SK Home Ad
Home ನಮ್ಮ ಜಿಲ್ಲೆ ಯಾದಗಿರಿ ಯುವತಿ ಆತ್ಮಹತ್ಯೆ ಪ್ರಕರಣ: ಪತಿ ಸೇರಿ 8 ಮಂದಿಯ ವಿರುದ್ಧ ಪ್ರಕರಣ

ಯುವತಿ ಆತ್ಮಹತ್ಯೆ ಪ್ರಕರಣ: ಪತಿ ಸೇರಿ 8 ಮಂದಿಯ ವಿರುದ್ಧ ಪ್ರಕರಣ

0
72

ಪ್ರೀತಿಸಿ ಮದುವೆಯಾದ ಯುವತಿ ನೇಣಿಗೆ ಶರಣು: ಮದುವೆಯಾಗಿ ವರ್ಷದಲ್ಲೇ ದಾಂಪತ್ಯ ದುರಂತ

ಕೆಂಭಾವಿ (ಯಾದಗಿರಿ) : ಸುರಪುರ ತಾಲೂಕಿನ ಏವೂರ ಸಣ್ಣ ತಾಂಡಾದಲ್ಲಿ 21 ವರ್ಷದ ವಿವಾಹಿತ ಯುವತಿ ನೇಣು ಬಿಗಿದುಕೊಂಡು ಮೃತಪಟ್ಟಿರುವ ಘಟನೆ ನಡೆದಿದೆ. ಈ ಸಂಬಂಧ ಯುವತಿಯ ಪತಿ ಸೇರಿದಂತೆ ಎಂಟು ಮಂದಿಯ ವಿರುದ್ಧ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮೃತ ಯುವತಿಯನ್ನು ಕವಿತಾ (21) ಎಂದು ಗುರುತಿಸಲಾಗಿದೆ. ಅವರು ಏವೂರ ಸಣ್ಣ ತಾಂಡಾದ ಸುನೀಲ್ ಜಾಧವ ಅವರನ್ನು 2025ರ ಮೇ 10ರಂದು ಪ್ರೀತಿಸಿ ವಿವಾಹವಾಗಿದ್ದರು ಎನ್ನಲಾಗಿದೆ.

ಮೃತಳ ತಾಯಿ ಗೀತಾಬಾಯಿ ನೀಡಿದ ದೂರಿನ ಆಧಾರದ ಮೇಲೆ ಸುನೀಲ್ ತಂದೆ ರಮೇಶ ಜಾಧವ, ರಮೇಶ ತಂದೆ ಪಾಂಡು ಜಾಧವ, ಅನಸುಬಾಯಿ ಅಲಿಯಾಸ್ ಅನಸಿಬಾಯಿ, ಸಂತೋಷ, ಸುರೇಶ, ದೇವರಾಜ, ಪ್ರಕಾಶ ಹಾಗೂ ಚಾಂದಿಬಾಯಿ ಸೇರಿದಂತೆ ಎಂಟು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ದೂರಿನ ಪ್ರಕಾರ, ಮದುವೆಯಾದ ಬಳಿಕ ಕವಿತಾಗೆ ಪತಿಯ ಮನೆಯವರು ತಮ್ಮ ಕುಟುಂಬದವರೊಂದಿಗೆ ಮಾತನಾಡದಂತೆ ಒತ್ತಡ ಹೇರಿ, ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಅ.4ರಂದು ಬೆಳಗ್ಗೆ ಕವಿತಾ ಮೃತಪಟ್ಟಿರುವ ಮಾಹಿತಿ ಕುಟುಂಬಸ್ಥರಿಗೆ ತಿಳಿದುಬಂದಿದೆ. ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಮನೆಯ ಹಾಲ್‌ನಲ್ಲಿ ಹಾಸಿಗೆಯ ಮೇಲೆ ಕವಿತಾಳ ಮೃತದೇಹ ಪತ್ತೆಯಾಗಿದೆ. ಕುತ್ತಿಗೆಯ ಸುತ್ತ ಗಾಯದ ಗುರುತು ಹಾಗೂ ಕೈಗಳ ಮೇಲೆ ಕೆಲವು ಬರಹಗಳು ಕಂಡುಬಂದಿದ್ದವು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕೆಂಭಾವಿ ಪೊಲೀಸರು ಸಾವಿನ ನಿಖರ ಕಾರಣ ಹಾಗೂ ದೂರಿನಲ್ಲಿ ಮಾಡಿರುವ ಆರೋಪಗಳ ಕುರಿತು ತನಿಖೆ ಮುಂದುವರಿಸಿದ್ದಾರೆ. ತನಿಖೆಯ ಬಳಿಕವೇ ಘಟನೆಯ ಸಂಪೂರ್ಣ ಸತ್ಯಾಂಶ ತಿಳಿದುಬರಬೇಕಿದೆ.