ನವದೆಹಲಿ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಕಬಡ್ಡಿಯಲ್ಲಿ ಒಂದೇ ದಿನ ಎರಡು ಚಿನ್ನದ ಪದಕಗಳನ್ನು ಗೆದ್ದು ಸುವರ್ಣ ಸಾಧನೆ ಮಾಡಿದೆ. ಶನಿವಾರ ನಡೆದ ಮಹಿಳಾ ಹಾಗೂ ಪುರುಷರ ಕಬಡ್ಡಿ ಫೈನಲ್‌ಗಳಲ್ಲಿ ಭಾರತ ಎರಡೂ ತಂಡಗಳು ಇರಾನ್‌ನ್ನು ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿವೆ.
ಮೊದಲು ನಡೆದ ಮಹಿಳೆಯರ ಕಬಡ್ಡಿ ಫೈನಲ್‌ನಲ್ಲಿ ಭಾರತ 37-34 ಅಂಕಗಳಿಂದ ಇರಾನ್‌ನ್ನು ಸೋಲಿಸಿತು. ಇದರೊಂದಿಗೆ ಭಾರತೀಯ ಮಹಿಳಾ ತಂಡ ಏಷ್ಯನ್ ಗೇಮ್ಸ್‌ನಲ್ಲಿ ತನ್ನ ಕಬಡ್ಡಿ ಚಿನ್ನದ ಪದಕವನ್ನು ಉಳಿಸಿಕೊಂಡಿದೆ. ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಭಾರತ ಕೊನೆಯ ಹಂತದವರೆಗೂ ಮುನ್ನಡೆ ಕಾಯ್ದುಕೊಂಡು ಗೆಲುವು ದಾಖಲಿಸಿತು.
ಇದಾದ ಬಳಿಕ ಪುರುಷರ ಕಬಡ್ಡಿ ಫೈನಲ್‌ನಲ್ಲೂ ಭಾರತ ಮತ್ತು ಇರಾನ್ ಮುಖಾಮುಖಿಯಾದವು. ಮೊದಲಾರ್ಧದಲ್ಲಿ ಇರಾನ್ 18-17ರ ಮುನ್ನಡೆ ಹೊಂದಿದ್ದರೂ, ದ್ವಿತೀಯಾರ್ಧದಲ್ಲಿ ಭಾರತೀಯ ಆಟಗಾರರು ಭರ್ಜರಿ ಪ್ರದರ್ಶನ ನೀಡಿ ಪಂದ್ಯವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಅಂತಿಮವಾಗಿ ಭಾರತ 40-34 ಅಂಕಗಳಿಂದ ಗೆದ್ದು ಚಿನ್ನದ ಪದಕ ತನ್ನದಾಗಿಸಿಕೊಂಡಿತು.
ಪುರುಷರ ತಂಡದ ಈ ಗೆಲುವು ಏಷ್ಯನ್ ಗೇಮ್ಸ್‌ನ ಪುರುಷರ ಕಬಡ್ಡಿಯಲ್ಲಿ ಭಾರತದ 9ನೇ ಚಿನ್ನದ ಪದಕವಾಗಿದೆ. 2018ರ ಜಕಾರ್ತಾ-ಪಾಲೆಂಬಾಂಗ್ ಕ್ರೀಡಾಕೂಟದಲ್ಲಿ ಮಾತ್ರ ಭಾರತ ಚಿನ್ನ ಗೆಲ್ಲಲು ವಿಫಲವಾಗಿತ್ತು; 2026ರಲ್ಲಿ ಮತ್ತೊಮ್ಮೆ ಪುರುಷರ ಕಬಡ್ಡಿ ಚಿನ್ನವನ್ನು ತನ್ನದಾಗಿಸಿಕೊಂಡಿದೆ.
ಮಹಿಳಾ ಮತ್ತು ಪುರುಷರ ತಂಡಗಳ ಈ ಗೆಲುವಿನಿಂದ ಕಬಡ್ಡಿಯಲ್ಲಿ ಭಾರತಕ್ಕೆ ಒಂದೇ ದಿನ ಎರಡು ಚಿನ್ನದ ಪದಕಗಳು ಲಭಿಸಿವೆ. ಪುರುಷರ ತಂಡದ ಗೆಲುವಿನೊಂದಿಗೆ ಕಬಡ್ಡಿಯಲ್ಲೇ ಭಾರತದ ಚಿನ್ನದ ಪದಕಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ.
ಇದಕ್ಕೂ ಮುನ್ನ 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡ ಚಿನ್ನ ಗೆದ್ದಿತ್ತು. ಇದೀಗ ಕಬಡ್ಡಿಯ ಎರಡೂ ವಿಭಾಗಗಳಲ್ಲಿ ಚಿನ್ನದ ಸಾಧನೆ ಮಾಡಿರುವುದು ಭಾರತದ ಪದಕ ಅಭಿಯಾನಕ್ಕೆ ಮತ್ತಷ್ಟು ಬಲ ನೀಡಿದೆ.
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.






















