SK Home Ad
Home ನಮ್ಮ ಜಿಲ್ಲೆ ಬಾಗಲಕೋಟೆ ವರ್ಷವಿಡೀ ಕನ್ನಡ ರಾಜ್ಯೋತ್ಸವ ಆಚರಿಸುವ ಮಠವಿದು!

ವರ್ಷವಿಡೀ ಕನ್ನಡ ರಾಜ್ಯೋತ್ಸವ ಆಚರಿಸುವ ಮಠವಿದು!

0
44

ಆರ್.ಎಸ್. ಹಿರೇಮಠ

ಬಾಗಲಕೋಟೆ (ಕುಳಗೇರಿ ಕ್ರಾಸ್): ಮಠಗಳೆಂದರೆ ಧಾರ್ಮಿಕ ಕಾರ್ಯಕ್ರಮಗಳು, ಪುರಾಣ-ಪ್ರವಚನ, ಪೂಜೆ-ಪುನಸ್ಕಾರ ಹಾಗೂ ದಾಸೋಹಕ್ಕೆ ಸೀಮಿತ ಎಂಬ ಭಾವನೆ ಸಾಮಾನ್ಯ. ಆದರೆ ಧಾರ್ಮಿಕ ಕಾರ್ಯಗಳ ಜತೆಗೆ ಕನ್ನಡ ಭಾಷೆ, ನೆಲ-ಜಲ ಹಾಗೂ ಕನ್ನಡಿಗರ ಅಸ್ಮಿತೆಯ ಉಳಿವಿಗಾಗಿ ನಿರಂತರ ಶ್ರಮಿಸುತ್ತಿರುವ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠ ವಿಭಿನ್ನವಾಗಿ ಗುರುತಿಸಿಕೊಂಡಿದೆ.

ಕನ್ನಡದ ಕಟ್ಟಾಳು ಎಂದೇ ಖ್ಯಾತರಾದ ಶಾಂತಲಿಂಗ ಸ್ವಾಮೀಜಿಗಳು ಧಾರ್ಮಿಕ ಚಟುವಟಿಕೆಗಳ ಜತೆಗೆ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಕರ್ನಾಟಕದ ಏಕೀಕರಣದ ಇತಿಹಾಸವನ್ನು ಜನರಿಗೆ ಪರಿಚಯಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಕನ್ನಡವೇ ಉಸಿರು ಎಂಬಂತೆ ಕನ್ನಡದ ಉಳಿವು ಮತ್ತು ಬೆಳವಣಿಗೆಗಾಗಿ ಸದ್ದಿಲ್ಲದೆ ಶ್ರಮಿಸುತ್ತಿರುವ ಶ್ರೀಗಳ ಕಾರ್ಯ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ವರ್ಷವಿಡೀ ರಾಜ್ಯೋತ್ಸವದ ಸಂಭ್ರಮ: ನಾಡಿನಾದ್ಯಂತ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಆಚರಿಸುವುದು ವಾಡಿಕೆ. ಆದರೆ ಭೈರನಹಟ್ಟಿ ಶ್ರೀಮಠದಲ್ಲಿ ವರ್ಷವಿಡೀ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆಮಾಡಿರುತ್ತದೆ. ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಮಹನೀಯರನ್ನು ಪರಿಚಯಿಸುವ ಮೂಲಕ ಅವರ ಹೋರಾಟ ಮತ್ತು ಕೊಡುಗೆಗಳನ್ನು ಇಂದಿನ ಪೀಳಿಗೆಗೆ ತಿಳಿಸುವ ಕಾರ್ಯ ಇಲ್ಲಿ ನಿರಂತರವಾಗಿ ನಡೆಯುತ್ತಿದೆ.

ಅಷ್ಟೇ ಅಲ್ಲ, ಶ್ರಾವಣ ಮಾಸದಲ್ಲಿ ಸಾಮಾನ್ಯವಾಗಿ ನಡೆಯುವ ಪುರಾಣ-ಪ್ರವಚನಗಳ ಬದಲಿಗೆ 12ನೇ ಶತಮಾನದ ಬಸವಾದಿ ಶರಣರ ಕುರಿತು ವಿಶೇಷ ಉಪನ್ಯಾಸಗಳನ್ನು ಆಯೋಜಿಸಿ ವಚನಕಾರರ ವಿಚಾರಧಾರೆಗಳನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಲಾಗಿದೆ. ಸಾಹಿತಿಗಳು, ಸಾಧಕರು ಹಾಗೂ ಸೂಪ್ತ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನೂ ಶ್ರೀಮಠ ಮಾಡುತ್ತಿದೆ.

