ನಿಶಿನ್ (ಜಪಾನ್): ಮಹಿಳೆಯರ ಏಷ್ಯನ್ ಗೇಮ್ಸ್ ಕ್ರಿಕೆಟ್‌ನ 2ನೇ ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಮಹಿಳಾ ತಂಡ 114 ರನ್‌ಗಳ ಭರ್ಜರಿ ಗೆಲುವು ದಾಖಲಿಸಿ ಫೈನಲ್‌ಗೆ ಪ್ರವೇಶಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮಹಿಳಾ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 195 ರನ್ ಗಳಿಸಿತು. ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಸ್ಫೋಟಕ ಬ್ಯಾಟಿಂಗ್ ನಡೆಸಿ ಕೇವಲ 49 ಎಸೆತಗಳಲ್ಲಿ 100 ರನ್ ಸಿಡಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಹಾಗೂ 9 ಸಿಕ್ಸರ್‌ಗಳು ಸೇರಿದ್ದವು. ಸ್ಮೃತಿ ಮಂದಾನ 37 ರನ್ ಗಳಿಸಿದರೆ, ನಾಯಕಿ ಹರ್ಮನ್‌ಪ್ರೀತ್ ಕೌರ್ 33 ಎಸೆತಗಳಲ್ಲಿ 40 ರನ್ ಕೊಡುಗೆ ನೀಡಿದರು.
196 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಬಾಂಗ್ಲಾದೇಶ ತಂಡ ಭಾರತದ ಬೌಲರ್‌ಗಳ ದಾಳಿಗೆ ತತ್ತರಿಸಿ 15.4 ಓವರ್‌ಗಳಲ್ಲಿ 81 ರನ್‌ಗಳಿಗೆ ಆಲೌಟ್ ಆಯಿತು. ದಿಲಾರಾ ಅಕ್ತರ್ 27 ರನ್ ಗಳಿಸಿದ್ದು ತಂಡದ ಪರ ಗರಿಷ್ಠ ಸ್ಕೋರ್ ಆಯಿತು.
ಭಾರತದ ಪರ ದೀಪ್ತಿ ಶರ್ಮಾ ಮತ್ತು ನಂದಿನಿ ಶರ್ಮಾ ತಲಾ 3 ವಿಕೆಟ್, ಶ್ರೇಯಾಂಕಾ ಪಾಟೀಲ್ 1 ವಿಕೆಟ್ ಪಡೆದು ಬಾಂಗ್ಲಾದೇಶದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಶಫಾಲಿ ವರ್ಮಾ ಅವರ ಶತಕ ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಭಾರತ 114 ರನ್‌ಗಳ ಭರ್ಜರಿ ಜಯ ಸಾಧಿಸಿದೆ.
22ರಂದು ಫೈನಲ್ ಪಂದ್ಯ: ಭಾರತ ತಂಡ ಸೆಪ್ಟೆಂಬರ್ 22ರಂದು ನಡೆಯಲಿರುವ ಚಿನ್ನದ ಪದಕದ ಫೈನಲ್‌ನಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಮೊದಲ ಸೆಮಿಫೈನಲ್‌ನಲ್ಲಿ ಪಂದ್ಯದಲ್ಲಿ ಶ್ರೀಲಂಕಾ ತಂಡವು ಪಾಕಿಸ್ತಾನವನ್ನು 8 ವಿಕೆಟ್‌ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿದೆ.






















