SK Home Ad
Home ಸುದ್ದಿ ರಾಜ್ಯ ದೇವರ ಚಿನ್ನ, ಆಭರಣಗಳ ಸದುಪಯೋಗಕ್ಕೆ ನೂತನ ಯೋಜನೆ

ದೇವರ ಚಿನ್ನ, ಆಭರಣಗಳ ಸದುಪಯೋಗಕ್ಕೆ ನೂತನ ಯೋಜನೆ

0
65

ಸವದತ್ತಿ: ರಾಜ್ಯದ ದೇವಸ್ಥಾನಗಳಲ್ಲಿರುವ ಚಿನ್ನ ಮತ್ತು ಆಭರಣಗಳನ್ನು ಲೆಕ್ಕಪತ್ರದೊಂದಿಗೆ ಸಂರಕ್ಷಿಸಿ, ದೇವರ ಅಲಂಕಾರ ಹಾಗೂ ಪೂಜಾ ಕೈಂಕರ್ಯಗಳಿಗೆ ಸಮರ್ಪಕವಾಗಿ ಬಳಸುವ ನಿಟ್ಟಿನಲ್ಲಿ ಹೊಸ ಯೋಜನೆ ರೂಪಿಸಲು ಚಿಂತನೆ ನಡೆಸಲಾಗಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಸವದತ್ತಿಯ ರೇಣುಕಾ ಯಲ್ಲಮ್ಮ ದೇವಸ್ಥಾನದ ಆವರಣದಲ್ಲಿ‌ ಸೋಮವಾರ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಸವದತ್ತಿ ಯಲ್ಲಮ್ಮನ ದೇವಸ್ಥಾನದಲ್ಲಿರುವ ಸುಮಾರು 42 ಕೆಜಿ ಚಿನ್ನವನ್ನು ದೇವಿಯ ಅಲಂಕಾರಕ್ಕೆ ಬಳಸುವ ಮೂಲಕ ಭಕ್ತರಿಗೆ ದೇವಿಯ ದರ್ಶನವನ್ನು ಮತ್ತಷ್ಟು ಆಕರ್ಷಕಗೊಳಿಸುವಂತೆ ಮುಜರಾಯಿ ಸಚಿವರಿಗೆ ಸೂಚನೆ ನೀಡಿದ್ದೇನೆ ಎಂದರು.

ದೇವಾಲಯದ ಚಿನ್ನ ದೇವರ ಆಭರಣವಾಗಬೇಕು: “ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿರುವ ಚಿನ್ನದ ಲೆಕ್ಕವನ್ನು ಸರಿಯಾಗಿ ಇಡಬೇಕು. ಅವನ್ನು‌ ಪೆಟ್ಟಿಗೆಯಲ್ಲಿ‌ ಇಟ್ಟು ಯಾರೋ ತೆಗೆದುಕೊಂಡು ಹೋದರು ಎಂಬ ಆತಂಕಕ್ಕೆ ಅವಕಾಶ ನೀಡಬಾರದು. ದೇವರ ಆಭರಣಗಳು ದೇವರ ಅಲಂಕಾರಕ್ಕೆ ಸದ್ಬಳಕೆಯಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರದ ಅವಧಿಯಲ್ಲಿ ವಿಶೇಷ ಯೋಜನೆ ರೂಪಿಸಲು ಮುಂದಡಿ‌ ಇಟ್ಟಿದ್ದೇವೆ.‌ ಶ್ರೀ ಕ್ಷೇತ್ರ ಯಲ್ಲಮ್ಮನ ಗುಡ್ಡದ ಸಮಗ್ರ ಅಭಿವೃದ್ಧಿಗೆ ₹215 ಕೋಟಿ ವೆಚ್ಚದ ಯೋಜನೆ ಕೈಗೆತ್ತಿಕೊಳ್ಳಲಾಗಿದೆ” ಎಂದರು.