ಕನ್ನಡ ಸ್ವಾಮೀಜಿ ಎಂದೇ ಖ್ಯಾತಿ: ಸುಮಾರು ಒಂದೂವರೆ ದಶಕಗಳಿಂದ ಶ್ವೇತವಸ್ತ್ರಧಾರಿಗಳಾಗಿ ಸಮಾಜ ಸೇವೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿರುವ ಪೂಜ್ಯ ಶಾಂತಲಿಂಗ ಶ್ರೀಗಳು ನಿತ್ಯ ಜಪ-ತಪ, ಅನುಷ್ಠಾನದ ಮೂಲಕ ಭಕ್ತರ ಏಳ್ಗೆಗಾಗಿ ಶ್ರಮಿಸುತ್ತಿದ್ದಾರೆ. ಶಿವಯೋಗ ಸಾಧಕರಲ್ಲಿ ಒಬ್ಬರಾಗಿರುವ ಶ್ರೀಗಳು ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ಹಲವು ಪುಸ್ತಕಗಳನ್ನು ರಚಿಸಿ ಪ್ರಕಟಿಸಿರುವ ಶ್ರೀಗಳು, ಮಠದಲ್ಲಿ ಸಿಂದಗಿ ಶ್ರೀ ಶಾಂತವೀರೇಶ್ವರ ಗ್ರಂಥಾಲಯವನ್ನು ಸ್ಥಾಪಿಸಿದ್ದಾರೆ. ಆ ಮೂಲಕ ಜನರಲ್ಲಿ ಓದುವ ಹವ್ಯಾಸ ಬೆಳೆಸುವುದರ ಜತೆಗೆ ಜ್ಞಾನ ಸಂಪಾದನೆಗೆ ಪೂರಕ ವಾತಾವರಣ ನಿರ್ಮಿಸಿದ್ದಾರೆ. ಅವರ ಸಾಹಿತ್ಯ ಸೇವೆಯೂ ಗಮನಾರ್ಹವಾಗಿದೆ.

ಬಡ ಮಕ್ಕಳಿಗೆ ಭರವಸೆಯ ಬೆಳಕು: ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಶ್ರೀಗಳು ಉಚಿತ ಪ್ರಸಾದ ನಿಲಯವನ್ನು ಸ್ಥಾಪಿಸಿದ್ದಾರೆ. ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಅನ್ನ, ಅಕ್ಷರ, ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಕಲಿಸುವ ಮೂಲಕ ಅವರ ಭವಿಷ್ಯ ರೂಪಿಸುವ ಕಾರ್ಯದಲ್ಲಿ ಶ್ರೀಮಠ ತೊಡಗಿದೆ.

ಇಲ್ಲಿ ವಿದ್ಯಾಭ್ಯಾಸ ಮಾಡಿದ ಹಲವರು ಕೃಷಿ ಕ್ಷೇತ್ರದಲ್ಲಿ ಹಾಗೂ ಸರ್ಕಾರಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನೂ ಕೆಲವರು ಕಾವಿದೀಕ್ಷೆ ಪಡೆದು ಮಠಾಧೀಶರಾಗಿದ್ದಾರೆ. ಪ್ರಸ್ತುತ ನೂರಾರು ವಿದ್ಯಾರ್ಥಿಗಳು ಶ್ರೀಮಠದಲ್ಲಿ ಶಿಕ್ಷಣ ಮುಂದುವರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.

