SK Home Ad
Home ನಮ್ಮ ಜಿಲ್ಲೆ ಬಾಗಲಕೋಟೆ ಮಳೆ ಕೈಕೊಟ್ಟರೂ ಈರುಳ್ಳಿ ಕೈಹಿಡಿಯಿತು; ರೈತರ ಜೇಬಿಗೆ ಬಂತು ಭರ್ಜರಿ ಆದಾಯ!

ಮಳೆ ಕೈಕೊಟ್ಟರೂ ಈರುಳ್ಳಿ ಕೈಹಿಡಿಯಿತು; ರೈತರ ಜೇಬಿಗೆ ಬಂತು ಭರ್ಜರಿ ಆದಾಯ!

0
81

ಮಹಾಂತಯ್ಯ ಹಿರೇಮಠ
ಬಾಗಲಕೋಟೆ (ಕುಳಗೇರಿ ಕ್ರಾಸ್): ಸತತ ಬರದಿಂದ ಕಂಗೆಟ್ಟಿದ್ದ ರೈತರು ಕಳೆದ ವರ್ಷ ಸಾಕಷ್ಟು ನಷ್ಟ ಅನುಭವಿಸಿ ಕಣ್ಣೀರು ಹಾಕಿದ್ದರು. ಆದರೆ ಈ ಬಾರಿಯೂ ಮಳೆ ಕೈಕೊಟ್ಟರೂ ಛಲ ಬಿಡದೆ ಈರುಳ್ಳಿ ಬೆಳೆದ ರೈತರಿಗೆ ಈಗ ಭೂಮಿತಾಯಿ ಕೈಹಿಡಿದಿದ್ದಾಳೆ. ಉತ್ತಮ ಬೆಲೆ ದೊರೆತ ಪರಿಣಾಮ ಈರುಳ್ಳಿ ಬೆಳೆದ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಕೈತುಂಬ ಆದಾಯ ಗಳಿಸುವಂತಾಗಿದೆ.

ಸಮಯಕ್ಕೆ ಸರಿಯಾಗಿ ಮಳೆ ಸುರಿಯದೆ ಬರದ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಈ ಬಾರಿ ಯಾವ ಬೆಳೆ ಬೆಳೆಯಬೇಕು, ಯಾವ ಬೆಳೆ ಕೈಹಿಡಿಯಬಹುದು ಎಂಬ ಚಿಂತೆ ರೈತರನ್ನು ಕಾಡಿತ್ತು. ಅದರಲ್ಲೂ ಕಳೆದ ಬಾರಿ ಈರುಳ್ಳಿ ಬೆಳೆದು ಬೆಲೆ ಕುಸಿತದಿಂದ ಭಾರಿ ನಷ್ಟ ಅನುಭವಿಸಿದ್ದ ರೈತರು ಸಾಲದ ಹೊರೆಯಲ್ಲಿದ್ದರು. ಆದರೂ ಎದೆಗುಂದದೆ ಮತ್ತೆ ಈರುಳ್ಳಿ ಬೆಳೆಯುವ ಸಾಹಸಕ್ಕೆ ಕೈಹಾಕಿದ ರೈತರಿಗೆ ಈ ಬಾರಿ ಉತ್ತಮ ಫಸಲು ಮತ್ತು ಬೆಲೆ ದೊರೆತಿದೆ.

ಕಳೆದ ಬಾರಿ ಈರುಳ್ಳಿ ಬೆಳೆಯಲ್ಲಿ ನಷ್ಟ ಅನುಭವಿಸಿದ್ದ ಕೆಲವು ರೈತರು ಈ ಬಾರಿ ಬೇರೆ ಬೆಳೆಗಳನ್ನು ಬೆಳೆದು ಅಲ್ಪ ಆದಾಯ ಗಳಿಸಿದ್ದಾರೆ. ಆದರೆ ಈರುಳ್ಳಿ ಬೆಳೆದ ರೈತರು ಉತ್ತಮ ಬೆಲೆ ಪಡೆಯುತ್ತಿರುವುದನ್ನು ಕಂಡು, ತಾವು ಈರುಳ್ಳಿ ಬಿತ್ತನೆ ಮಾಡಲಿಲ್ಲವಲ್ಲ ಎಂಬ ಕೊರಗಿನಲ್ಲಿ ಮುಳುಗಿದ್ದಾರೆ.

