SK Home Ad
Home ಸುದ್ದಿ ರಾಜ್ಯ ರೈತರ ಸಂಕಷ್ಟದ ನಡುವೆ ಬರದ ‘ಸಂಭ್ರಮ’! ಜಗಳೂರಿನಲ್ಲಿ ಶಾಸಕರ ನಡೆಗೆ ಜನರ ಆಕ್ಷೇಪ

ರೈತರ ಸಂಕಷ್ಟದ ನಡುವೆ ಬರದ ‘ಸಂಭ್ರಮ’! ಜಗಳೂರಿನಲ್ಲಿ ಶಾಸಕರ ನಡೆಗೆ ಜನರ ಆಕ್ಷೇಪ

0
57

ದಾವಣಗೆರೆ: ಬರದಿಂದ ರೈತರು ಸಂಕಷ್ಟದಲ್ಲಿರುವ ಹೊತ್ತಿನಲ್ಲೇ ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ. ದೇವೇಂದ್ರಪ್ಪ ಅವರ ಹೆಸರಿನಲ್ಲಿ ಪ್ರಕಟವಾಗಿರುವ ‘ಬರ ತಾಲೂಕು ಪಟ್ಟಿಗೆ ಸೇರಿದ ಹಿನ್ನೆಲೆ ಸಂಭ್ರಮೋತ್ಸವ’ದ ಆಹ್ವಾನ ಪತ್ರಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ.

ಶಾಸಕರ ಹೆಸರಿನಲ್ಲಿ ಹರಿದಾಡುತ್ತಿರುವ ಪೋಸ್ಟರ್‌ನಲ್ಲಿ ಸೆ. 23ರಂದು ಸಂಜೆ 4 ಗಂಟೆಗೆ ಜಗಳೂರು ಪಟ್ಟಣದ ಮಹಾತ್ಮ ಗಾಂಧಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ‘ಸಂಭ್ರಮೋತ್ಸವ’ ಆಚರಿಸಲಾಗುವುದು ಎಂದು ಉಲ್ಲೇಖಿಸಲಾಗಿದೆ. ಬರ ತಾಲೂಕು ಪಟ್ಟಿಗೆ ಜಗಳೂರು ಸೇರ್ಪಡೆಯಾದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪೋಸ್ಟರ್‌ನಲ್ಲಿ ತಿಳಿಸಲಾಗಿದೆ.

ಆದರೆ, ಬರ ಎಂಬುದು ಸಂಭ್ರಮಿಸುವ ವಿಚಾರವೇ? ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಮಳೆ ಕೊರತೆ, ಬಿತ್ತನೆ ಕುಂಠಿತ, ಬೆಳೆ ನಷ್ಟ ಸೇರಿದಂತೆ ಹಲವು ಸಮಸ್ಯೆಗಳಿಂದ ರೈತರು ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ಬರ ಘೋಷಣೆಯನ್ನು ಸಂಭ್ರಮದ ಕಾರ್ಯಕ್ರಮವಾಗಿ ಆಚರಿಸುವುದು ಸೂಕ್ತವೇ ಎಂಬ ಚರ್ಚೆ ಆರಂಭವಾಗಿದೆ.

ಜಗಳೂರನ್ನು ಬರಪೀಡಿತ ತಾಲೂಕು ಎಂದು ಘೋಷಿಸುವಂತೆ ರೈತರು ಹಲವು ದಿನಗಳಿಂದ ಹೋರಾಟ ನಡೆಸುತ್ತಿದ್ದರು. ಸೆ. 21ರಂದು ಕೂಡ ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಜಗಳೂರನ್ನು ಕೈಬಿಟ್ಟಿರುವುದನ್ನು ವಿರೋಧಿಸಿ ಬಂದ್ ನಡೆಸಲಾಗಿತ್ತು. ರೈತ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳು ಬರ ಘೋಷಣೆಗೆ ಒತ್ತಾಯಿಸಿದ್ದವು.

ಇದೇ ವೇಳೆ, ಜಗಳೂರನ್ನು ತೀವ್ರ ಬರಪೀಡಿತ ತಾಲೂಕು ಎಂದು ಘೋಷಿಸಿ ರೈತರಿಗೆ ಅಗತ್ಯ ಪರಿಹಾರ ಕಲ್ಪಿಸಬೇಕು ಎಂದು ಸಂಸದೆ ಪ್ರಭಾ ಮಲ್ಲಿಕಾರ್ಜುನ ಅವರು ಸೆ. 21ರಂದು ಸರ್ಕಾರವನ್ನು ಒತ್ತಾಯಿಸಿದ್ದರು. ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದು, ರೈತರು ಸಂಕಷ್ಟದಲ್ಲಿದ್ದಾರೆ ಎಂದು ಅವರು ಹೇಳಿದ್ದರು.

ಹೀಗಾಗಿ, ಬರ ಘೋಷಣೆಯಿಂದ ರೈತರಿಗೆ ಪರಿಹಾರ, ಬೆಳೆ ನಷ್ಟ ಪರಿಹಾರ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಸೇರಿದಂತೆ ನೆರವು ಸಿಗಬೇಕಿರುವ ಸಂದರ್ಭದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚುವ ‘ಸಂಭ್ರಮೋತ್ಸವ’ ಎಷ್ಟು ಸಮಂಜಸ? ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ.

ಬರ ಘೋಷಣೆ ರೈತರಿಗೆ ಸಿಗಬೇಕಾದ ಪರಿಹಾರ ಮತ್ತು ಸರ್ಕಾರಿ ನೆರವಿನ ಮೊದಲ ಹೆಜ್ಜೆಯಾಗಬೇಕೇ ಹೊರತು ಸಂಭ್ರಮದ ಕಾರಣವಾಗಬೇಕೇ? ಎಂಬ ಚರ್ಚೆಗೂ ಈ ಪೋಸ್ಟರ್ (https://www.facebook.com/photo?fbid=122115112389418079&set=a.122100325101418079) ಕಾರಣವಾಗಿದೆ.