ಗಣ್ಯರೊಂದಿಗೆ ಶ್ರೀಮಠದ ಅವಿನಾಭಾವ ನಂಟು: ನಾಡಿನ ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ, ಭಾವೈಕ್ಯತೆಯ ಕವಿ ಇಬ್ರಾಹಿಂ ಸುತಾರ, ಜಾಜಿ ಮಲ್ಲಿಗೆ ಕವಿ ಸತ್ಯಾನಂದ ಪಾತ್ರೋಟಿ, ಹಿರಿಯ ಸಾಹಿತಿ ಜ್ಞಾನದೇವ ದೊಡ್ಡಮೇಟಿ ಹಾಗೂ ಕಾರ್ಮಿಕ ಮುಖಂಡ ಡಾ. ಕೆ.ಎಸ್. ಶರ್ಮಾ ಸೇರಿದಂತೆ ಹಲವು ಗಣ್ಯರು ಶ್ರೀಮಠದೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಸಾಹಿತ್ಯ, ಸಂಸ್ಕೃತಿ, ಸಾಮಾಜಿಕ ಹಾಗೂ ಕನ್ನಡಪರ ಚಟುವಟಿಕೆಗಳಿಗೆ ಶ್ರೀಮಠ ನೀಡುತ್ತಿರುವ ಪ್ರೋತ್ಸಾಹವೇ ಈ ನಂಟಿಗೆ ಸಾಕ್ಷಿಯಾಗಿದೆ.

ನ. 1ರಂದು ಕನ್ನಡ ರಥೋತ್ಸವ: ಶಾಂತಲಿಂಗ ಶ್ರೀಗಳ ಸಾನ್ನಿಧ್ಯದಲ್ಲಿ ನವೆಂಬರ್ 1ರಂದು ಶ್ರೀಮಠದಲ್ಲಿ ವಿಶೇಷ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳು ನಡೆಯಲಿವೆ. ಗದಗ, ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳಿಂದ ಸಾವಿರಾರು ಕನ್ನಡಾಭಿಮಾನಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಈ ಸಂದರ್ಭದಲ್ಲಿ ತಾಯಿ ಭುವನೇಶ್ವರಿಯ ಪಂಚಲೋಹದ ಮೂರ್ತಿಯನ್ನು ಪ್ರತಿಷ್ಠಾಪಿಸಿ ಕನ್ನಡಾಂಬೆಯ ರಥೋತ್ಸವ ನೆರವೇರಿಸಲಾಗುತ್ತದೆ. ಸಾವಿರಾರು ಕನ್ನಡಿಗರು ಕನ್ನಡ ರಥವನ್ನು ಎಳೆಯುವ ಮೂಲಕ ಕನ್ನಡದ ಅಭಿಮಾನ ಮತ್ತು ನಾಡಿನ ಏಕತೆಯನ್ನು ಸಾರಲಿದ್ದಾರೆ.

ಕನ್ನಡವೆಂದರೆ ನೆನಪಾಗುವುದು ಭೈರನಹಟ್ಟಿ ಶ್ರೀಮಠ: ಕನ್ನಡ ಎಂದ ತಕ್ಷಣ ನಮ್ಮೆಲ್ಲರ ನೆನಪಿಗೆ ಬರುವುದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠ. ಮಠದ ಆವರಣದಲ್ಲಿ ನಿತ್ಯವೂ ಕನ್ನಡದ ಬಾವುಟ ಹಾರಾಡುತ್ತದೆ. ಪಂಚಲೋಹದ ಭುವನೇಶ್ವರಿ ಮೂರ್ತಿಗೆ ಪ್ರತಿದಿನ ಪೂಜೆ ಸಲ್ಲಿಸಲಾಗುತ್ತದೆ. ಕನ್ನಡ ಭಾಷೆಯನ್ನೇ ಉಸಿರಾಗಿಸಿಕೊಂಡು ಅದರ ಉಳಿವು ಮತ್ತು ಬೆಳವಣಿಗೆಗಾಗಿ ಶ್ರಮಿಸುತ್ತಿರುವ ಶಾಂತಲಿಂಗ ಶ್ರೀಗಳ ಕನ್ನಡ ಸೇವೆಯನ್ನು ಪ್ರತಿಯೊಬ್ಬ ಕನ್ನಡಿಗರೂ ಸ್ಮರಿಸಬೇಕು ಎಂದು ಕೆ.ಡಿ. ಬಿಜಾಪುರ ಹೇಳುತ್ತಾರೆ.