ಈ ಬಾರಿ ಗುಣಮಟ್ಟದ ಈರುಳ್ಳಿಗೆ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ ₹4,500ರಿಂದ ₹5,500ರವರೆಗೆ ಬೆಲೆ ದೊರೆತಿದೆ. ಸ್ಥಳೀಯ ಸಂತೆ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ಈರುಳ್ಳಿ ₹50ರಿಂದ ₹60ರ ವರೆಗೆ ಮಾರಾಟವಾಗುತ್ತಿದೆ. ಉತ್ತಮ ಬೆಲೆ ಇರುವುದರಿಂದ ಸಣ್ಣ ರೈತರು ಸ್ಥಳೀಯ ಮಾರುಕಟ್ಟೆಯಲ್ಲೇ ಈರುಳ್ಳಿ ಮಾರಾಟ ಮಾಡಿ ಲಾಭ ಗಳಿಸುತ್ತಿದ್ದಾರೆ.

ಕಾಲುವೆ ನೀರು ಬೆಳೆ ಉಳಿಸಿತು: ಈ ಬಾರಿ ಮಳೆ ಕೈಕೊಟ್ಟಿದ್ದರಿಂದ ಈರುಳ್ಳಿ ಬೆಳೆದ ರೈತರು ಸಂಕಷ್ಟ ಎದುರಿಸಬೇಕಾಯಿತು. ಆದರೂ ಅಲ್ಲಲ್ಲಿ ಲಭ್ಯವಿದ್ದ ನೀರನ್ನು ಬಳಸಿಕೊಂಡು ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸಪಟ್ಟರು. ಈ ನಡುವೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರ ಸೂಚನೆಯ ಮೇರೆಗೆ ಮಲಪ್ರಭಾ ಎಡದಂಡೆ ಕಾಲುವೆಗೆ ಎರಡು ಬಾರಿ ನೀರು ಹರಿಸಿದ್ದರಿಂದ ರೈತರಿಗೆ ಅನುಕೂಲವಾಯಿತು. ಕಾಲುವೆ ನೀರಿನ ನೆರವಿನಿಂದ ಬೆಳೆ ಉಳಿಸಿಕೊಂಡ ರೈತರು ಉತ್ತಮ ಫಸಲು ಪಡೆಯುವಂತಾಗಿದೆ.

ರೈತರ ಬೆಳೆ ಉಳಿಸುವುದು ನಮ್ಮ ಜವಾಬ್ದಾರಿ: ಜಲಾಶಯದಲ್ಲಿ ಸಾಕಷ್ಟು ನೀರು ಸಂಗ್ರಹವಾಗದಿದ್ದರೂ ಬರದ ಪರಿಸ್ಥಿತಿಯಲ್ಲಿ ಜನರು, ಜಾನುವಾರುಗಳು ಮತ್ತು ರೈತರ ಬೆಳೆಗಳಿಗೆ ಅನುಕೂಲವಾಗುವಂತೆ ಮಲಪ್ರಭಾ ಎಡದಂಡೆ ಕಾಲುವೆಯ ಮೂಲಕ ಎರಡು ಬಾರಿ ನೀರು ಹರಿಸಲಾಗಿದೆ. ರೈತರ ಜಮೀನುಗಳಿಗೆ ಸಮಯಕ್ಕೆ ಸರಿಯಾಗಿ ನೀರು ಪೂರೈಸುವುದು ನಮ್ಮ ಜವಾಬ್ದಾರಿ. ಸರ್ಕಾರ ರೈತರ ಬೆಳೆಗಳಿಗೆ ನೀರಿನ ಸೌಲಭ್ಯ ಕಲ್ಪಿಸಿದರೆ ರೈತರು ಸರ್ಕಾರವನ್ನು ಬೆಂಬಲಿಸುತ್ತಾರೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.

