SK Home Ad
Home ನಮ್ಮ ಜಿಲ್ಲೆ ಬಳ್ಳಾರಿ ‘ಬಳ್ಳಾರಿ ಚಲೋ’ ಪಾದಯಾತ್ರೆ ಮೊದಲ ದಿನವೇ ಶಕ್ತಿ ಪ್ರದರ್ಶನ

‘ಬಳ್ಳಾರಿ ಚಲೋ’ ಪಾದಯಾತ್ರೆ ಮೊದಲ ದಿನವೇ ಶಕ್ತಿ ಪ್ರದರ್ಶನ

0
69

ರಾಯಚೂರು: ಡೊಳ್ಳಿನ ತಾಳ, ಕಹಳೆಯ ಮೊಳಗು, ಗೊಂಬೆ ವೇಷಧಾರಿಗಳ ನೃತ್ಯ, ಕೈಯಲ್ಲಿ ಹಾರಾಡಿದ ಕೇಸರಿ ಬಾವುಟಗಳು, ಮುಗಿಲು ಮುಟ್ಟಿದ ಘೋಷಣೆಗಳು… ಇವುಗಳ ನಡುವೆ ಲಿಂಗಸುಗೂರಿನ ರಸ್ತೆಗಳು ಮಂಗಳವಾರ ರಾಜಕೀಯ ರಣರಂಗದಂತೆ ಕಂಡವು. ವಾಲ್ಮೀಕಿ ನಿಗಮದ ಹಗರಣವನ್ನು ಕೇಂದ್ರವಾಗಿಟ್ಟುಕೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆರಂಭಿಸಿದ ‘ಬಳ್ಳಾರಿ ಚಲೋ’ ಪಾದಯಾತ್ರೆ ಮೊದಲ ದಿನವೇ ಶಕ್ತಿ ಪ್ರದರ್ಶನದ ಜತೆಗೆ ಹೋರಾಟದ ರಾಜಕೀಯ ಸಂದೇಶವನ್ನೂ ಸಾರಿತು.

ಪಾದಯಾತ್ರೆಗೂ ಮುನ್ನ ಬಿಜೆಪಿ ನಾಯಕರು ಗುರುಗುಂಟಾ ಅಮರೇಶ್ವರ ದೇವಸ್ಥಾನದಲ್ಲಿ ದರ್ಶನ ಪಡೆದುಕೊಂಡರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಧ್ಯಾಹ್ನ 2.30ಕ್ಕೆ ಪಾದಯಾತ್ರೆಕ್ಕೆ ಚಾಲನೆ ನೀಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್. ಅಶೋಕ, ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಮುಖ್ಯಮಮತ್ರಿಗಳಾದ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಸೇರಿ ಹಲವು ಪ್ರಮುಖ ನಾಯಕರು ಬಳ್ಳಾರಿ ದಂಡಯಾತ್ರೆ ನಡೆ ಚಾಲನೆಗೆ ಸಾಕ್ಷಿಯಾದರು.

ಪಾದಯಾತ್ರೆಯ ಮೊದಲ ದಿನದ ವಿಶೇಷತೆ ಕೇವಲ ನಾಯಕರ ಭಾಷಣಗಳಿಗೆ ಸೀಮಿತವಾಗಿರಲಿಲ್ಲ. ಡೊಳ್ಳು, ಕಹಳೆ, ಗೊಂಬೆ ವೇಷ, ಬಾವುಟಗಳ ಪ್ರದರ್ಶನ ಹಾಗೂ ಘೋಷಣೆಗಳು ಪಾದಯಾತ್ರೆಗೆ ಜನಪದ ಸೊಗಡಿನ ಮೆರುಗು ನೀಡಿದರೆ, ನಾಯಕರ ಆಕ್ರಮಣಕಾರಿ ಭಾಷಣಗಳು ಅದಕ್ಕೆ ರಾಜಕೀಯ ಕಾವು ತುಂಬಿದವು. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದು, ಹೋರಾಟಕ್ಕೆ ಪಕ್ಷದ ರಾಜ್ಯ ಮಟ್ಟದ ನಾಯಕತ್ವದ ಬೆಂಬಲವಿದೆ ಎಂಬ ಸಂದೇಶವನ್ನು ನೀಡಿತು.

