SK Home Ad
Home ನಮ್ಮ ಜಿಲ್ಲೆ ವಿಜಯಪುರ ಕೃಷ್ಣಾ ತೀರದ ನೀರಾವರಿ ಹೋರಾಟಗಾರ ಬಸವರಾಜ ಕುಂಬಾರ ಇನ್ನಿಲ್ಲ

ಕೃಷ್ಣಾ ತೀರದ ನೀರಾವರಿ ಹೋರಾಟಗಾರ ಬಸವರಾಜ ಕುಂಬಾರ ಇನ್ನಿಲ್ಲ

0
119

ವಿಜಯಪುರ (ಆಲಮಟ್ಟಿ): ಕೃಷ್ಣಾ ನದಿ ತೀರದ ನೀರಾವರಿ ಹೋರಾಟಗಾರ ನಿಡಗುಂದಿಯ ಬಸವರಾಜ ಕುಂಬಾರ (64) ಗುರುವಾರ ನಿಧನರಾದರು. ಅವರಿಗೆ ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.

ಕೃಷ್ಣಾ ತೀರದ ಜನರಲ್ಲಿ ನೀರಾವರಿ ಜಾಗೃತಿ ಮೂಡಿಸುವ ಸಂಕಲ್ಪದೊಂದಿಗೆ ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿ ಸ್ಥಾಪಿಸಿ, ಅದರ ಮೂಲಕ ಈ ಭಾಗದಲ್ಲಿ ರೈತ ಚಳವಳಿಗೆ ಭದ್ರ ಬುನಾದಿ ಹಾಕಿದವರಲ್ಲಿ ನಿಡಗುಂದಿಯ ಬಸವರಾಜ ಕುಂಬಾರ ಪ್ರಮುಖರು.

ಆಲಮಟ್ಟಿಗೆ ಮುಖ್ಯಮಂತ್ರಿಗಳು ಆಗಮಿಸಿ ಕೃಷ್ಣಾ ನದಿಗೆ ಬಾಗಿನ ಅರ್ಪಿಸಬೇಕು ಎಂಬುದು ಕುಂಬಾರರ ಬಹುಕಾಲದ ಒತ್ತಾಯವಾಗಿತ್ತು. ಆದರೆ, ಮುಖ್ಯಮಂತ್ರಿಗಳ ಆಗಮನಕ್ಕಾಗಿ ಕಾಯದೆ, ರೈತರನ್ನೇ ಸಂಘಟಿಸಿ, ಬಂಡಿಗಳ ಮೂಲಕ ಮೆರವಣಿಗೆ ನಡೆಸಿ, ಪೂರ್ಣಕುಂಭದೊಂದಿಗೆ ಆಲಮಟ್ಟಿಯಲ್ಲಿ ಕೃಷ್ಣಾ ನದಿಗೆ ಬಾಗಿನ ಅರ್ಪಿಸುವ ಪರಂಪರೆಗೆ 2000ರಲ್ಲೇ ಅವರು ಚಾಲನೆ ನೀಡಿದರು.

ಪ್ರತಿ ಕಡ್ಲಿಗರ ಹುಣ್ಣಿಮೆಯಂದು ಕೃಷ್ಣಗೆ ಬಾಗಿನ ಅರ್ಪಿಸುವ ಸಂಪ್ರದಾಯವನ್ನು ಆರಂಭಿಸಿ, ಅನಾರೋಗ್ಯ ಕಾಡುವವರೆಗೂ ಅದನ್ನು ಮುನ್ನಡೆಸಿಕೊಂಡು ಬಂದರು. ಬಾಗಿನ ಜತೆ ನೀರಾವರಿ ತಜ್ಞರನ್ನು ಕರೆಯಿಸಿ ಅವರಿಂದ ಭಾಷಣ ಏರ್ಪಡಿಸುತ್ತಿದ್ದರು. ರಾಜ್ಯದ ಬಹುತೇಕ ಪ್ರಸಿದ್ಧ ರೈತ ಮುಖಂಡರನ್ನು, ಜನಪ್ರತಿನಿಧಿಗಳನ್ನು, ಕನ್ನಡ ಪರ ಸಂಘಟನೆಯ ಮುಖಂಡರನ್ನು ಬಾಗಿನ ಅರ್ಪಿಸುವ ಸಂದರ್ಭದಲ್ಲಿ ಕರೆಯಿಸಿ ಕೃಷ್ಣಯ ಸಮಸ್ಯೆಗಳ ಅರಿವು ಅವರಲ್ಲಿ ಮೂಡಿಸುತ್ತಿದ್ದರು. ಸೇರುತ್ತಿದ್ದ ನೂರಾರು ರೈತರಲ್ಲಿ ನೀರಿನ ಹಿತ ಮಿತ ಬಳಕೆಯ ಬಗ್ಗೆಯೂ ಜಾಗೃತಿ ಮೂಡಿಸುತ್ತಿದ್ದರು.

ಅವರ ಈ ವಿಶಿಷ್ಟ ಪ್ರಯತ್ನ ರಾಜ್ಯದ ಗಮನ ಸೆಳೆಯಿತು. ನಂತರ 2002ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಸರ್ಕಾರವೇ ಆಲಮಟ್ಟಿಗೆ ಆಗಮಿಸಿ ಅಧಿಕೃತವಾಗಿ ಬಾಗಿನ ಅರ್ಪಿಸುವ ಪರಂಪರೆಗೆ ಚಾಲನೆ ನೀಡಿತು.

ಹೀಗೆ ಇಂದು ಆಲಮಟ್ಟಿಯಲ್ಲಿ ಕಾಣುವ ಬಾಗಿನ ಸಂಪ್ರದಾಯದ ಹಿಂದೆ ಒಬ್ಬ ಸಾಮಾನ್ಯ ರೈತ ಹೋರಾಟಗಾರನ ಅಸಾಮಾನ್ಯ ಕನಸು ಮತ್ತು ಹೋರಾಟದ ಹೆಜ್ಜೆಗಳಿದ್ದವು.