ಬೆಂಗಳೂರು: ದೇಶದ ಯುವ ಜನರಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ʻಯೂತ್ 4 ಇಂಪ್ಯಾಕ್ಟ್’ (Youth 4 Impact) ರಾಷ್ಟ್ರೀಯ ಕಾರ್ಯಕ್ರಮಕ್ಕೆ ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾಲಯದಲ್ಲಿ (ಪಿಇಎಸ್ ಯೂನಿವರ್ಸಿಟಿ) ವಿದ್ಯಾರ್ಥಿಗಳ ಸಮ್ಮುಖದಲ್ಲಿ ಇಂದು ಚಾಲನೆ ನೀಡಲಾಯಿತು. ಇಡೀ ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿಯೇ ಈ ಯೂತ್ ನಾಯಕತ್ವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ʻಜಾಗೃತಿ ಯಾತ್ರಾ’ ಮತ್ತು ʻಐಸೆಕ್’ (ಎಐಇಎಸ್ ಇಸಿ) ಸಂಸ್ಥೆಗಳು ʻರಿಲಯನ್ಸ್ ಫೌಂಡೇಶನ್’ ಹಾಗೂ ʻರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್’ (ಆರ್‌ಸಿಪಿಎಲ್) ಸಹಯೋಗದೊಂದಿಗೆ ಈ ಯೋಜನೆಯನ್ನು ಕೈಗೆತ್ತಿಕೊಂಡಿವೆ. ಭಾರತದಾದ್ಯಂತ ಒಟ್ಟು 3,600ಕ್ಕೂ ಹೆಚ್ಚು ಯುವಕರನ್ನು ತಲುಪುವ ಗುರಿ ಹೊಂದಲಾಗಿದ್ದು, ಮೊದಲ ಹಂತವಾಗಿ ಬೆಂಗಳೂರಿನ 600 ಯುವಜನರಿಗೆ ತರಬೇತಿ ಹಾಗೂ ಮಾರ್ಗದರ್ಶನ ಸಿಗಲಿದೆ.
ಈ ಕಾರ್ಯಕ್ರಮದ ವಿಶೇಷತೆಗಳೇನು?:
4 ಪ್ರಮುಖ ಕ್ಷೇತ್ರಗಳು: ಶಿಕ್ಷಣ, ಉದ್ಯೋಗ ಸನ್ನದ್ಧತೆ, ಪರಿಸರ ಸಂರಕ್ಷಣೆ ಮತ್ತು ವಿಶೇಷ ಕಾಳಜಿ ಅಗತ್ಯವಿರುವ ಸಮುದಾಯಗಳ ಕುರಿತು ಯುವಕರಿಗೆ ತರಬೇತಿ ನೀಡಲಾಗುತ್ತದೆ.
ಪ್ರತ್ಯಕ್ಷ ಅನುಭವ: ಕೇವಲ ಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ, ಯುವಕರು ನೇರವಾಗಿ ಸಮಾಜಕ್ಕೆ ಇಳಿದು ಕೆಲಸ ಮಾಡುವ ಮೂಲಕ ನೈಜ ಸವಾಲುಗಳನ್ನು ಅರ್ಥೈಸಿಕೊಳ್ಳಲಿದ್ದಾರೆ.
ಇಂಟರ್ನ್‌ಷಿಪ್ ಅವಕಾಶ: ಯಶಸ್ವಿಯಾಗಿ ತರಬೇತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಇಂಟರ್ನ್‌ಷಿಪ್ ಮಾಡಲು ಅವಕಾಶ ಸಿಗಲಿದೆ.
ಜಾಗೃತಿ ಯಾತ್ರೆ 2026ಗೆ ಆಯ್ಕೆ: ಈ ಅಭಿಯಾನದಲ್ಲಿ ಅತ್ಯುತ್ತಮ ನಾಯಕತ್ವ ಪ್ರದರ್ಶಿಸುವ 20 ವಿದ್ಯಾರ್ಥಿಗಳನ್ನು ʻಜಾಗೃತಿ ಯಾತ್ರೆ 2026’ಗೆ ಆಯ್ಕೆ ಮಾಡಲಾಗುತ್ತದೆ.
“ಯುವಜನರು ತಮಗೆ ಅಭ್ಯಾಸವಿರುವ ಗಡಿಗಳನ್ನು ದಾಟಿ ಹೊರಬಂದಾಗ ಮಾತ್ರ ತಮ್ಮ ನಿಜವಾದ ಸಾಮರ್ಥ್ಯವನ್ನು ಗುರುತಿಸಲು ಸಾಧ್ಯ. ದೇಶದ ನೈಜ ಪರಿಸ್ಥಿತಿಯನ್ನು ಹತ್ತಿರದಿಂದ ತಿಳಿಸಿಕೊಡುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ” ಎಂದು ಜಾಗೃತಿ ಯಾತ್ರೆಯ ಸಿಒಒ ಚಿನ್ಮಯ್ ವಡ್ನೇರೆ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು ಮಾಹಿತಿ: 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ಈ ಉಚಿತ ನಾಯಕತ್ವ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಬಹುದು. ಬೆಂಗಳೂರು ಸೇರಿದಂತೆ ಪುಣೆ, ಕೋಲ್ಕತಾ, ಸೂರತ್, ಹೈದರಾಬಾದ್, ವಿಶಾಖಪಟ್ಟಣಂ ಮತ್ತು ದೆಹಲಿ ನಗರಗಳ ವಿದ್ಯಾರ್ಥಿಗಳಿಗೆ ಅವಕಾಶವಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24 ಸೆಪ್ಟೆಂಬರ್ 2026
ವೆಬ್‌ಸೈಟ್: https://y4i.aiesec.in/



















