SK Home Ad
Home ನಮ್ಮ ಜಿಲ್ಲೆ ಬೆಂಗಳೂರು ಶ್ರೀಲ ಪ್ರಭುಪಾದರಿಗೆ ‘ವಿಶ್ವಗುರು’ ಬಿರುದು: ಇಸ್ಕಾನ್‌ನಲ್ಲಿ ಸಂಭ್ರಮೋತ್ಸವ

ಶ್ರೀಲ ಪ್ರಭುಪಾದರಿಗೆ ‘ವಿಶ್ವಗುರು’ ಬಿರುದು: ಇಸ್ಕಾನ್‌ನಲ್ಲಿ ಸಂಭ್ರಮೋತ್ಸವ

0
8

ಬೆಂಗಳೂರು: ಇಸ್ಕಾನ್‌ನ ಸಂಸ್ಥಾಪಕ-ಆಚಾರ್ಯ ಶ್ರೀಲ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರಿಗೆ 2025ರ ಪ್ರಯಾಗರಾಜ ಮಹಾಕುಂಭಮೇಳದಲ್ಲಿ ನೀಡಲಾದ ‘ವಿಶ್ವಗುರು’ ಬಿರುದಿನ ಸ್ಮರಣಾರ್ಥ ಬೆಂಗಳೂರಿನ ರಾಜಾಜಿನಗರದ ಹರೇಕೃಷ್ಣಗಿರಿಯಲ್ಲಿರುವ ಇಸ್ಕಾನ್ ಶ್ರೀರಾಧಾಕೃಷ್ಣ ಮಂದಿರದಲ್ಲಿ ವಿಶೇಷ ಸಂಭ್ರಮೋತ್ಸವ ನಡೆಯಿತು.

ಹರಿದ್ವಾರದ ನಿರಂಜನಿ ಅಖಾಡದ ಆಚಾರ್ಯ ಮಹಾಮಂಡಲೇಶ್ವರ ಶ್ರೀ ಕೈಲಾಶಾನಂದಗಿರಿ ಮಹಾರಾಜರ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಖ್ಯಾತ ವಾಗ್ಮಿ ಹಾಗೂ ಲೇಖಕ ದುಷ್ಯಂತ್ ಶ್ರೀಧರ್, ಇಸ್ಕಾನ್ ಅಧ್ಯಕ್ಷ ಹಾಗೂ ಅಕ್ಷಯಪಾತ್ರ ಪ್ರತಿಷ್ಠಾನದ ಸಂಸ್ಥಾಪಕ-ಅಧ್ಯಕ್ಷ ಮಧುಪಂಡಿತ ದಾಸ, ಇಸ್ಕಾನ್ ಉಪಾಧ್ಯಕ್ಷ ಚಂಚಲಪತಿ ದಾಸ ಸೇರಿದಂತೆ ಭಕ್ತರು, ದಾನಿಗಳು ಪಾಲ್ಗೊಂಡಿದ್ದರು.

ಮಂಗಳಾಚರಣೆ ಮತ್ತು ಹರಿನಾಮ ಸಂಕೀರ್ತನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಬಳಿಕ ಗಣ್ಯರು ಶ್ರೀಲ ಪ್ರಭುಪಾದರ ಕೊಡುಗೆಗಳನ್ನು ಸ್ಮರಿಸಿ ಮಾತನಾಡಿದರು. ಮಹಾಕುಂಭಮೇಳದ ದೃಶ್ಯಾವಳಿಗಳು ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶ್ರೀಲ ಪ್ರಭುಪಾದರ ಸೇವೆಗಳನ್ನು ಶ್ಲಾಘಿಸಿರುವ ವಿಡಿಯೋ ಪ್ರದರ್ಶಿಸಲಾಯಿತು. ಗುರುಪೂಜೆ ಹಾಗೂ ಕೃಷ್ಣಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಶ್ರೀ ಕೈಲಾಶಾನಂದಗಿರಿ ಮಹಾರಾಜರು ಮಾತನಾಡಿ, “ವಿಶ್ವದ ಪ್ರತಿಯೊಬ್ಬರೂ ಯಾರ ಉಪದೇಶಗಳನ್ನು ಅನುಸರಿಸುವುದು ಯೋಗ್ಯವೋ, ಅಂಥವರೇ ‘ವಿಶ್ವಗುರು’ ಬಿರುದಿಗೆ ಅರ್ಹರು. ಪ್ರಸ್ತುತ ಕಾಲದಲ್ಲಿ ಶ್ರೀಲ ಪ್ರಭುಪಾದರನ್ನು ಹೊರತುಪಡಿಸಿ ಈ ಬಿರುದಿಗೆ ಅರ್ಹರಾಗಿರುವ ಮತ್ತೊಬ್ಬರನ್ನು ಕಾಣುತ್ತಿಲ್ಲ” ಎಂದರು.

ದುಷ್ಯಂತ್ ಶ್ರೀಧರ್ ಅವರು, ಶ್ರೀಲ ಪ್ರಭುಪಾದರು ವಿಶ್ವದಾದ್ಯಂತ ಕೃಷ್ಣಭಕ್ತಿಯನ್ನು ಬಿತ್ತಿದ ಮಹತ್ವದ ಆಚಾರ್ಯರಾಗಿದ್ದು, ಮುಂದಿನ ಪೀಳಿಗೆಗಳಿಗೂ ಪ್ರೇರಣೆಯಾಗಿರುತ್ತಾರೆ ಎಂದು ಹೇಳಿದರು. ಮಧುಪಂಡಿತ ದಾಸ ಅವರು, ಪ್ರಯಾಗರಾಜದಲ್ಲಿ ನಡೆದ ‘ವಿಶ್ವಗುರು’ ಗೌರವದ ಕ್ಷಣಗಳನ್ನು ಬೆಂಗಳೂರಿನ ಇಸ್ಕಾನ್‌ನಲ್ಲಿ ಸ್ಮರಿಸುವುದು ಸಂತಸದ ಸಂಗತಿ ಎಂದರು.