SK Home Ad
Home ನಮ್ಮ ಜಿಲ್ಲೆ ಶಿವಮೊಗ್ಗ ಅನುಮತಿ ಪಡೆಯದೆ ವಿದೇಶ ಪ್ರವಾಸ: ವಿಶ್ವವಿದ್ಯಾಲಯ ಉಪಕುಲಪತಿಗೆ ನೋಟಿಸ್

ಅನುಮತಿ ಪಡೆಯದೆ ವಿದೇಶ ಪ್ರವಾಸ: ವಿಶ್ವವಿದ್ಯಾಲಯ ಉಪಕುಲಪತಿಗೆ ನೋಟಿಸ್

0
95

ಶಿವಮೊಗ್ಗ: ಕರ್ನಾಟಕ ರಾಜ್ಯಪಾಲರ ಸಚಿವಾಲಯವು ಕುವೆಂಪು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅವರಿಗೆ ಕಾರಣ ಕೇಳಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

ಸೆ. 2ರಂದು ಈ ನೋಟಿಸ್ ನೀಡಲಾಗಿದ್ದು, ಕುವೆಂಪು ವಿವಿ ಉಪಕುಲಪತಿ ಹುದ್ದೆಯಲ್ಲಿದ್ದಾಗ, ನೀವು ಗೌರವಾನ್ವಿತ ರಾಜ್ಯಪಾಲರು ಮತ್ತು ವಿಶ್ವವಿದ್ಯಾಲಯದ ಕುಲಪತಿಗಳ ಪೂರ್ವಾನುಮತಿ ಪಡೆಯದೆ ವೈಯಕ್ತಿಕ ಕಾರಣಕ್ಕಾಗಿ ಹಲವಾರು ವಿದೇಶ ಪ್ರವಾಸಗಳನ್ನು ಕೈಗೊಂಡಿದ್ದೀರಿ ಎಂದು ನೋಟಿಸ್‌ನಲ್ಲಿ ಉಲ್ಲೇಖ ಮಾಡಲಾಗಿದೆ.

ಮೊದಲ ಭೇಟಿ ಜೂ. 19, 2024ರಲ್ಲಿ 23 ದಿನಗಳ ಕಾಲ ಕೆನಾಡಕ್ಕೆ ಭೇಟಿ, ಎರಡನೇ ಭೇಟಿ ಡಿ. 16, 2024ರಲ್ಲಿ 24 ದಿನ, ಮೂರನೇ ಭೇಟಿ ಜೂ. 14, 2025ರಂದು 12 ದಿನ, ನಾಲ್ಕನೇ ಭೇಟಿ ಆ. 17ರಿಂದ ಸೆ. 9ರ ವರೆಗೆ 20 ದಿನಗಳ ಕಾಲ ವಿದೇಶ ಪ್ರವಾಸವನ್ನು ರಾಜ್ಯಪಾಲರ ಅನುಮತಿ ಪಡೆಯದೆ ಕೈಗೊಂಡಿರುವುದಕ್ಕೆ ನೋಟಿಸ್ ನೀಡಲಾಗಿದೆ.

ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ವಿಶ್ವವಿದ್ಯಾಲಯದ ಕುಲಪತಿಗಳ ಪೂರ್ವಾನುಮತಿ ಪಡೆಯದೆ ವೈಯಕ್ತಿಕ ಆಧಾರದ ಮೇಲೆ ವಿದೇಶ ಪ್ರವಾಸಗಳನ್ನು ಕೈಗೊಂಡಿದ್ದಕ್ಕಾಗಿ ನಿಮ್ಮ ವಿರುದ್ಧ ಏಕೆ ಸೂಕ್ತ ಕ್ರಮ ಕೈಗೊಳ್ಳಬಾರದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ರಾಜ್ಯಪಾಲರ ಕಚೇರಿಯು ಲಿಖಿತ ವಿವರಣೆಯನ್ನು ಕೋರಿದೆ, ಎಲ್ಲಾ ಸಂಬಂಧಿತ ದಾಖಲೆಗಳ ಪ್ರತಿಗಳೊಂದಿಗೆ ಈ ನೋಟಿಸ್ ಸ್ವೀಕರಿಸಿದ ದಿನಾಂಕದಿಂದ ಏಳು ದಿನಗಳ ಒಳಗೆ ಈ ಕಚೇರಿಯನ್ನು ತಲುಪಬೇಕು, ವಿಫಲವಾದರೆ ನಿಮಗೆ ನೀಡಲು ಯಾವುದೇ ವಿವರಣೆ ಇಲ್ಲ ಎಂದು ಭಾವಿಸಲಾಗುತ್ತದೆ ಮತ್ತು ಲಭ್ಯವಿರುವ ದಾಖಲೆಗಳ ಆಧಾರದ ಮೇಲೆ ಮತ್ತು ಕಾನೂನಿಗೆ ಅನುಗುಣವಾಗಿ ಈ ವಿಷಯವನ್ನು ಮತ್ತಷ್ಟು ಪರಿಗಣಿಸಲಾಗುವುದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ವಿದೇಶ ಪ್ರವಾಸ ಮುಗಿಸಿಕೊಂಡು ಸೆ. 9ರಂದು ಕರ್ತವ್ಯಕ್ಕೆ ಹಾಜರಾಗಿರುವ ಉಪಕುಲಪತಿ ಪ್ರೊ. ಶರತ್ ಅನಂತ್‌ಮೂರ್ತಿ ನೋಟೀಸ್ ಪಡೆದುಕೊಂಡಿದ್ದಾರೆ. ನೋಟಿಸ್‌ಗೆ ಏನು ಉತ್ತರ ನೀಡಿದ್ದಾರೆ ಎಂಬುದು ಇನ್ನಷ್ಟೆ ತಿಳಿಯಬೇಕಿದೆ.