ದಾವಣಗೆರೆ: ಜಿಲ್ಲೆಯ ರಾಜಕೀಯ ನಾಯಕರ ನಡುವೆ ನಡೆದ ವೈಯಕ್ತಿಕ ವಾಗ್ದಾಳಿ ಹಾಗೂ ಕೆಟ್ಟ ಪದಗಳ ಬಳಕೆಯಿಂದ ಮನಸ್ಸಿಗೆ ತೀವ್ರ ನೋವಾಗಿದೆ ಎಂದು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಬೇಸರ ವ್ಯಕ್ತಪಡಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯ ರಾಜಕೀಯ ನಾಯಕರು ಪರಸ್ಪರ ವೈಯಕ್ತಿಕವಾಗಿ ನಿಂದಿಸುವ ರೀತಿಯಲ್ಲಿ ಮಾತನಾಡುತ್ತಿರುವುದು ವಿಷಾದನೀಯ. ದಾವಣಗೆರೆ ಜಿಲ್ಲೆಯಲ್ಲಿ ಈ ಹಿಂದೆ ಇಂತಹ ಕೆಟ್ಟ ರಾಜಕೀಯ ಸಂಸ್ಕೃತಿ ಇರಲಿಲ್ಲ. ಇದೀಗ ರಾಜಕೀಯ ವಾತಾವರಣ ಕಲುಷಿತಗೊಳ್ಳುತ್ತಿರುವುದು ನೋವಿನ ಸಂಗತಿ ಎಂದು ಹರಿಹರ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅಸಂಸದೀಯ ಪದಗಳನ್ನು ಬಳಕೆ ಮಾಡಿ ಟೀಕಿಸಿದ್ದಾರೆ ಎಂಬ ಹೇಳಿಕೆಗೆ ಅವರು ಕಳವಳ ವ್ಯಕ್ತಪಡಿಸಿದರು.
ಯಾವುದೇ ಪಕ್ಷ, ಸಮುದಾಯ ಅಥವಾ ನಾಯಕರಾಗಿರಲಿ, ವೈಯಕ್ತಿಕ ನಿಂದನೆಯ ಭಾಷೆಯನ್ನು ಬಳಸಬಾರದು. ರಾಜಕೀಯ ನಾಯಕರ ಮಾತುಗಳನ್ನು ಜನರು, ಅದರಲ್ಲೂ ಯುವಜನತೆ ಗಮನಿಸುತ್ತಾರೆ. ಇಂತಹ ಭಾಷೆ ಮುಂದಿನ ಪೀಳಿಗೆಗೆ ಕೆಟ್ಟ ಸಂದೇಶ ನೀಡುತ್ತದೆ ಎಂದರು.
ರಾಜಕೀಯ ಟೀಕೆಗಳಿಗೆ ಮಿತಿ ಇರಲಿ: ನಾಯಕರು ತಮ್ಮ ರಾಜಕೀಯ ವಿಚಾರ, ಸಿದ್ಧಾಂತ ಹಾಗೂ ಆಡಳಿತಾತ್ಮಕ ವಿಷಯಗಳ ಕುರಿತು ಪರಸ್ಪರ ಟೀಕೆ ಮಾಡಿಕೊಳ್ಳಲಿ. ಅದು ಪ್ರಜಾಪ್ರಭುತ್ವದಲ್ಲಿ ಸಹಜ. ಆದರೆ ವ್ಯಕ್ತಿಯ ಕುಟುಂಬ, ವೈಯಕ್ತಿಕ ವಿಚಾರಗಳನ್ನು ಮುಂದಿಟ್ಟುಕೊಂಡು ನಿಂದಿಸುವುದು ಅಥವಾ ಹಿಂಬಾಗಿಲಿನಿಂದ ವೈಯಕ್ತಿಕವಾಗಿ ಮಾತನಾಡುವುದು ಸರಿಯಲ್ಲ ಎಂದರು.
ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬರ ಹಕ್ಕು. ಪ್ರತಿಭಟನೆಗೆ ರಾಜಕೀಯವಾಗಿ ಉತ್ತರ ನೀಡುವುದು ಎದುರಾಳಿಗಳ ಹಕ್ಕು. ಆದರೆ ಪ್ರತಿಭಟನೆಯ ವಿಚಾರವನ್ನು ಬದಿಗೊತ್ತಿ ವೈಯಕ್ತಿಕ ನಿಂದನೆಗೆ ಇಳಿಯುವುದು ಆರೋಗ್ಯಕರ ರಾಜಕಾರಣವಲ್ಲ ಎಂದು ಅಭಿಪ್ರಾಯಪಟ್ಟರು.
ಹೈಕಮಾಂಡ್ ಮಧ್ಯಪ್ರವೇಶ ಅಗತ್ಯ: ದಾವಣಗೆರೆಯ ರಾಜಕೀಯ ವಾತಾವರಣ ಮತ್ತಷ್ಟು ಹದಗೆಡದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಹೈಕಮಾಂಡ್‌ಗಳು ಈ ವಿಚಾರದಲ್ಲಿ ತಕ್ಷಣ ಮಧ್ಯಪ್ರವೇಶಿಸಬೇಕು. ವೈಯಕ್ತಿಕ ವಾಗ್ದಾಳಿಯಲ್ಲಿ ತೊಡಗಿರುವ ನಾಯಕರನ್ನು ಕರೆಸಿ ಮಾತನಾಡಿಸಿ, ಇಂತಹ ಬೆಳವಣಿಗೆಗಳಿಗೆ ಕಡಿವಾಣ ಹಾಕಬೇಕು ಎಂದು ಶಾಸಕ ಶಿವಗಂಗಾ ಬಸವರಾಜ್ ಆಗ್ರಹಿಸಿದರು.
ರಾಜಕೀಯ ಭಿನ್ನಾಭಿಪ್ರಾಯಗಳು ಇರಬಹುದು. ಆದರೆ ಪರಸ್ಪರ ಗೌರವ ಕಾಪಾಡಿಕೊಂಡು ಜನರ ಸಮಸ್ಯೆಗಳು, ಅಭಿವೃದ್ಧಿ ಹಾಗೂ ಜಿಲ್ಲೆಯ ಹಿತದ ಕುರಿತು ಆರೋಗ್ಯಕರ ಚರ್ಚೆ ನಡೆಯಬೇಕು. ದಾವಣಗೆರೆಯ ರಾಜಕೀಯ ಸೌಹಾರ್ದತೆಯನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಅವರು ಮನವಿ ಮಾಡಿದರು.



















