SK Home Ad
Home ಸುದ್ದಿ ರಾಜ್ಯ ಹಾಲಿನ ದರ ಹೆಚ್ಚಳ, ದೀಪಾವಳಿ ಹಬ್ಬಕ್ಕೆ ಕಾಂಗ್ರೆಸ್ ಸರ್ಕಾರದ ವಿಶೇಷ ಕೊಡುಗೆ

ಹಾಲಿನ ದರ ಹೆಚ್ಚಳ, ದೀಪಾವಳಿ ಹಬ್ಬಕ್ಕೆ ಕಾಂಗ್ರೆಸ್ ಸರ್ಕಾರದ ವಿಶೇಷ ಕೊಡುಗೆ

0
77

ನವದೆಹಲಿ: ರಾಜ್ಯ ಕಾಂಗ್ರೆಸ್ ಸರ್ಕಾರ ಮೂರೇ ವರ್ಷದಲ್ಲಿ ಹಾಲಿನ ಬೆಲೆಯನ್ನು ಶೇ. 39ರಷ್ಟು ಹೆಚ್ಚಿಸಿ ಶ್ರೀಸಾಮಾನ್ಯರಿಗೆ ಹೊರೆ ಹಾಕಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತೀವ್ರವಾಗಿ ಖಂಡಿಸಿದ್ದಾರೆ.

ರಾಜ್ಯ ಸರ್ಕಾರ ಟೋನ್ಡ್ ಹಾಲಿನ ದರವನ್ನು ಲೀಟರ್‌ಗೆ 8 ರೂ. ಹೆಚ್ಚಿಸುವ ಮೂಲಕ ದೀಪಾವಳಿ ಹಬ್ಬಕ್ಕೆ ‌ʻಬೆಲೆ ಏರಿಕೆ’ಯ ವಿಶೇಷ ಕೊಡುಗೆ ನೀಡಿದೆ ಎಂದು ಟೀಕಿಸಿದ್ದಾರೆ.

ಗ್ಯಾರಂಟಿಗಳ ಹೆಸರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕೇವಲ ಮೂರೂವರೆ ವರ್ಷಗಳಲ್ಲಿ ಪ್ರತಿ ಲೀಟರ್ ಹಾಲಿನ ಬೆಲೆಯನ್ನು 37 ರೂ.ನಿಂದ 54 ರೂ.ಗೆ ಏರಿಸಿ ಜನಸಾಮಾನ್ಯರಿಗೆ ಆರ್ಥಿಕ ಹೊರೆ ತಂದಿದೆ ಎಂದು ಆರೋಪಿಸಿದ್ದಾರೆ.

ಹಾಲು ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ಎಲ್ಲರಿಗೂ ಅತ್ಯಗತ್ಯ ಪೌಷ್ಟಿಕ ಆಹಾರ. ಆದರೆ, ಬೆಲೆ ಏರಿಸುವ ಮೂಲಕ ಬಳಕೆಗೆ ಮಿತಿ ಹೇರಿದಂತಾಗಿ ಅಪೌಷ್ಟಿಕತೆಗೆ ದಾರಿ ಮಾಡಿಕೊಟ್ಟಿದೆ ಎಂದು ವಿಷಾದಿಸಿದ್ದಾರೆ.

ನಂದಿನಿ ದರ ಏರಿಕೆ ಪಟ್ಟಿ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2023ರ ಜುಲೈನಲ್ಲಿ 3 ರೂ., 2024ರ ಜೂನ್‌ನಲ್ಲಿ 2 ರೂ., 2025ರ ಮಾರ್ಚ್‌ನಲ್ಲಿ 4 ರೂ. ಮತ್ತು ಇದೀಗ 2026ರ ನವೆಂಬರ್‌ನಿಂದ ಬರೋಬ್ಬರಿ 8 ರೂ. ಏರಿಸಿದೆ ಎಂದು ವಿವರಿಸಿದ್ದಾರೆ.

“ನಂದಿನಿ ಮಿಲ್ಕ್ ಅನ್ನು ಆದಾಯದ ಸರಕನ್ನಾಗಿ ಮಾಡಿಕೊಂಡಿರುವುದು ಕಳವಳಕಾರಿ. 2023ರಲ್ಲಿ 610 ರೂ. ಇದ್ದ ನಂದಿನಿ ತುಪ್ಪದ ಬೆಲೆ ಈಗ 715 ರೂ.ಗೆ ಏರಿದೆ. ದಿನೇ ದಿನೇ ಬೆಲೆ ಏರಿಕೆ ಬಡವರಿಗೆ ಬಿಸಿ ತುಪ್ಪವಾಗಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ.

“ಗ್ಯಾರಂಟಿ ಹೆಸರಲ್ಲಿ ಒಂದು ಕೈಯಲ್ಲಿ ಕೊಟ್ಟು, ಮತ್ತೊಂದು ಕೈಯಲ್ಲಿ ಬೆಲೆ ಏರಿಕೆ ಮೂಲಕ ಕಿತ್ತುಕೊಳ್ಳುತ್ತಿದೆ. ಜನ ಮುಂದಿನ ದಿನಗಳಲ್ಲಿ ಇದಕ್ಕೆ ತಕ್ಕ ಉತ್ತರ ಕೊಡುತ್ತಾರೆ” ಎಂದು ಎಚ್ಚರಿಸಿದ್ದಾರೆ.