SK Home Ad
Home ಕ್ರೀಡೆ ಕೊಚ್ಚಿಯಲ್ಲಿ ಶುರುವಾಯ್ತು WPL ಮೆಗಾ ಫೈಟ್: 27 ಸ್ಲಾಟ್‌ಗಾಗಿ 146 ಆಟಗಾರ್ತಿಯರ ಜಂಗೀಕುಸ್ತಿ, ಯಾರ ಪರ್ಸ್‌ನಲ್ಲಿ...

ಕೊಚ್ಚಿಯಲ್ಲಿ ಶುರುವಾಯ್ತು WPL ಮೆಗಾ ಫೈಟ್: 27 ಸ್ಲಾಟ್‌ಗಾಗಿ 146 ಆಟಗಾರ್ತಿಯರ ಜಂಗೀಕುಸ್ತಿ, ಯಾರ ಪರ್ಸ್‌ನಲ್ಲಿ ಎಷ್ಟಿದೆ ಹಣ?!

0
23

ಮಹಿಳಾ ಪ್ರೀಮಿಯರ್ ಲೀಗ್ (WPL 2027) ಐದನೇ ಆವೃತ್ತಿಯ ಹರಾಜು ಪ್ರಕ್ರಿಯೆಗೆ ಕೇರಳದ ಕೊಚ್ಚಿಯಲ್ಲಿ ಕ್ಷಣಗಣನೆ ಆರಂಭವಾಗಿದ್ದು, 5 ಫ್ರಾಂಚೈಸಿಗಳ ನಡುವೆ ಬಿರುಸಿನ ಬಿಡ್ಡಿಂಗ್ ವಾರ್ ಶುರುವಾಗಲಿದೆ. ಈ ಬಾರಿಯ ಮಿನಿ ಹರಾಜಿನಲ್ಲಿ ಒಟ್ಟು 146 ಆಟಗಾರ್ತಿಯರು ಅದೃಷ್ಟ ಪರೀಕ್ಷೆಗೆ ಇಳಿದಿದ್ದು, 5 ತಂಡಗಳಲ್ಲಿ ಕೇವಲ 27 ಸ್ಥಾನಗಳು ಮಾತ್ರ ಭರ್ತಿಯಾಗಬೇಕಿವೆ. ಒಟ್ಟಾರೆಯಾಗಿ ರೂ.8.15 ಕೋಟಿ ಹಣ ಹರಾಜಿನಲ್ಲಿ ವಿನಿಯೋಗವಾಗಲಿದೆ.

ಅಭಿಷೇಕ್ ನಾಯರ್ ಕೋಚಿಂಗ್ ಹಾಗೂ ಮೆಗ್ ಲ್ಯಾನಿಂಗ್ ನಾಯಕತ್ವದ ಯುಪಿ ವಾರಿಯರ್ಸ್ ತಂಡ ಗರಿಷ್ಠ ರೂ.3.75 ಕೋಟಿ ಪರ್ಸ್ ಮೊತ್ತದೊಂದಿಗೆ ಅಖಾಡಕ್ಕಿಳಿದಿದ್ದು, ಅತಿ ಹೆಚ್ಚು ಅಂದರೆ 8 ಸ್ಲಾಟ್‌ಗಳನ್ನು (3 ವಿದೇಶಿ ಸೇರಿ) ತುಂಬಿಕೊಳ್ಳಬೇಕಿದೆ. ಆಶ್ಲೀ ಗಾರ್ಡ್ನರ್ ಸಾರಥ್ಯದ ಗುಜರಾತ್ ಜೈಂಟ್ಸ್ ರೂ.1.25 ಕೋಟಿ ಹಣದೊಂದಿಗೆ 3 ಸ್ಥಾನಗಳನ್ನು ಭರ್ತಿ ಮಾಡಲು ಕಾಯುತ್ತಿದೆ.

ಇನ್ನು ಪ್ರಶಸ್ತಿ ಉಳಿಸಿಕೊಳ್ಳುವ ತವಕದಲ್ಲಿರುವ ಸ್ಮೃತಿ ಮಂಧಾನ ನೇತೃತ್ವದ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಬಳಿ ರೂ. 1.15 ಕೋಟಿ ಬಾಕಿ ಇದ್ದು, 2 ವಿದೇಶಿ ಆಟಗಾರ್ತಿಯರು ಸೇರಿದಂತೆ ಒಟ್ಟು 5 ಸ್ಲಾಟ್‌ಗಳನ್ನು ಭರ್ತಿ ಮಾಡಬೇಕಿದೆ. ಜೆಮಿಮಾ ರೋಡ್ರಿಗಸ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ರೂ.1.10 ಕೋಟಿ ಬಜೆಟ್ ಹೊಂದಿದೆ.

ಹರ್ಮನ್‌ಪ್ರೀತ್ ಕೌರ್ ಮುನ್ನಡೆಸುತ್ತಿರುವ ಮುಂಬೈ ಇಂಡಿಯನ್ಸ್ ಅತಿ ಕಡಿಮೆ ಅಂದರೆ ಕೇವಲ ರೂ. 90 ಲಕ್ಷ ಮೊತ್ತದೊಂದಿಗೆ ಸ್ಥಳೀಯ ಯುವ ಆಟಗಾರ್ತಿಯರನ್ನು ಖರೀದಿಸಲು ಯೋಜನೆ ರೂಪಿಸಿದೆ. ಆಸ್ಟ್ರೇಲಿಯಾದ ಸೋಫಿ ಮೊಲಿನೆಕ್ಸ್, ಗ್ರೇಸ್ ಹ್ಯಾರಿಸ್ ಹಾಗೂ ಭಾರತದ ಸ್ನೇಹ್ ರಾಣಾ, ಜಿ. ಕಮಲಿನಿ ಹರಾಜಿನ ಪ್ರಮುಖ ಆಕರ್ಷಣೆಯಾಗಿದ್ದಾರೆ.