ಈರುಳ್ಳಿ ಬೆಳೆಯಲು ಹೆಚ್ಚು ಖರ್ಚು: ಈರುಳ್ಳಿ ಬೆಳೆಯುವುದು ಅಷ್ಟು ಸುಲಭವಲ್ಲ. ಕಳೆ ನಿಯಂತ್ರಣ, ಗೊಬ್ಬರ, ಕೀಟನಾಶಕ ಸೇರಿದಂತೆ ಹಲವು ಹಂತಗಳಲ್ಲಿ ಹೆಚ್ಚಿನ ಹಣ ಖರ್ಚು ಮಾಡಬೇಕಾಗುತ್ತದೆ. ಕಳೆದ ಬಾರಿ ಮಳೆ ಕೊರತೆಯಿಂದ ಈರುಳ್ಳಿ ಸರಿಯಾಗಿ ಬೆಳೆಯದ ಕಾರಣ ಕುರಿಗಳನ್ನು ಹೊಲದಲ್ಲಿ ಮೇಯಿಸಿ, ಮತ್ತೆ ಮರುಬಿತ್ತನೆ ಮಾಡಿದ್ದೆವು. ಆದರೆ ಮರುಬಿತ್ತನೆ ತಡವಾದ ಕಾರಣ ನಿರೀಕ್ಷಿತ ಇಳುವರಿ ದೊರೆಯಲಿಲ್ಲ ಎಂದು ಅವಳಿ ಜಿಲ್ಲೆಗಳ ಹಾಲು ಒಕ್ಕೂಟದ ನಿರ್ದೇಶಕ ಈರಣಗೌಡ ಕರಿಗೌಡ್ರ ತಿಳಿಸಿದರು.

ಭೂಮಿ ನಂಬಿದ ರೈತನಿಗೆ ಫಲ ಖಚಿತ: ಕಳೆದ ವರ್ಷ ನಾವು ಬೆಳೆದ ಉತ್ತಮ ಗುಣಮಟ್ಟದ ಈರುಳ್ಳಿಯನ್ನು ಬೆಲೆ ಸಿಗದೆ ತಿಪ್ಪೆಗೆ ಸುರಿಯಬೇಕಾಯಿತು. ಕೆಲವು ರೈತರ ಹೊಲಗಳಲ್ಲೇ ಈರುಳ್ಳಿ ಕೊಳೆತು ಹೋಯಿತು. ಮಾರುಕಟ್ಟೆಗೆ ಈರುಳ್ಳಿ ತಂದ ರೈತರು ಸೂಕ್ತ ಬೆಲೆ ಸಿಗದೆ ಕಣ್ಣೀರು ಹಾಕುವಂತಾಗಿತ್ತು. ಈ ಬಾರಿಯೂ ಮಳೆ ಕೈಕೊಟ್ಟಿದ್ದರಿಂದ ಬಿತ್ತನೆ ಮಾಡಿದ ಈರುಳ್ಳಿ ಒಣಗುವ ಪರಿಸ್ಥಿತಿ ಎದುರಾಗಿತ್ತು. ಆದರೂ ರೈತರು ಛಲ ಬಿಡದೆ ಮತ್ತೆ ಬಿತ್ತನೆ ಮಾಡಿ ಉತ್ತಮ ಬೆಳೆ ಬೆಳೆದಿದ್ದಾರೆ. ಭೂಮಿತಾಯಿಯನ್ನು ನಂಬಿದ ರೈತನನ್ನು ಆಕೆ ಎಂದಿಗೂ ಕೈಬಿಡುವುದಿಲ್ಲ ಎಂಬುದಕ್ಕೆ ಈ ಬಾರಿಯ ಈರುಳ್ಳಿ ಬೆಳೆ ಸಾಕ್ಷಿಯಾಗಿದೆ. ‘ಕೈ ಕೆಸರಾದರೆ ಬಾಯಿ ಮೊಸರು’ ಎಂಬಂತೆ ಶ್ರಮಪಟ್ಟು ದುಡಿಯುವ ರೈತನಿಗೆ ಒಂದಲ್ಲ ಒಂದು ದಿನ ಫಲ ಸಿಕ್ಕೇ ಸಿಗುತ್ತದೆ ಎಂದು ಕುಳಗೇರಿ ಕ್ರಾಸ್ ಗ್ರಾಮ ಪಂಚಾಯಿತಿ ಸದಸ್ಯ ಹನಮಂತ ನರಗುಂದ ಹೇಳಿದರು.

