SK Home Ad
Home ಸಿನಿ ಮಿಲ್ಸ್ ಆ್ಯಕ್ಷನ್ ಪ್ರಿನ್ಸ್ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್ ಹೊಸ ಚಿತ್ರದ ಟೈಟಲ್ ಟೀಸರ್ ರಿಲೀಸ್

ಆ್ಯಕ್ಷನ್ ಪ್ರಿನ್ಸ್ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್ ಹೊಸ ಚಿತ್ರದ ಟೈಟಲ್ ಟೀಸರ್ ರಿಲೀಸ್

0
72
ಆ್ಯಕ್ಷನ್ ಬಿಟ್ಟು ಫ್ಯಾಮಿಲಿ ಕಥೆಯತ್ತ ಧ್ರುವ ಸರ್ಜಾ; ‘ವಸುದೈವ ಕುಟುಂಬಕಂ’ ಟೈಟಲ್ ಅನಾವರಣ

ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಹುಟ್ಟುಹಬ್ಬದ ಸಂಭ್ರಮಕ್ಕೆ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ಸಿಕ್ಕಿದೆ. ಧ್ರುವ ಸರ್ಜಾ ನಾಯಕರಾಗಿ ನಟಿಸುತ್ತಿರುವ ನೂತನ ಚಿತ್ರದ ಶೀರ್ಷಿಕೆಯನ್ನು ಚಿತ್ರತಂಡ ಅನಾವರಣಗೊಳಿಸಿದ್ದು, ಸಿನಿಮಾಗೆ ‘ವಸುದೈವ ಕುಟುಂಬಕಂ’ ಎಂದು ಹೆಸರಿಡಲಾಗಿದೆ. ಚಿತ್ರದ ಅಧಿಕೃತ ಟೈಟಲ್ ಟೀಸರ್ ಕೂಡ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.

‘ಮೈರಾ ಕ್ರಿಯೇಷನ್ಸ್’ ಲಾಂಛನದಲ್ಲಿ ಹರೀಶ್ ಪೆದ್ದಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಬಿ.ಎಸ್. ಸುಧೀಂದ್ರ ಸಹ ನಿರ್ಮಾಪಕರಾಗಿದ್ದಾರೆ. ‘ಪೊಗರು’ ಬಳಿಕ ಧ್ರುವ ಸರ್ಜಾ ಹಾಗೂ ನಿರ್ದೇಶಕ ನಂದ ಸುಧೀರ್ ಅವರ ಕಾಂಬಿನೇಷನ್‌ನಲ್ಲಿ ಈ ಸಿನಿಮಾ ಮೂಡಿಬರುತ್ತಿರುವುದು ಮತ್ತೊಂದು ವಿಶೇಷ. ಈ ಚಿತ್ರದ ಮೂಲಕ ನಿರ್ದೇಶಕ ನಂದಕಿಶೋರ್ ಅವರು ತಮ್ಮ ಹೆಸರನ್ನು ‘ನಂದ ಸುಧೀರ್’ ಎಂದು ಬದಲಿಸಿಕೊಂಡಿದ್ದಾರೆ.

ಆ್ಯಕ್ಷನ್ ಇಮೇಜ್ ಬಿಟ್ಟು ಫ್ಯಾಮಿಲಿ ಎಂಟರ್‌ಟೈನರ್ : ಧ್ರುವ ಸರ್ಜಾ ಸಾಮಾನ್ಯವಾಗಿ ಮಾಸ್ ಹಾಗೂ ಆ್ಯಕ್ಷನ್ ಪ್ರಧಾನ ಪಾತ್ರಗಳ ಮೂಲಕ ಗುರುತಿಸಿಕೊಂಡಿರುವ ನಟ. ಆದರೆ ‘ವಸುದೈವ ಕುಟುಂಬಕಂ’ ಮೂಲಕ ಕುಟುಂಬ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡಿರುವ ಕಥಾಹಂದರವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.

ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ವೀಕ್ಷಿಸಬಹುದಾದ ಕೌಟುಂಬಿಕ ಮನರಂಜನಾ ಚಿತ್ರ ಇದಾಗಿರಲಿದೆ. ಪ್ರೀತಿ, ಆ್ಯಕ್ಷನ್, ಸೆಂಟಿಮೆಂಟ್ ಸೇರಿದಂತೆ ವಿವಿಧ ಅಂಶಗಳು ಕಥೆಯಲ್ಲಿ ಇರಲಿವೆ. ಬಿಡುಗಡೆಯಾಗಿರುವ ಟೈಟಲ್ ಟೀಸರ್‌ನಲ್ಲೂ ಧ್ರುವ ಸರ್ಜಾ ಪಾತ್ರದ ಮೂಲಕ ಕುಟುಂಬ ಹಾಗೂ ಭಾವನಾತ್ಮಕ ಅಂಶಗಳಿಗೆ ಒತ್ತು ನೀಡುವ ಸುಳಿವು ನೀಡಲಾಗಿದೆ.

ಹರಿಕೃಷ್ಣ ಸಂಗೀತ, ಸತ್ಯ ಹೆಗ್ಡೆ ಛಾಯಾಗ್ರಹಣ : ಧ್ರುವ ಸರ್ಜಾ ಸಿನಿಮಾಗಳ ಹಾಡುಗಳಿಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ದೊರೆತಿರುವ ಹಿನ್ನೆಲೆಯಲ್ಲಿ, ಈ ಚಿತ್ರದಲ್ಲೂ ಸುಮಧುರ ಗೀತೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಖ್ಯಾತ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಚಿತ್ರಕ್ಕೆ ಸಂಗೀತ ಸಂಯೋಜಿಸಲಿದ್ದಾರೆ.

ಚಿತ್ರದ ಛಾಯಾಗ್ರಹಣವನ್ನು ಸತ್ಯ ಹೆಗ್ಡೆ ನಿರ್ವಹಿಸಲಿದ್ದು, ದೀಪು ಎಸ್. ಕುಮಾರ್ ಸಂಕಲನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಹಿರಿಯ ಹಾಗೂ ಅನುಭವಿ ಕಲಾವಿದರನ್ನು ಒಳಗೊಂಡ ದೊಡ್ಡ ತಾರಾಬಳಗವೂ ಚಿತ್ರದಲ್ಲಿರಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಉಳಿದ ಕಲಾವಿದರು ಹಾಗೂ ಇತರ ಪ್ರಮುಖ ವಿವರಗಳನ್ನು ಮುಂದಿನ ದಿನಗಳಲ್ಲಿ ಘೋಷಿಸುವ ಸಾಧ್ಯತೆಯಿದೆ.

ಚಿತ್ರದ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದ್ದು, ಧ್ರುವ ಸರ್ಜಾ ಅವರನ್ನು ಹೊಸ ರೀತಿಯ ಕೌಟುಂಬಿಕ ಪಾತ್ರದಲ್ಲಿ ನೋಡಲು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.