SK Home Ad
Home ಸುದ್ದಿ ರಾಜ್ಯ ಕೆಪಿಎಸ್‌ಸಿ ಅಕ್ರಮ: ಕನ್ನಾಳೆ ಹಣಕಾಸು ವ್ಯವಹಾರಗಳ ಬೆನ್ನತ್ತಿದ ಸಿಐಡಿ

ಕೆಪಿಎಸ್‌ಸಿ ಅಕ್ರಮ: ಕನ್ನಾಳೆ ಹಣಕಾಸು ವ್ಯವಹಾರಗಳ ಬೆನ್ನತ್ತಿದ ಸಿಐಡಿ

0
45

ಬೀದರ್: ಕೆಪಿಎಸ್‌ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧಿತ ಬಸವರಾಜ ಕನ್ನಾಳೆ ಬ್ಯಾಂಕ್ ಖಾತೆ, ಹಣಕಾಸು ವ್ಯವಹಾರ ಪರಿಶೀಲನೆಗೆ ಸಿಐಡಿ ತಂಡ ಮುಂದಾಗಿದೆ.

ಭಾಲ್ಕಿ ಪಟ್ಟಣದ ಲೆಕ್ಚರರ್ ಕಾಲೋನಿಯಲ್ಲಿರುವ ಓಂ ಲಕ್ಷ್ಮಿ ಸೌಹಾರ್ದ ಸಹಕಾರಿ ಸಂಘದ ಮೇಲೆ ಸಿಐಡಿ ಡಿವೈಎಸ್ಪಿ ಅಸ್ಲಮ್ ಬಾಷಾ ನೇತೃತ್ವದ ತಂಡ ಬುಧವಾರ ದಾಳಿ ನಡೆಸಿ, ಸಮಗ್ರ ದಾಖಲೆ ಪರಿಶೀಲಿಸಿದೆ. ಕನ್ನಾಳೆ ಇದೇ ಬ್ಯಾಂಕ್ ಖಾತೆಗೆ ಅಭ್ಯರ್ಥಿಗಳಿಂದ ಹಣ ಹಾಕಿಸಿಕೊಂಡಿರಬಹುದೆಂಬ ಮಾಹಿತಿ ಮೇಲೆ ಈ ದಾಳಿ ನಡೆದಿದೆ ಎನ್ನಲಾಗಿದೆ.

ಅಭ್ಯರ್ಥಿಗಳಿಂದ ಮೊದಲಿಗೆ ತನ್ನ ಸಂಬಂಧಿಕರ ಖಾತೆಗೆ ಹಣ ಹಾಕಿಸಿಕೊಂಡು ಬಳಿಕ ತನ್ನ ಖಾತೆಗೆ ವರ್ಗ ಮಾಡಿಕೊಳ್ಳುತ್ತಿದ್ದ ಎನ್ನಲಾಗಿದೆ. ದಾಳಿ ವೇಳೆ ಬ್ಯಾಂಕ್ ಲಾಕರ್ ಸಹ ಪರಿಶೀಲಿಸಿ ಜಪ್ತಿ ಮಾಡಲಾಗಿದೆ.

ಕನ್ನಾಳೆ ನಾಲ್ಕು ವರ್ಷ ಹಿಂದೆ ಕಟ್ಟಿಸಿರುವ ಮನೆ ಸಹ ಈ ಬ್ಯಾಂಕ್ ಇರುವ ಬಡಾವಣೆಯಲ್ಲಿಯೇ ಇದೆ. ಬ್ಯಾಂಕ್ ಆಡಳಿತ ಮಂಡಳಿಯೊಂದಿಗೆ ಕನ್ನಾಳೆ ನಿಕಟ ಸಂಬಂಧ ಹೊಂದಿದ್ದ. ಇಲ್ಲಿ ಹೆಚ್ಚು ಹಣಕಾಸು ವ್ಯವಹಾರ ನಡೆಸುತ್ತಿದ್ದ ಎನ್ನುವ ಕಾರಣಕ್ಕೆ ಈ ದಾಳಿ ನಡೆದಿದೆ. ಕನ್ನಾಳೆ ಭಾಲ್ಕಿ ತಾಲೂಕಿನ ಡೋಣಗಾಪುರ ಗ್ರಾಮದವನಿದ್ದಾನೆ.