SK Home Ad
Home ನಮ್ಮ ಜಿಲ್ಲೆ ಬೆಂಗಳೂರು CMRS ತಪಾಸಣೆಗೆ BMRCL ಸಿದ್ಧತೆ: ಅಕ್ಟೋಬರ್‌ನಲ್ಲೇ ಓಪನ್ ಆಗಲಿದೆಯಾ ನಮ್ಮ ಮೆಟ್ರೋ ಪಿಂಕ್ ಲೈನ್?

CMRS ತಪಾಸಣೆಗೆ BMRCL ಸಿದ್ಧತೆ: ಅಕ್ಟೋಬರ್‌ನಲ್ಲೇ ಓಪನ್ ಆಗಲಿದೆಯಾ ನಮ್ಮ ಮೆಟ್ರೋ ಪಿಂಕ್ ಲೈನ್?

0
23

ಬೆಂಗಳೂರು: ರಾಜಧಾನಿಯ ಬಹುನಿರೀಕ್ಷಿತ ‘ನಮ್ಮ ಮೆಟ್ರೋ’ ಪಿಂಕ್ ಲೈನ್‌ನ ಎಲಿವೇಟೆಡ್ ಮಾರ್ಗ ಶೀಘ್ರದಲ್ಲೇ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ದಟ್ಟವಾಗಿದೆ. ಅಗತ್ಯ ಸಿದ್ಧತೆಗಳು ವೇಗವಾಗಿ ನಡೆಯುತ್ತಿದ್ದು, ಎಲ್ಲವೂ ಅಂದುಕೊಂಡಂತೆ ಸಾಗಿದರೆ ಅಕ್ಟೋಬರ್ ಮಧ್ಯಭಾಗದಲ್ಲಿ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗುವ ನಿರೀಕ್ಷೆಯಿದೆ.

ಈಗಾಗಲೇ ಸ್ವತಂತ್ರ ಏಜೆನ್ಸಿಯಿಂದ ಮಾರ್ಗದ ಸುರಕ್ಷತೆ ಹಾಗೂ ಫಿಟ್‌ನೆಸ್ ಪರಿಶೀಲನೆ ಪೂರ್ಣಗೊಂಡಿದ್ದು, ಬಿಎಂಆರ್‌ಸಿಎಲ್ (BMRCL) ಕೈಗೆ ಐಎಸ್‌ಐ ಪ್ರಮಾಣಪತ್ರ ತಲುಪಿದೆ. ಈ ಬೆನ್ನಲ್ಲೇ ರೈಲ್ವೆ ಸುರಕ್ಷತಾ ಆಯುಕ್ತರ (CMRS) ಅಂತಿಮ ಹಂತದ ಪರಿಶೀಲನೆಗಾಗಿ BMRCL ಅಗತ್ಯ ದಾಖಲೆಗಳನ್ನು ಸಲ್ಲಿಸಲು ಮುಂದಾಗಿದೆ. ಅಕ್ಟೋಬರ್ ಆರಂಭದಲ್ಲೇ ಸಿಎಂಆರ್‌ಎಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸತತ 2 ದಿನಗಳ ಕಾಲ ಸಮಗ್ರ ತಪಾಸಣೆ ನಡೆಸಲಿದ್ದಾರೆ.

ಸಿಎಂಆರ್‌ಎಸ್ ತಪಾಸಣೆ ಪೂರ್ಣಗೊಂಡು ಹಸಿರು ನಿಶಾನೆ ಸಿಕ್ಕಿದ ವಾರದೊಳಗೆ ರೈಲ್ವೆ ಮಂಡಳಿಯಿಂದ ಅಂತಿಮ ಅನುಮತಿ ದೊರೆಯಲಿದೆ. ಅನುಮೋದನೆ ಸಿಕ್ಕ ತಕ್ಷಣವೇ ಉದ್ಘಾಟನೆಗೆ ದಿನಾಂಕ ನಿಗದಿಯಾಗಲಿದೆ. ಆರಂಭಿಕ ಹಂತದಲ್ಲಿ ಈ ಮಾರ್ಗದಲ್ಲಿ ಒಟ್ಟು 6 ಮೆಟ್ರೋ ರೈಲುಗಳು ಕಾರ್ಯಾಚರಣೆ ನಡೆಸಲಿವೆ.

ಸಾರ್ವಜನಿಕರ ಅನುಕೂಲಕ್ಕಾಗಿ ಪೀಕ್ ಅವರ್‌ನಲ್ಲಿ ಪ್ರತಿ 6 ನಿಮಿಷಕ್ಕೊಂದು ರೈಲು ಹಾಗೂ ಸಾಮಾನ್ಯ ಅವಧಿಯಲ್ಲಿ ಪ್ರತಿ 10 ನಿಮಿಷಕ್ಕೊಮ್ಮೆ ರೈಲು ಸಂಚರಿಸುವಂತೆ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ. ಈ ಮಾರ್ಗ ಓಪನ್ ಆದ್ರೆ ನಗರದ ಸಾರಿಗೆ ವ್ಯವಸ್ಥೆಗೆ ಮತ್ತಷ್ಟು ವೇಗ ಸಿಗಲಿದೆ.