ಸವದತ್ತಿ ಎಲ್ಲಮ್ಮನ ಈ ಸನ್ನಿಧಿಗೆ ಕಾಲಿಟ್ಟಿದ್ದು ನನ್ನ ಪುಣ್ಯ: “ಉದೋ ಉದೋ ಎಲ್ಲಮ್ಮ, ಉದೋ ತಾಯಿ ಎಲ್ಲಮ್ಮ” ಎಂದು ಭಕ್ತಿಭಾವದಿಂದ ಭಂಡಾರದ ಒಡತಿ ಸವದತ್ತಿ ಯಲ್ಲಮ್ಮನಿಗೆ ಸಾಷ್ಟಾಂಗ ನಮಸ್ಕಾರಗಳನ್ನು ಸಲ್ಲಿಸುತ್ತೇನೆ. ತಾಯಿಯ ಸನ್ನಿಧಿಯಲ್ಲಿ ಜ್ಯೋತಿ ಬೆಳಗಿಸಿ, ಈ ಪವಿತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನಗೆ ಬಹಳ ಸಂತೋಷ ತಂದಿದೆ” ಎಂದು ಹೇಳಿದರು.

“ಎಲ್ಲರನ್ನೂ ಸಾಕಿ, ಸಲಹಿ, ಕಾಪಾಡುವ ತಾಯಿ ಯಲ್ಲಮ್ಮ ದೇವಿಯ ಸನ್ನಿಧಿಯಲ್ಲಿ ನಾವೆಲ್ಲರೂ ಒಂದಾಗಿ ಸೇರಿದ್ದೇವೆ. ಈ ಪವಿತ್ರ ಕಾರ್ಯದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ” ಎಂದರು.

ನಂಬಿಕೆಯ ಶಕ್ತಿಯಾಗಿರುವ ಯಲ್ಲಮ್ಮ: “ಯಲ್ಲಮ್ಮ ಎಂದರೆ ಕಷ್ಟಗಳನ್ನು ದೂರ ಮಾಡುವ, ದುಃಖ ನಿವಾರಿಸುವ ತಾಯಿ. ದುರ್ಗಾದೇವಿಯ ಸ್ವರೂಪವಾಗಿರುವ ಯಲ್ಲಮ್ಮ ಎಲ್ಲ ವರ್ಗದ ಜನರಿಗೂ ರಕ್ಷಣೆ ನೀಡುವ ದೇವತೆ ಎಂಬ ನಂಬಿಕೆ ಭಕ್ತರಲ್ಲಿದೆ. ನಾನೂ ಕಷ್ಟದ ಸಂದರ್ಭಗಳಲ್ಲಿ ಇಲ್ಲಿಗೆ ಬಂದು ತಾಯಿಯಲ್ಲಿ ಪ್ರಾರ್ಥಿಸಿದ್ದೇನೆ. ನನ್ನ ಕುಟುಂಬದವರೂ ನನಗೆ ತಿಳಿಯದಂತೆ ದೇವಸ್ಥಾನಕ್ಕೆ ಬಂದು ಹೋಗಿದ್ದಾರೆ. ಸಾಕಷ್ಟು ದೂರದಿಂದಲೂ ಭಕ್ತರು ಇಲ್ಲಿಗೆ ಬರುತ್ತಾರೆ ಎಂದರೆ ತಾಯಿ ಯಲ್ಲಮ್ಮ ಜನರ ಮನಸ್ಸಿನಲ್ಲಿ ಎಷ್ಟು ಆಳವಾಗಿ ನೆಲೆಸಿದ್ದಾಳೆ ಎಂಬುದು ಗೊತ್ತಾಗುತ್ತದೆ” ಎಂದು ಬಣ್ಣಿಸಿದರು.

“ಧರ್ಮ ಮತ್ತು ನಂಬಿಕೆ ಪ್ರತಿಯೊಬ್ಬರ ವೈಯಕ್ತಿಕ ವಿಚಾರಗಳಾಗಿವೆ. ಮನುಷ್ಯನ ಬದುಕಿಗೆ ನಂಬಿಕೆ ಬಹಳ ಮುಖ್ಯ. ನಮ್ಮ ಸಂಸ್ಕೃತಿಯಲ್ಲಿ ಭೂಮಿಯನ್ನು ತಾಯಿ ಎಂದು ಪೂಜಿಸುತ್ತೇವೆ. ಗ್ರಾಮಗಳಿಗೆ ಹೋದಾಗಲೂ ಮೊದಲು ಗ್ರಾಮ ದೇವತೆಯ ಬಗ್ಗೆ ವಿಚಾರಿಸುತ್ತೇವೆ. ಮಹಿಳೆಗೆ ನಮ್ಮ ಸಂಸ್ಕೃತಿಯಲ್ಲಿ ವಿಶೇಷ ಗೌರವವಿದೆ. ಆಹ್ವಾನ‌ ಪತ್ರಿಕೆ ಕೊಡಬೇಕಾದರು ಮೊದಲು ಶ್ರೀಮತಿ ಎಂದು ಬರೆದು ನಂತರ ಶ್ರೀ ಎಂದು ಬರೆಯುವುದು ನಮ್ಮ‌ ಸಂಪ್ರದಾಯ. ಎಲ್ಲ ಧರ್ಮಗಳನ್ನೂ ಗೌರವಿಸುತ್ತಾ, ಪರಸ್ಪರ ಸಾಮರಸ್ಯದಿಂದ ಬದುಕಬೇಕು” ಎಂದರು.

