮನ ಸೆಳೆಯುವ ಜಿಲ್ಲೆ, ಸಾಂಸ್ಕೃತಿಕ ಗೌರವ ಮತ್ತು ಪ್ರಾತಿನಿಧ್ಯದ ವಿಷಯದಲ್ಲಿ ಮಾತ್ರ ಹಿಂದುಳಿಯುತ್ತಿರುವುದು ವಿಪರ್ಯಾಸ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಜನಪ್ರತಿನಿಧಿಗಳ ಮೌನವೂ ಚರ್ಚೆಗೆ ಗ್ರಾಸ: ಜಿಲ್ಲೆಯ ಅರ್ಹ ಸಾಧಕರಿಗೆ ರಾಜ್ಯ ಮಟ್ಟದ ಗೌರವ ದೊರಕಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹೇರುವ ಅಗತ್ಯವಿತ್ತು. ಆದರೆ, ಆಡಳಿತಾರೂಢ ಪಕ್ಷದ ಶಾಸಕರು ಈ ವಿಚಾರದಲ್ಲಿ ಸರ್ಕಾರದ ಗಮನ ಸೆಳೆಯುವಲ್ಲಿ ವಿಫಲರಾಗಿದ್ದಾರೆ ಎಂಬ ಟೀಕೆಗಳೂ ಕೇಳಿಬಂದಿವೆ. ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯಲ್ಲಿ ಜಿಲ್ಲೆಯ ಸಾಧಕರಿಗೆ ಆಗಿರುವ ಅನ್ಯಾಯದ ವಿರುದ್ಧ ಜಿಲ್ಲೆಯ ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ಧ್ವನಿ ಎತ್ತಬೇಕಾಗಿದೆ.
ಒಟ್ಟಿನಲ್ಲಿ, ಪ್ರಶಸ್ತಿ ಘೋಷಣೆಯೊಂದಿಗೆ ಮುಗಿಯಬೇಕಿದ್ದ ಸಂಭ್ರಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಡೆಗಣನೆಯ ಚರ್ಚೆಗೆ ಕಾರಣವಾಗಿದೆ. ಜಿಲ್ಲೆಯ ಸಾಧಕರನ್ನು ಗುರುತಿಸಿ ಗೌರವಿಸುವ ಬದಲು, ಹೊರ ಜಿಲ್ಲೆಯ ವ್ಯಕ್ತಿಗೆ ಜಿಲ್ಲೆಯ ಹೆಸರಿನಲ್ಲಿ ಮನ್ನಣೆ ನೀಡಿರುವ ಆರೋಪಕ್ಕೆ ಸರ್ಕಾರ ಸ್ಪಷ್ಟನೆ ನೀಡಬೇಕಿದೆ. ಮುಂದಿನ ದಿನಗಳಲ್ಲಾದರೂ ಜಿಲ್ಲೆಯ ಸಾಂಸ್ಕೃತಿಕ ಅಸ್ಮಿತೆ ಮತ್ತು ಸಾಧಕರ ಕೊಡುಗೆಗೆ ಸೂಕ್ತ ಮಾನ್ಯತೆ ದೊರೆಯಲಿದೆಯೇ ಎಂಬುದು ಈಗಿನ ಪ್ರಶ್ನೆ.
