ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ನಗರದ ನೂತನ ಪೊಲೀಸ್ ಆಯುಕ್ತರಾದ ಭೂಷಣ ಜಿ. ಬೋರಸೆ ಅವರು ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಸಂಚಾರ ಪೊಲೀಸರಿಗೆ ಖಡಕ್ ಸೂಚನೆಗಳನ್ನು ನೀಡಿದ್ದು, ಅವರ ಮೊದಲ ಆದೇಶವೇ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ನಗರ ಪೊಲೀಸ್ ಆಯುಕ್ತರು ಹೊರಡಿಸಿರುವ “ಪತ್ರಿಕಾ ಪ್ರಕಟಣೆ”ಯಲ್ಲಿ ಸಂಚಾರ ನಿರ್ವಹಣೆ ಬಗ್ಗೆ 5 ಪ್ರಮುಖ ಸೂಚನೆಗಳನ್ನು ನೀಡಿದ್ದಾರೆ. ಇದರಲ್ಲಿ ಸಾರ್ವಜನಿಕರು, ವಾಹನ ಸವಾರರ ಹೊಣೆಗಾರಿಕೆ, ಸಂಚಾರ ಠಾಣೆ ಪೊಲೀಸರ ಜವಾಬ್ದಾರಿಗಳನ್ನು ಉಲ್ಲೇಖಿಸಿದ್ದಾರೆ.
ಪ್ರಮುಖ ಮುಖ್ಯಾಂಶಗಳು:
- ಹೆಚ್ಚು ದಟ್ಟಣೆ ಇದ್ದಾಗ ದಂಡವಿಲ್ಲ: ವಾಹನ ಸಂಚಾರ ದಟ್ಟಣೆಯಿರುವ ಸಮಯದಲ್ಲಿ ವಾಹನ ಸವಾರರಿಗೆ ದಂಡ ವಿಧಿಸಬಾರದು. ಆ ಸಮಯದಲ್ಲಿ ಸಂಚಾರ ಸುಗಮಗೊಳಿಸುವುದೇ ಮೊದಲ ಕರ್ತವ್ಯ.
- ಬಾಡಿ ಕ್ಯಾಮೆರಾ ಕಡ್ಡಾಯ: ದಂಡ ವಿಧಿಸುವಂತಹ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಕಡ್ಡಾಯವಾಗಿ ಬಾಡಿ ವೋರ್ನ್ ಕ್ಯಾಮೆರಾ ಧರಿಸಿಕೊಂಡೇ ದಂಡ ವಿಧಿಸಬೇಕು.
- ಫೋಟೋ ತೆಗೆದರೆ: ದಂಡ ಹಾಕುವಾಗ ಯಾರಾದರೂ ಬಾಡಿ ಕ್ಯಾಮೆರಾ ಧರಿಸದೇ ದಂಡ ಹಾಕಿದರೆ, ಅವರ ಫೋಟೋವನ್ನು ದಿನಾಂಕ, ಸ್ಥಳದ ವಿವರದೊಂದಿಗೆ ಪೊಲೀಸ್ ಕಂಟ್ರೋಲ್ ರೂಮ್ ಸಂಖ್ಯೆ 9480802002ಗೆ ಕಳುಹಿಸುವಂತೆ ಸಾರ್ವಜನಿಕರಿಗೆ ಆಯುಕ್ತರು ಮನವಿ ಮಾಡಿದ್ದಾರೆ.
- ಕುಡಿದು ಚಾಲನೆ, ಸೀಟ್ ಬೆಲ್ಟ್ ಮೇಲೆ ಫೋಕಸ್: ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ಸೀಟ್ ಬೆಲ್ಟ್ ಇಲ್ಲದೇ, ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸುವಂತಹ ಪ್ರಕರಣಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಿಸಬೇಕು.
- ಪ್ರಾಣ ಉಳಿಸುವುದೇ ಆದ್ಯ ಕರ್ತವ್ಯ: ಸಂಚಾರ ಘಟಕದ ಪೊಲೀಸ್ ಅಧಿಕಾರಿ ಸಿಬ್ಬಂದಿಗೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟು ಸಾರ್ವಜನಿಕರ ಪ್ರಾಣ ಕಾಪಾಡುವುದು ಆದ್ಯ ಕರ್ತವ್ಯವಾಗಿರಬೇಕು. ಈ ಐದು ಸೂಚನೆಗಳ ಬಗ್ಗೆ ಡಿಸಿಪಿ ಅಪರಾಧ ಮತ್ತು ಸಂಚಾರ ರವರು ಸೂಕ್ತ ಮೇಲ್ವಿಚಾರಣೆ ಮಾಡುವಂತೆ ಆಯುಕ್ತರು ಆದೇಶಿಸಿದ್ದಾರೆ.
ಸಾರ್ವಜನಿಕರಿಗೆ ಸೂಚನೆ: ಸಂಚಾರ ದಟ್ಟಣೆ ಸಮಯದಲ್ಲಿ ನಿಮ್ಮ ಕರ್ತವ್ಯ ಬಿಟ್ಟು ವಾಹನ ಸವಾರರಿಗೆ ದಂಡ ವಿಧಿಸಿದರೆ, ಅಥವಾ ಬಾಡಿ ಕ್ಯಾಮೆರಾ ಇಲ್ಲದೆ ದಂಡ ವಿಧಿಸಿದರೆ, ಕೂಡಲೇ ಫೋಟೋ/ವಿಡಿಯೋ ತೆಗೆದು 9480802002ಗೆ ಕಳುಹಿಸಿ ಎಂದು ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.



















