ದಾವಣಗೆರೆ: ನಗರದ ಪಿ.ಬಿ. ರಸ್ತೆಯ ಲಿಕ್ಕರ್ ಸ್ಟೋರ್‌ನಲ್ಲಿ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಕೆಟಿಜೆ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸೆ. 17ರಂದು ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಿ.ಬಿ. ರಸ್ತೆಯ ಲಿಕ್ಕರ್ ಸ್ಟೋರ್‌ನಲ್ಲಿ ದಾವಣಗೆರೆ ನಿವಾಸಿ ಆಂಜನೇಯ ಎಂಬುವವರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಬಿಎನ್‌ಎಸ್‌ನ ಕಲಂ 109(1), 115(2), 351(2), 352 ಹಾಗೂ 3(5)ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಭಾರತ್ ಕಾಲೋನಿ ನಿವಾಸಿಗಳಾದ ಕಿರಣ್‌ಕುಮಾರ್ @ ಆಳಿಲು ಹಾಗೂ ರೌಡಿ ಆಸಾಮಿ ಆಕಾಶ್ @ ಮುರುಗ ಅವರನ್ನು ಪತ್ತೆ ಮಾಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳಿಂದ ಕೊಲೆಗೆ ಪ್ರಯತ್ನಿಸಲು ಬಳಸಿದ್ದ ಡ್ಯಾಗರ್ (ಚಾಕು) ಸೇರಿದಂತೆ ಇತರೆ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಮುಂದುವರಿಸಿದ್ದಾರೆ.






