ಮಾಜಿ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, “ಜಿಲ್ಲೆಯಲ್ಲಿ ಗಣನೀಯ ಸಾಧನೆ ಮಾಡಿರುವ ಅನೇಕ ಅರ್ಹರಿದ್ದರೂ, ಜಿಲ್ಲೆಯ ಯಾರಿಗೂ ಪ್ರಶಸ್ತಿ ನೀಡದೆ ವಂಚಿಸಿರುವುದು ಖಂಡನೀಯ. ಜಿಲ್ಲೆಯ ಜನರ ಹಿತಾಸಕ್ತಿ ಹಾಗೂ ಅಭಿವೃದ್ಧಿ ವಿಚಾರಗಳಲ್ಲಿ ಧ್ವನಿ ಎತ್ತಬೇಕಾದ ಆಡಳಿತಾರೂಢ ಕಾಂಗ್ರೆಸ್ ಶಾಸಕರು ಈ ವಿಷಯದಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಸರ್ಕಾರದ ಗಮನಕ್ಕೆ ಜಿಲ್ಲೆಯ ಅರ್ಹ ಸಾಧಕರ ವಿಚಾರವನ್ನು ತಂದು ಅವರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಜನಪ್ರತಿನಿಧಿಗಳು ಆಸಕ್ತಿ ತೋರಿಲ್ಲ” ಎಂದಿದ್ದಾರೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ಎನ್. ವಾಸರೆ, ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಅರ್ಹ ಸಾಧಕರನ್ನು ಸಂಪೂರ್ಣವಾಗಿ ಕಡೆಗಣಿಸಿರುವುದು ಜಿಲ್ಲೆಯ ಸಾಂಸ್ಕೃತಿಕ ಕ್ಷೇತ್ರಕ್ಕೆ ಮಾಡಿದ ಅನ್ಯಾಯ. ಈ ಹಿಂದೆಯೂ ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷರ ನೇಮಕಾತಿ ಹಾಗೂ ಸಾಂಸ್ಕೃತಿಕ ಅನುದಾನ ಹಂಚಿಕೆಯಲ್ಲಿ ಜಿಲ್ಲೆಯನ್ನು ನಿರ್ಲಕ್ಷಿಸಲಾಗಿದೆ ಎಂದಿದ್ದಾರೆ.
ಸಾಹಿತ್ಯ, ಯಕ್ಷಗಾನ, ಜನಪದ, ರಂಗಭೂಮಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮರ್ಥರು ಜಿಲ್ಲೆಯಲ್ಲಿದ್ದರೂ ಒಬ್ಬರಿಗೂ ಪ್ರಶಸ್ತಿ ನೀಡದಿರುವುದು ಖಂಡನೀಯ. ಚಿಕ್ಕಮಗಳೂರು ಮೂಲದ, ಪ್ರಸ್ತುತ ಉಡುಪಿಯಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬರನ್ನು ಉತ್ತರ ಕನ್ನಡದ ಸಾಧಕರೆಂದು ಗುರುತಿಸಿರುವುದು ಹಾಸ್ಯಾಸ್ಪದ. ರಾಜ್ಯ ಸರ್ಕಾರಕ್ಕೆ ಉತ್ತರ ಕನ್ನಡ ಜಿಲ್ಲೆಯ ಅಸ್ತಿತ್ವವೇ ತಿಳಿದಿಲ್ಲವೇ ಎಂದು ಪ್ರಶ್ನಿಸುವಂತಾಗಿದೆ.
ಜನರ ಬದುಕಿಗೆ ಮಾರಕವಾಗುವ ಅಭಿವೃದ್ಧಿ ಯೋಜನೆಗಳಿಗೆ ಜಿಲ್ಲೆ ಬೇಕು. ಆದರೆ ಗೌರವ, ಪ್ರಶಸ್ತಿ ಹಾಗೂ ಸಾಂಸ್ಕೃತಿಕ ಪ್ರಾತಿನಿಧ್ಯ ನೀಡುವಾಗ ಮಾತ್ರ ಜಿಲ್ಲೆಯನ್ನು ಕಡೆಗಣಿಸಲಾಗುತ್ತಿದೆ. ಇದು ಜಿಲ್ಲೆಯ ಸಾಂಸ್ಕೃತಿಕ ಅಸ್ಮಿತೆಗೆ ಧಕ್ಕೆ ತಂದಿದೆ. ಈ ಅನ್ಯಾಯದ ವಿರುದ್ಧ ಜನಪ್ರತಿನಿಧಿಗಳು ಹಾಗೂ ಸಾಂಸ್ಕೃತಿಕ ವಲಯದವರು ಧ್ವನಿ ಎತ್ತಬೇಕು. ಸರ್ಕಾರ ಪ್ರಶಸ್ತಿ ಪುರಸ್ಕೃತರ ಪಟ್ಟಿ ಮರುಪರಿಶೀಲಿಸಿ ಜಿಲ್ಲೆಯ ಅರ್ಹ ಸಾಧಕರಿಗೆ ಗೌರವ ನೀಡಬೇಕು ಎಂದು ವಾಸರೆ ಆಕ್ರೋಶ ಹೊರಹಾಕಿದ್ದಾರೆ.






















