ದಾವಣಗೆರೆ: ಬಿಜೆಪಿ ನಾಯಕರ ನಿವಾಸಗಳ ಮೇಲೆ ಎಂದಾದರೂ ಇಡಿ ದಾಳಿ ಆಗಿದೆಯಾ ಎಂದು ಚನ್ನಗಿರಿ ಶಾಸಕ ಬಸವರಾಜ ವಿ.ಶಿವಗಂಗಾ ಪ್ರಶ್ನಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರ ನಿವಾಸಗಳ ಮೇಲೆ ಎಂದಾದರೂ ದಾಳಿ ಆಗಿದ್ದನ್ನು ನೋಡಿದ್ದೀರಾ. ಇಡಿ ಉಪಯೋಗಿಸಿಕೊಂಡು, ಬಿಜೆಪಿ ಮಾಡುವ ಅಕ್ರಮಗಳ ಬಗ್ಗೆ ಮಾತನಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಅವರನ್ನು ಕಂಡರೆ ಅವರಿಗೆ ಆಗೊಲ್ಲ. ಅವರನ್ನು ಕಂಡರೆ ಇವರಿಗೆ ಆಗುವುದಿಲ್ಲ. ಅವರವರೇ ಉದ್ಧಾರ ಆಗುತ್ತಿದ್ದಾರೆಯೇ ಹೊರತು, ದೇಶ ಉದ್ಧಾರವಾಗುತ್ತಿಲ್ಲ ಎಂದು ಹೇಳಿದರು.
ನಾವು ಸರಿಯಾಗಿದ್ದರೆ ಯಾವುದೇ ಇ.ಡಿ., ಇನ್ನೊಂದಕ್ಕೋ ಹೆದರುವುದೇ ಬೇಡ. ಇಡಿ ದಾಳಿ ಮಾಡ್ತಾರಾ, ಮಾಡಲಿ ಬಿಡಿ. ತಪ್ಪು ಮಾಡಿದ್ದರೆ ದಂಡ ಕಟ್ಟುತ್ತೇವೆ. ಇನ್ನೂ ಎಷ್ಟು ವರ್ಷಗಳ ಕಾಲ ಹೀಗೆ ಇ.ಡಿ. ದಾಳಿ ಮಾಡಿಸುತ್ತಾರೆ? ಇನ್ನು 2-3 ವರ್ಷ ಮಾಡ್ತಾರೆ. ಅಷ್ಟೇ. ಅಲ್ಲಿಂದ 15 ವರ್ಷ ಬಿಜೆಪಿಯವರನ್ನು ಜನ ಹೊರಗೆ ಕಳಿಸುತ್ತಾರೆ ಎಂದು ಅವರು ತಿಳಿಸಿದರು.
ಈವರೆಗೂ ಯಾಕೆ ಒಬ್ಬನೇ ಒಬ್ಬ ಬಿಜೆಪಿ ನಾಯಕರ ಮನೆಯ ಮೇಲೆ ಇಂತಹ ದಾಳಿ ಆಗಿಲ್ಲ? ಇ.ಡಿ., ಸಿಬಿಐ ರೇಡ್ ಆಗಿದೆಯಾ? ಬಿಜೆಪಿಯ ಎಲ್ಲಾ ನಾಯಕರೂ ಸಾಚಾನಾ? ಹಾಗಿದ್ದರೆ ಬಿಜೆಪಿಯವರು ತಾವೆಲ್ಲಾ ಸಾಚಾ ಅಂತಾ ಹೇಳಿಕೆ ಕೊಡಲಿ ನೋಡೋಣ. ಈ ಎಲ್ಲಾ ರಾಜಕೀಯ ನೋಡಿ, ಬೇಸರವಾಗಿದೆ ಎಂದು ಬಸವರಾಜ ಶಿವಗಂಗಾ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.



















