‘ಬಿಗ್ ಬಾಸ್ ಕನ್ನಡ ಸೀಸನ್-13’ರ ಮೊದಲ ವಾರದಲ್ಲೇ ಎಲಿಮಿನೇಟ್ ಆಗಿ ಹೊರಬಂದಿರುವ ನಟಿ ಪ್ರಥಮಾ ಪ್ರಸಾದ್, ಮನೆಯಿಂದ ಹೊರಬಿದ್ದ ನಂತರ ಶೋ ಅನುಭವ, ವೈಷ್ಣವಿ ಉಡುಗೆ ಕುರಿತ ಚರ್ಚೆ ಹಾಗೂ ಟ್ರೋಲರ್‌ಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಮನೆಯಲ್ಲಿ ವೈಷ್ಣವಿ ಬಟ್ಟೆ ಕುರಿತು ಅವಿನಾಶ್ ನೀಡಿದ್ದ ಸಲಹೆ ಬಗ್ಗೆ ಪ್ರತಿಕ್ರಿಯಿಸಿದ ಪ್ರಥಮಾ, “ಬಟ್ಟೆ ಧರಿಸುವುದು ಅವರವರ ಅಭಿರುಚಿ. ಅವಿನಾಶ್ ಯಾವುದೇ ಕೆಟ್ಟ ಉದ್ದೇಶದಿಂದ ಹಾಗೆ ಹೇಳಿಲ್ಲ ಎಂಬುದು ನನ್ನ ಅನಿಸಿಕೆ” ಎಂದು ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಮೂರು ಬಾರಿ ಬಿಗ್ ಬಾಸ್ ಆಫರ್ ನಿರಾಕರಿಸಿದ್ದ ಅವರು, ವೃತ್ತಿಜೀವನಕ್ಕೆ ವೇಗ ಸಿಗಲಿದೆ ಎಂಬ ಭರವಸೆಯಿಂದ ಈ ಬಾರಿ ಒಪ್ಪಿಕೊಂಡಿದ್ದರು.
ಇನ್ನು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿರುವ ಪ್ರಥಮಾ, ಮೊದಲ ವಾರದಲ್ಲೇ ಹೊರಬಂದಿದ್ದರೂ ಇದನ್ನು ಸೋಲು ಎಂದು ಪರಿಗಣಿಸುವುದಿಲ್ಲ ಎಂದಿದ್ದಾರೆ. “ನಾನು ನನ್ನ ಅತ್ಯುತ್ತಮ ಪ್ರದರ್ಶನ ನೀಡಿದ್ದೇನೆ” ಎಂದು ಹೇಳುತ್ತಾ, ತಮಗೆ ವೋಟ್ ಮಾಡಿದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಇದೇ ವೇಳೆ ತಮ್ಮನ್ನು ಕಟುವಾಗಿ ಟ್ರೋಲ್ ಮಾಡಿದವರಿಗೆ ತಿರುಗೇಟು ನೀಡಿದ ಅವರು, “ಕೆಲವರು ದ್ವೇಷ ವ್ಯಕ್ತಪಡಿಸಿ ವೀಡಿಯೊ ಮಾಡಿದ್ದಾರೆ. ಅಂತಹ ಕೆಲಸಗಳಿಂದ ಅವರ ಮನೆ ನಡೆಯುತ್ತದೆ ಎಂದಾದರೆ ನನಗೆ ಸಂತೋಷವೇ” ಎಂದು ಹಗುರ ಧಾಟಿಯಲ್ಲಿ ಹೇಳಿದ್ದಾರೆ.





















