ಮುಂಬೈ: ಅಮೆರಿಕಾಗೆ ತೆರಳುವ ಜಿಯೋ ಗ್ರಾಹಕರಿಗೆ ಮೊಬೈಲ್ ರೋಮಿಂಗ್ ಅನುಭವ ಈಗ ಬದಲಾಗಲಿದೆ. ಭಾರತದಿಂದ ಅಮೆರಿಕ ತಲುಪಿದ ಮೇಲೆ ಜಿಯೋ ಬಳಕೆದಾರರು ಟಿ-ಮೊಬೈಲ್‌ನ 5ಜಿ ಸ್ಟ್ಯಾಂಡ್‌ಅಲೋನ್ ನೆಟ್‌ವರ್ಕ್‌ನಲ್ಲಿ ರೋಮಿಂಗ್ ಮಾಡಬಹುದು.
ಅದೇ ರೀತಿ ಅಮೆರಿಕದಿಂದ ಭಾರತಕ್ಕೆ ಬರುವ ಟಿ-ಮೊಬೈಲ್ ಗ್ರಾಹಕರು ಜಿಯೋ 5ಜಿ ಸ್ಟ್ಯಾಂಡ್‌ಅಲೋನ್ ನೆಟ್‌ವರ್ಕ್ ಬಳಸಬಹುದು. ಎರಡೂ ಕಂಪನಿಗಳ ಮಾಹಿತಿ ಪ್ರಕಾರ, ಎರಡು ದೇಶಗಳ 5ಜಿ ಸ್ಟ್ಯಾಂಡ್‌ಅಲೋನ್ ನೆಟ್‌ವರ್ಕ್‌ಗಳನ್ನು ರೋಮಿಂಗ್ ಮೂಲಕ ಈ ರೀತಿ ಜೋಡಿಸುತ್ತಿರುವುದು ವಿಶ್ವದಲ್ಲೇ ಇದು ಮೊದಲು.
ಸರಳವಾಗಿ ಹೇಳುವುದಾದರೆ, ದೇಶ ಬದಲಾದರೂ ಗ್ರಾಹಕರಿಗೆ 5ಜಿ ಹೊಸ ನೆಟ್‌ವರ್ಕ್‌ನಲ್ಲಿ ರೋಮಿಂಗ್ ಪ್ರಯೋಜನ ಸಿಗುತ್ತಲೇ ಇರುತ್ತದೆ. ಇದರಿಂದ ವೇಗದ ಇಂಟರ್ನೆಟ್, ಕಡಿಮೆ ಲೇಟೆನ್ಸಿ ಮತ್ತು ಹೆಚ್ಚು ವಿಶ್ವಾಸಾರ್ಹ ಸಂಪರ್ಕ ಸಿಗಲಿದೆ.
ಅಂದರೆ ವಿಡಿಯೋ ಸ್ಟ್ರೀಮಿಂಗ್ ಆಗಿರಲಿ, ಪ್ರವಾಸದ ರೀಲ್ ಹಂಚಿಕೊಳ್ಳುವುದಾಗಿರಲಿ ಅಥವಾ ಆಫೀಸ್ ಆಪ್‌ಗಳನ್ನು ಬಳಸುವುದಾಗಿರಲಿ, ಭಾರತ ಮತ್ತು ಅಮೆರಿಕದಲ್ಲಿ 5ಜಿ ಅನುಭವ ಹೆಚ್ಚು ಸುಲಭ ಮತ್ತು ತಡೆರಹಿತವಾಗಿರುತ್ತದೆ.
ಸದ್ಯಕ್ಕೆ ಈ 5ಜಿ ಸ್ಟ್ಯಾಂಡ್‌ಅಲೋನ್ ರೋಮಿಂಗ್ ಸಂಪರ್ಕವು ಜಿಯೋ ಮತ್ತು ಟಿ-ಮೊಬೈಲ್ ನೆಟ್‌ವರ್ಕ್‌ಗಳ ನಡುವೆ ಇದೆ. ಅಂದರೆ ಭಾರತ ಮತ್ತು ಅಮೆರಿಕದ ನಡುವೆ ಪ್ರಯಾಣಿಸುವ ಈ ಎರಡೂ ಕಂಪನಿಗಳ ಗ್ರಾಹಕರಿಗೆ ಇದರ ನೇರ ಲಾಭ ಸಿಗಲಿದೆ.
