SK Home Ad
Home ಕ್ರೀಡೆ BCCIಗೆ ಸುಪ್ರೀಂ ಕೋರ್ಟ್ ಶಾಕ್: ಹೊಸ ಕ್ರೀಡಾ ಕಾನೂನು ಏಕೆ ಅನ್ವಯಿಸಬಾರದು ಎಂದು ಪ್ರಶ್ನೆ!

BCCIಗೆ ಸುಪ್ರೀಂ ಕೋರ್ಟ್ ಶಾಕ್: ಹೊಸ ಕ್ರೀಡಾ ಕಾನೂನು ಏಕೆ ಅನ್ವಯಿಸಬಾರದು ಎಂದು ಪ್ರಶ್ನೆ!

0
10

BCCI: ಹೊಸ ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆ-2025 (National Sports Governance Act, 2025) ರ ಅಡಿಯಲ್ಲಿ ಬಿಸಿಸಿಐ (BCCI) ಮತ್ತು ಎಲ್ಲಾ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಏಕೆ ಕಾರ್ಯನಿರ್ವಹಿಸಬಾರದು ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಮತ್ತು ವಿ. ಮೋಹನ ಅವರಿದ್ದ ಪೀಠವು ಈ ಮಹತ್ವದ ಪ್ರಶ್ನೆಯನ್ನು ಮುಂದಿಟ್ಟಿದೆ.

ಬಿಸಿಸಿಐಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ವೇಳೆ, ಹೊಸ ಕಾಯ್ದೆಯನ್ವಯ ಪದಾಧಿಕಾರಿಗಳ ಸೇವಾ ನಿಯಮಗಳು ಏಕೆ ಅನ್ವಯವಾಗಬಾರದು ಎಂಬುದರ ಕುರಿತು ಮಾಹಿತಿ ಪಡೆಯುವಂತೆ ಬಿಸಿಸಿಐ ಹಾಗೂ ರಾಜ್ಯ ಕ್ರಿಕೆಟ್ ಸಂಸ್ಥೆಗಳ ವಕೀಲರಿಗೆ ನ್ಯಾಯಾಲಯ ಸೂಚಿಸಿದೆ.

2014ರಿಂದಲೂ ಬಿಸಿಸಿಐ ಸುಧಾರಣೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಸುಪ್ರೀಂ ಕೋರ್ಟ್ ಈ ಹಿಂದೆ ಜಸ್ಟಿಸ್ ಆರ್.ಎಂ. ಲೋಧಾ ಸಮಿತಿಯನ್ನು ರಚಿಸಿತ್ತು. ಸಮಿತಿಯ ಶಿಫಾರಸುಗಳಂತೆ ಬಿಸಿಸಿಐ ಸಂವಿಧಾನದಲ್ಲಿ ಹಲವಾರು ಬದಲಾವಣೆಗಳನ್ನು ತರಲಾಗಿತ್ತು.

2022ರಲ್ಲಿ ಸಂವಿಧಾನ ತಿದ್ದುಪಡಿಗೆ ಅವಕಾಶ ನೀಡಿದ್ದ ಸುಪ್ರೀಂ ಕೋರ್ಟ್, ಪದಾಧಿಕಾರಿಗಳು ಸತತ 12 ವರ್ಷಗಳ ಕಾಲ (ರಾಜ್ಯ ಸಂಸ್ಥೆಯಲ್ಲಿ 6 ವರ್ಷ ಮತ್ತು ಬಿಸಿಸಿಐನಲ್ಲಿ 6 ವರ್ಷ) ಅಧಿಕಾರದಲ್ಲಿರಲು ಅವಕಾಶ ಕಲ್ಪಿಸಿತ್ತು. ನಂತರ 3 ವರ್ಷಗಳ ‘ಕೂಲಿಂಗ್-ಆಫ್’ (cooling-off) ಅವಧಿ ಕಡ್ಡಾಯಗೊಳಿಸಿತ್ತು. ಇದೀಗ ಹೊಸ ಕ್ರೀಡಾ ಕಾಯ್ದೆ ಜಾರಿಗೆ ಬಂದಿರುವುದರಿಂದ, ಬಿಸಿಸಿಐನ ಭವಿಷ್ಯದ ಕಾರ್ಯವೈಖರಿ ಹೇಗೆ ಬದಲಾಗಲಿದೆ ಎಂಬ ಕುತೂಹಲ ಮೂಡಿದೆ.