SK Home Ad
Home ಸುದ್ದಿ ರಾಜ್ಯ ಮಾತು ಕೇಳದ ಅಧಿಕಾರಿಗಳನ್ನು ಕೆಲಸದಿಂದ ತೆಗೆದು ಹಾಕುತ್ತೇನೆ: ಸಚಿವ ರಾಯರೆಡ್ಡಿ ಖಡಕ್ ಎಚ್ಚರಿಕೆ

ಮಾತು ಕೇಳದ ಅಧಿಕಾರಿಗಳನ್ನು ಕೆಲಸದಿಂದ ತೆಗೆದು ಹಾಕುತ್ತೇನೆ: ಸಚಿವ ರಾಯರೆಡ್ಡಿ ಖಡಕ್ ಎಚ್ಚರಿಕೆ

0
31

ಕೊಪ್ಪಳ: ನನ್ನ ಮಾತು ಕೇಳದ ಹಾಗೂ ಕೆಲಸದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳನ್ನು ಕೆಲಸದಿಂದ ತೆಗೆದು ಹಾಕುತ್ತೇನೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು.

‘ನಾನು ಫುಲ್ ಬ್ಯೂಸಿಯಾಗಿರುತ್ತೇನೆ. ಡಿಜಿಟಲ್ ಸಿಗ್ನೇಚರ್ ಮಾಡಿ, ಲೆಟರ್ ಕೊಟ್ಟುಬಿಡಿ’ ಎಂದು ತಮ್ಮ ಪಿಎಗೆ ಸೂಚಿಸಿದ ಸಚಿವರು, ‘ತಹಶೀಲ್ದಾರ್, ನೀನು ನನ್ನ ಪಿಆರ್‌ಒ ಆಗಿ ಕೆಲಸ ಮಾಡಬೇಕು’ ಎಂದು ಹೇಳಿದರು.

ಉನ್ನತ ಶಿಕ್ಷಣ ಇಲಾಖೆ ಬಹಳಷ್ಟು ಕಾರ್ಯಭಾರ ಹೊಂದಿರುವ ಇಲಾಖೆಯಾಗಿದೆ. ಇಲಾಖೆಯ ವ್ಯಾಪ್ತಿಯಲ್ಲಿ 1.52 ಕೋಟಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 96 ವಿಶ್ವವಿದ್ಯಾಲಯಗಳಿವೆ. ಆದರೆ, ಈ ಇಲಾಖೆಗೆ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ಸೇರಿದಂತೆ ಅಗತ್ಯ ನೆರವು ದೊರೆಯುತ್ತಿಲ್ಲ ಎಂದು ರಾಯರೆಡ್ಡಿ ಹೇಳಿದರು.

ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಮುಂದುವರಿಯಲಿದ್ದು, ಯಾವುದೇ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

‘ನನ್ನದೇ ಎಂಟು ಪಂಪ್‌ಸೆಟ್‌ಗಳು ಫ್ರೀ ಇವೆ. ಪಂಪ್‌ಸೆಟ್‌ಗೆ ಉಚಿತ ವಿದ್ಯುತ್‌ ಅನ್ನು ಬಂಗಾರಪ್ಪನವರ ಕಾಲದಲ್ಲೇ ನೀಡಲಾಗಿದೆ’ ಎಂದು ಹೇಳಿದರು.

ಸರ್ಕಾರದಲ್ಲಿ 7.40 ಲಕ್ಷ ನೌಕರರಿದ್ದು, ಪ್ರತಿವರ್ಷ ಸುಮಾರು ₹55 ಸಾವಿರ ಕೋಟಿ ವೇತನಕ್ಕೆ ಖರ್ಚಾಗುತ್ತಿದೆ ಎಂದು ಅವರು ತಿಳಿಸಿದರು.

ಯಲಬುರ್ಗಾ ಬರಪೀಡಿತ ತಾಲೂಕು ಘೋಷಣೆ: ಯಲಬುರ್ಗಾ ತಾಲೂಕನ್ನು ಮುಂದಿನ ವಾರ ಬರಪೀಡಿತ ತಾಲೂಕು ಎಂದು ಘೋಷಿಸುವ ಸಾಧ್ಯತೆ ಇದೆ ಎಂದು ಬಸವರಾಜ ರಾಯರೆಡ್ಡಿ ಹೇಳಿದರು.

‘ಮೂರನೇ ಪಟ್ಟಿಯಲ್ಲಿ ಯಲಬುರ್ಗಾ ಹಾಗೂ ಕುಷ್ಟಗಿ ತಾಲೂಕುಗಳು ಬರಪೀಡಿತ ಎಂದು ಘೋಷಣೆಯಾಗಬೇಕು ಎಂದು ಈಗಾಗಲೇ ಹೇಳಿದ್ದೇವೆ. ಕೊಪ್ಪಳದ ಬಗ್ಗೆಯೂ ಸರ್ಕಾರ ಯೋಚನೆ ಮಾಡುತ್ತಿದೆ’ ಎಂದರು.

ಅಕ್ಟೋಬರ್ 20ರ ನಂತರ ತಾವು ಹೆಚ್ಚಿನ ಸಮಯವನ್ನು ಕ್ಷೇತ್ರದ ಅಭಿವೃದ್ಧಿಗೆ ಮೀಸಲಿಡುವುದಾಗಿ ಸಚಿವ ರಾಯರೆಡ್ಡಿ ಹೇಳಿದರು.