SK Home Ad
Home ನಮ್ಮ ಜಿಲ್ಲೆ ಚಿತ್ರದುರ್ಗ ರಾಜ್ಯದ ಮುಖ್ಯಮಂತ್ರಿಯೇ ಸ್ಟಿಂಗ್ ಪಿತಾಮಹ

ರಾಜ್ಯದ ಮುಖ್ಯಮಂತ್ರಿಯೇ ಸ್ಟಿಂಗ್ ಪಿತಾಮಹ

0
65

ಚಿತ್ರದುರ್ಗ: ಸಚಿವರಿಗೆ ಸ್ಟಿಂಗ್ ಆಪರೇಷನ್ ಭೀತಿ ಇದೆ ಎಂಬ ಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ ಗಾಳಿಯಲ್ಲಿ ಗುಂಡು ಹೊಡೆಯುವುದಾಗಿದೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.

ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು, ಯಾರ ವಿರುದ್ಧ ಸ್ಟಿಂಗ್ ಮಾಡುತ್ತಾರೆ ಎಂಬ ಪಟ್ಟಿಯನ್ನು ಬಿಡುಗಡೆ ಮಾಡಲಿ. ಸ್ಟಿಂಗ್‌ಗೆ ಸಿಕ್ಕಿಹಾಕಿಕೊಂಡವರ ಪಟ್ಟಿ ನೀಡಲಿ ಎಂದು ಸವಾಲು ಹಾಕಿದರು.

ಸ್ಟಿಂಗ್ ಪಿತಾಮಹನೇ ರಾಜ್ಯದ ಮುಖ್ಯಮಂತ್ರಿ ಎಂದು ಜನ ಹೇಳುತ್ತಾರೆ. ದಾಖಲೆ ಬಿಡುಗಡೆಗೆ ಸಮಯ ಕೇಳುವುದು ಗಾಳಿಯಲ್ಲಿ ಗುಂಡು ಹೊಡೆದಂತೆ ಎಂದು ಲೇವಡಿ ಮಾಡಿದರು.

ರಾಜ್ಯದಲ್ಲಿ ಬರಗಾಲದಿಂದ ತೀವ್ರ ಸಂಕಷ್ಟದ ವಾತಾವರಣವಿದೆ. ಜನರ ಗಮನ ಬೇರೆಡೆ ಸೆಳೆಯಲು ಈ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಜನಪರವಾದ ಕೆಲಸ ನಯಾಪೈಸೆ ಆಗಿಲ್ಲ, ಅದನ್ನು ಮರೆಮಾಚಲು ಸರ್ಕಾರದಿಂದ ಈ ರೀತಿಯ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಸ್ವಾತಂತ್ರ‍್ಯ ಬಂದಾಗ ಬ್ಯಾಲೆಟ್ ಮೂಲಕ ಚುನಾವಣೆ ನಡೆಯುತ್ತಿತ್ತು. ಆಗ ಕೆಲವರಿಗೆ ಮತದಾನ ಮಾಡುವುದು ತಿಳಿದಿರಲಿಲ್ಲ. ಕೈಹಿಡಿದು ಮತದಾನ ಮಾಡಿಸುವ ವಾತಾವರಣ ಇತ್ತು. ಈಗ ಶೇ. 80ರಷ್ಟು ವಿದ್ಯಾವಂತರಿದ್ದಾರೆ, ಈಗ ಇವಿಎಂ ಅಗತ್ಯವಿಲ್ಲ. ಬ್ಯಾಲೆಟ್ ಬೇಕು ಎನ್ನುವುದು ಕಾಂಗ್ರೆಸ್ ಭಾರತೀಯರಿಗೆ ಮಾಡುವ ಅವಮಾನ ಎಂದು ಕಿಡಿಕಾರಿದರು.

ಇವಿಎಂ ಮೂಲಕವೇ ರಾಹುಲ್‌ಗಾಂಧಿ, ಪ್ರಿಯಾಂಕಾ ಗಾಂಧಿ ಗೆದ್ದಿದ್ದಾರೆ. ಕರ್ನಾಟಕ, ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದಿರುವುದು ಇವಿಎಂ ಮೂಲಕವೇ. ಇವಿಎಂ ಸರಿ ಇಲ್ಲದಿದ್ದರೆ ಕಾಂಗ್ರೆಸ್ಸಿಗರು ಮೊದಲು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.