ಒಂದೇ ಕುಟುಂಬದ ನಾಲ್ವರು ಸಜೀವ ದಹನ; ಇಬ್ಬರಿಗೆ ಗಂಭೀರ ಗಾಯ
ಬೆಳಗಾವಿ: ಗಣೇಶೋತ್ಸವದ ಸಂಭ್ರಮದ ನಡುವೆಯೇ ಬೆಳಗಾವಿ ನಗರದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರು ಸಜೀವ ದಹನಗೊಂಡು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ನಗರದ ಚವ್ಹಾಟಗಲ್ಲಿಯಲ್ಲಿ ತಡರಾತ್ರಿ ನಡೆದಿದೆ.
ಮನೆಯಲ್ಲಿದ್ದ ಫ್ರಿಜ್ ಸ್ಫೋಟಗೊಂಡ ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದು, ಕ್ಷಣಾರ್ಧದಲ್ಲೇ ಇಡೀ ಮನೆಗೆ ಬೆಂಕಿ ಆವರಿಸಿದೆ ಎನ್ನಲಾಗಿದೆ. ಮನೆಯೊಳಗಿದ್ದವರು ಬೆಂಕಿಯಿಂದ ಹೊರಬರಲು ಸಾಧ್ಯವಾಗದೆ ಸಿಲುಕಿಕೊಂಡ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಅಗ್ನಿ ಅವಘಡದಲ್ಲಿ ಗಜಾನನ ದಮೋನೆ (65), ರೋಷನ ದಮೋನೆ (21), ಶಾರಧಾ ದಮೋನೆ (45) ಹಾಗೂ ಭಾರತಿ ರದಮೋನೆ (50) ಮೃತಪಟ್ಟಿದ್ದಾರೆ.
ಇದೇ ವೇಳೆ ಪ್ರಿಯಾ ದಮೋನೆ (28) ಹಾಗೂ ಗಂಗಾ ದಮೋನೆ (25) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತ ಕುಟುಂಬ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿತ್ತು ಎಂದು ತಿಳಿದುಬಂದಿದೆ. ಗಣೇಶ ಚತುರ್ಥಿಯ ದಿನವೇ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವುದು ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ತೀವ್ರ ಆಘಾತ ಮತ್ತು ದುಃಖಕ್ಕೆ ಕಾರಣವಾಗಿದೆ.
ಘಟನೆ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿ ಅವಘಡಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿದಿದೆ.






