ಎರಡು ಎಕರೆಗೆ 200 ಚೀಲ ಈರುಳ್ಳಿ ಬೆಳೆ: ಎರಡು ಎಕರೆ ಜಮೀನಿನಲ್ಲಿ ಸುಮಾರು 200 ಚೀಲ ಈರುಳ್ಳಿ ಬೆಳೆದಿದ್ದೇನೆ. ಈ ಹಿಂದೆ ಉತ್ತಮ ಬೆಳೆ ಬಂದಿದ್ದರೂ ಬೆಲೆ ಕುಸಿತದಿಂದ ಭಾರಿ ನಷ್ಟ ಅನುಭವಿಸಿದ್ದೆ. ಈ ಬಾರಿ ಕ್ಷೇತ್ರದ ಶಾಸಕರ ಸೂಚನೆಯ ಮೇರೆಗೆ ಕಾಲುವೆಗೆ ಸಮಯಕ್ಕೆ ಸರಿಯಾಗಿ ನೀರು ಹರಿಸಿದ್ದರಿಂದ ಉತ್ತಮ ಬೆಳೆ ಬೆಳೆಯಲು ಸಾಧ್ಯವಾಯಿತು. ಸಮಯಕ್ಕೆ ಸರಿಯಾಗಿ ಮಳೆ ಸುರಿದಿದ್ದರೆ ನಿರೀಕ್ಷೆಗೂ ಮೀರಿ ಆದಾಯ ಗಳಿಸಬಹುದಿತ್ತು ಎಂದು ಯುವ ರೈತ ಸಿದ್ದಪ್ಪ ದಂಡಿನ ತಿಳಿಸಿದರು.

800 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆ: ಹೋಬಳಿ ವ್ಯಾಪ್ತಿಯಲ್ಲಿ ಸುಮಾರು 800 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದೆ. ಮಳೆ ಆಶ್ರಿತ ಪ್ರದೇಶಗಳಲ್ಲಿ ಈರುಳ್ಳಿ ಇಳುವರಿ ಕಡಿಮೆಯಾಗಿದೆ. ಕೊಳವೆಬಾವಿ ಹಾಗೂ ಕಾಲುವೆ ನೀರಿನ ಸೌಲಭ್ಯ ಹೊಂದಿರುವ ರೈತರು ಉತ್ತಮ ಬೆಳೆ ಬೆಳೆದಿದ್ದಾರೆ. ಸಮಯಕ್ಕೆ ಸರಿಯಾಗಿ ಮಳೆ ಸುರಿದಿದ್ದರೆ ರೈತರು ಇನ್ನಷ್ಟು ಉತ್ತಮ ಇಳುವರಿ ಪಡೆಯಬಹುದಿತ್ತು ಎಂದು ತೋಟಗಾರಿಕೆ ಅಧಿಕಾರಿ ಬಾಳನಗೌಡ ಪಾಟೀಲ ಹೇಳಿದರು.