ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ನೂತನ ಪೂರ್ಣಾವಧಿ ನಾಯಕಿಯಾಗಿ ಸ್ಟಾರ್ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ (29) ಅವರನ್ನು ನೇಮಕ ಮಾಡಲಾಗಿದೆ.
ಹರ್ಮನ್‌ಪ್ರೀತ್ ಕೌರ್ ನಾಯಕತ್ವದಿಂದ ಕೆಳಗಿಳಿದ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಮುಂಬರುವ ಜಿಂಬಾಬ್ವೆ ಸರಣಿಯಿಂದ ಮಂಧಾನ ಏಕದಿನ ಹಾಗೂ ಟಿ20 ತಂಡಗಳ ನಾಯಕತ್ವ ವಹಿಸಲಿದ್ದಾರೆ.
ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ (ಡಬ್ಲ್ಯುಪಿಎಲ್) ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು 2024 ಮತ್ತು 2026ರಲ್ಲಿ ಚಾಂಪಿಯನ್ ಪಟ್ಟಕ್ಕೇರಿಸಿದ ಅನುಭವ ಮಂಧಾನ ಅವರಿಗಿದೆ. ಇದೀಗ ಇದೇ ಅನುಭವವನ್ನು ರಾಷ್ಟ್ರೀಯ ತಂಡದ ನಾಯಕತ್ವದಲ್ಲೂ ಬಳಸಿಕೊಳ್ಳುವ ಅವಕಾಶ ಅವರಿಗೆ ಸಿಕ್ಕಿದೆ.
ಟಿ20 ತಂಡಕ್ಕೆ ಶಫಾಲಿ ವರ್ಮಾ ಹಾಗೂ ಏಕದಿನ ತಂಡಕ್ಕೆ ದೀಪ್ತಿ ಶರ್ಮಾ ಉಪನಾಯಕಿಯರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಎರಡೂ ಮಾದರಿಗಳ ನಾಯಕತ್ವದ ಹೊಣೆ ಮಂಧಾನ ಅವರ ಹೆಗಲೇರಿದೆ.
ಇದೇ ವೇಳೆ, ಮಾಜಿ ನಾಯಕಿ ಹರ್ಮನ್‌ಪ್ರೀತ್ ಕೌರ್ ತಂಡದಲ್ಲಿ ಆಟಗಾರ್ತಿಯಾಗಿ ಮುಂದುವರಿಯಲಿದ್ದಾರೆ.






