ಟಿ-ಮೊಬೈಲ್‌ನ ಮುಖ್ಯ ನೆಟ್‌ವರ್ಕ್ ಅಧಿಕಾರಿ ಅಂಕುರ್ ಕಪೂರ್ ಮಾತನಾಡಿ, ಒಂದು ದೇಶದಿಂದ ಮತ್ತೊಂದು ದೇಶಕ್ಕೆ ತಲುಪಿದರೂ ಗ್ರಾಹಕರ 5ಜಿ ಅನುಭವ ಸುಲಭವಾಗಿ ಮುಂದುವರಿಯುತ್ತದೆ. ಅವರು ಸ್ಟ್ರೀಮಿಂಗ್ ಮಾಡುತ್ತಿರಲಿ, ಪ್ರವಾಸದ ರೀಲ್ ಹಂಚಿಕೊಳ್ಳುತ್ತಿರಲಿ ಅಥವಾ ಬಿಜಿನೆಸ್ ಆಪ್‌ಗಳನ್ನು ಬಳಸುತ್ತಿರಲಿ ಗ್ರಾಹಕರ 5ಜಿ ಅನುಭವ ಮುಂದುವರಿಯುತ್ತದೆ ಎಂದಿದ್ದಾರೆ. ಇದು ಈ ತಂತ್ರಜ್ಞಾನದ ದೊಡ್ಡ ಶಕ್ತಿ ಎಂದು ಅವರು ಬಣ್ಣಿಸಿದ್ದಾರೆ.
ಜಿಯೋ ಹೆಡ್-ಇಂಟರ್ ನ್ಯಾಷನಲ್ ನೆಟ್‌ವರ್ಕ್, ಪಾರ್ಟನರ್‌ಶಿಪ್ ಅಂಡ್ ಸರ್ವೀಸಸ್ ಮಾರ್ಕ್ ಯಾರ್ಕೊಸ್ಕಿ ಮಾತನಾಡಿ, ಈ ಸಾಧನೆ ಕೇವಲ ರೋಮಿಂಗ್‌ಗೆ ಮಾತ್ರ ಸೀಮಿತವಾಗಿಲ್ಲ. ಎರಡೂ 5ಜಿ ಸ್ಟ್ಯಾಂಡ್‌ಅಲೋನ್ ನೆಟ್‌ವರ್ಕ್‌ಗಳು ಒಂದಾಗಿರುವುದು ಮುಂದಿನ ದಿನಗಳಲ್ಲಿ ಗ್ರಾಹಕರು ಮತ್ತು ವ್ಯವಹಾರಗಳಿಗೆ ಹೊಸ ಸೇವೆಗಳೊಂದಿಗೆ ಎಐ ಆಧಾರಿತ ಸೇವೆಗಳಿಗೂ ದಾರಿ ಮಾಡಿಕೊಡಬಹುದು ಎಂದಿದ್ದಾರೆ.
ಈ ರೋಮಿಂಗ್ ಸಂಪರ್ಕವನ್ನು ಸಾಧ್ಯವಾಗಿಸುವಲ್ಲಿ ಸಿನಿವರ್ಸ್ (Syniverse) ಪ್ಲಾಟ್‌ಫಾರ್ಮ್ ಪ್ರಮುಖ ಪಾತ್ರ ವಹಿಸಿದೆ, ಇದು ಜಿಯೋ ಮತ್ತು ಟಿ-ಮೊಬೈಲ್ ನೆಟ್‌ವರ್ಕ್‌ಗಳನ್ನು ಸುರಕ್ಷಿತ ರೀತಿಯಲ್ಲಿ ಪರಸ್ಪರ ಜೋಡಿಸಲು ಸಹಾಯ ಮಾಡಿದೆ.






