ಲಿಂಗಸುಗೂರಿನಿಂದ ಆರಂಭವಾದ ಈ ಹೆಜ್ಜೆ ಕೇವಲ ಬಳ್ಳಾರಿಯತ್ತ ಸಾಗುವ ಪಾದಯಾತ್ರೆಯಲ್ಲ, ವಾಲ್ಮೀಕಿ ನಿಗಮದ ಹಗರಣ, ದಲಿತರ ಅನುದಾನ, ಬರ, ರೈತರ ಸಮಸ್ಯೆ, ಭ್ರಷ್ಟಾಚಾರ ಮತ್ತು ಆಡಳಿತ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜಕೀಯ ವಾತಾವರಣ ನಿರ್ಮಿಸುವ ಬಿಜೆಪಿಯ ಪ್ರಯತ್ನದ ಮೊದಲ ದೊಡ್ಡ ಹೆಜ್ಜೆ ಎನಿಸಿತು.

ಪಾದಯಾತ್ರೆಗೆ ಮುನ್ನವೇ ಲಿಂಗಸುಗೂರಿನ ಪ್ರಮುಖ ರಸ್ತೆಗಳು ಕೇಸರಿ ಬಾವುಟಗಳು, ಬ್ಯಾನರ್‌ಗಳು ಹಾಗೂ ಪಕ್ಷದ ನಾಯಕರ ಭಾವಚಿತ್ರಗಳಿಂದ ಕಂಗೊಳಿಸುತ್ತಿದ್ದವು. ನಿಗದಿತ ಸ್ಥಳದಲ್ಲಿ ನಾಯಕರು ಹಾಗೂ ಕಾರ್ಯಕರ್ತರು ಜಮಾಯಿಸುತ್ತಿದ್ದಂತೆ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹದ ವಾತಾವರಣ ಇಮ್ಮಡಿಯಾಯಿತು. ಡೊಳ್ಳು–ಕಹಳೆಯ ಸದ್ದಿಗೆ ಗೊಂಬೆ ವೇಷಧಾರಿಗಳು ಹೆಜ್ಜೆ ಹಾಕಿದರೆ, ಅದರೊಂದಿಗೆ ಕಾರ್ಯಕರ್ತರ ಘೋಷಣೆಗಳು ಪಾದಯಾತ್ರೆಯ ಆರಂಭಕ್ಕೆ ಮತ್ತಷ್ಟು ರಂಗು ತುಂಬಿದವು.

ಕೈಯಲ್ಲಿ ಪಕ್ಷದ ಬಾವುಟ ಹಿಡಿದ ಕಾರ್ಯಕರ್ತರ ಸಾಲು ಲಿಂಗಸುಗೂರಿನಿಂದ ಸಂತೆಕಲ್ಲೂರುವರೆಗೂ 13 ಕೀ.ಮೀ. ಕಾಲ್ನಡಿಗೆ ಹೆಜ್ಜೆ ಹಾಕುತ್ತಿದ್ದಂತೆ ಉದ್ದವಾಗುತ್ತಲೇ ಹೋಯಿತು. ಮುಂಭಾಗದಲ್ಲಿ ರಾಜ್ಯ ನಾಯಕರು ಸಾಗುತ್ತಿದ್ದರೆ, ಅವರ ಹಿಂದೆ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ಹೆಜ್ಜೆ ಹಾಕಿದರು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರು ಪಾದಯಾತ್ರೆಯನ್ನು ಕುತೂಹಲದಿಂದ ವೀಕ್ಷಿಸಿದರು. ಕೆಲವರು ಮೊಬೈಲ್‌ಗಳಲ್ಲಿ ದೃಶ್ಯಗಳನ್ನು ಸೆರೆಹಿಡಿದರು.