ದೇವರ ಸೇವೆಯಂತೆ ಜನರ ಸೇವೆ: “ಸರ್ಕಾರವೂ ದೇವರ ಮನೆಯಿದ್ದಂತೆ. ದೇವಸ್ಥಾನಕ್ಕೆ ಹೋಗಿ ಜನರು ತಮ್ಮ ಕಷ್ಟಗಳನ್ನು ಹೇಳಿಕೊಂಡು ಪರಿಹಾರ ಬೇಡುವಂತೆ, ಸರ್ಕಾರದ ಕಚೇರಿಗಳಿಗೂ ಜನರು ಸಮಸ್ಯೆಗಳನ್ನು ಹೊತ್ತು ಬರುತ್ತಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡುವುದು ಸರ್ಕಾರದ ಕರ್ತವ್ಯ. ಅದಕ್ಕಾಗಿಯೇ ವಿಧಾನಸೌಧದ ಮೇಲೆ ಕೆಂಗಲ್ ಹನುಮಂತಯ್ಯ ಅವರು ‘ಸರ್ಕಾರದ ಕೆಲಸ ದೇವರ ಕೆಲಸ’ ಎಂದು ಬರೆಸಿದ್ದಾರೆ. ನಮ್ಮ‌ಸರ್ಕಾರ ಪ್ರಜಾಸೇವಾ ಇಲಾಖೆ ಸ್ಥಾಪಿಸಿ ಆಡಳಿತಯಂತ್ರವನ್ನು ಮನೆಯ ಬಾಗಿಲಿಗೆ ತಲುಪಿಸುತ್ತಿದ್ದೇವೆ” ಎಂದರು.

ಶಾಸಕರ ಬೇಡಿಕೆಗಳಿಗೆ ಸರ್ಕಾರ ಸ್ಪಂದನೆ: “ಸವದತ್ತಿ ಕ್ಷೇತ್ರದ ಅಭಿವೃದ್ಧಿಗೆ ಸ್ಥಳೀಯ ಶಾಸಕರು ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ರೈತರ ಬದುಕು ಹಸನಾಗಬೇಕು, ಕೃಷಿಗೆ ನೀರು ಸಿಗಬೇಕು ಎಂಬ ಉದ್ದೇಶದಿಂದ ಕೆರೆ ತುಂಬಿಸುವ ಯೋಜನೆಗಳು ಹಾಗೂ ಏತ ನೀರಾವರಿ ಯೋಜನೆಗಳಿಗೆ ಒತ್ತು ನೀಡಬೇಕಿದೆ. ಶಾಸಕರಾದ ವಿಶ್ವಾಸ ವಸಂತ ವೈದ್ಯ ಅವರು ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂಪಾಯಿಗಳ ಅನುದಾನ ತರುವ ಮೂಲಕ ಅಭಿವೃದ್ಧಿಗೆ ಶ್ರಮಿಸಿದ್ದಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

”ಸವದತ್ತಿ ಪುರಸಭೆಯನ್ನು ಮೇಲ್ದರ್ಜೆಗೇರಿಸುವುದರ ಜತೆಗೆ ಸುಮಾರು ₹43 ಕೋಟಿ ಅನುದಾನ ನೀಡಲಾಗಿದೆ. ಆಸ್ಪತ್ರೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಎಲ್ಲ ಜನಪ್ರತಿನಿಧಿಗಳನ್ನು ಒಗ್ಗೂಡಿಸಿಕೊಂಡು ಜನರ ಅಗತ್ಯಗಳಿಗೆ ಅನುಗುಣವಾಗಿ ಕೆಲಸ ಮಾಡಲಾಗುವುದು” ಎಂದು ಭರವಸೆ ನೀಡಿದರು.