ಬಳ್ಳಾರಿ: ಬಿಜೆಪಿ ‘ಬಳ್ಳಾರಿ ಚಲೋ’ ಪಾದಯಾತ್ರೆ ಹಿನ್ನೆಲೆಯಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಅವರು ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರೆಡ್ಡಿ ಅವರನ್ನು ‘ಚಲಾವಣೆ ಇಲ್ಲದ ನಾಣ್ಯ’ ಎಂದು ವ್ಯಂಗ್ಯವಾಡಿದ ಅವರು, ‘ದಿ ಗ್ರೇಟ್ ಬಳ್ಳಾರಿ ಉಸ್ತುವಾರಿ ಸಚಿವರಾಗಿದ್ದ ನೀವು ರಿಜೆಕ್ಟ್ ಪೀಸ್‌ಗಳು’ ಎಂದು ಟೀಕಿಸಿದ್ದಾರೆ.
‘ದಿ ಗ್ರೇಟ್ ಜನಾರ್ದನ ರೆಡ್ಡಿ ಅಣ್ಣ ಎಂದು ಕರೆಯಬೇಕಾ? ಗಣಿಧಣಿ, ಲೂಟಿ ಅಣ್ಣ ಎಂದು ಕರೆಯಬೇಕಾ?’ ಎಂದು ಪ್ರಶ್ನಿಸಿದ ನಾಗೇಂದ್ರ, ‘ನಾನು ಬಳ್ಳಾರಿಯ ತಮ್ಮ, ಬಳ್ಳಾರಿ ಮನೆಯ ಮಗ’ ಎಂದು ಘಂಟಾಘೋಷವಾಗಿ ಹೇಳಿದರು.
‘ನಮ್ಮದು ಸಂಸ್ಕಾರವಂತ ಕುಟುಂಬ’: ‘ನಮ್ಮದು ಸಂಸ್ಕಾರವಂತ ಕುಟುಂಬ. ಮಿಸ್ಟರ್ ಜನಾರ್ದನ ರೆಡ್ಡಿ ಅವರೇ, ನಿಮ್ಮ ಬಗ್ಗೆ ಈ ಹಿಂದೆ ಹಲವು ಬಾರಿ ಗೌರವದಿಂದ ಮಾತನಾಡಿದ್ದೇನೆ. 2008ರಲ್ಲೂ ನಿಮಗೆ ಸಹಾಯ ಮಾಡಿದ್ದೇವೆ. ಆದರೆ ಈಗ ನನ್ನ ವಿರುದ್ಧ ಪದೇ ಪದೆ ಸುಳ್ಳು ಆರೋಪ ಮಾಡಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ನಾಯಕರು ಸುಳ್ಳು ಆರೋಪಗಳನ್ನು ಮಾಡಿಕೊಂಡು ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ಟೀಕಿಸಿದ ಅವರು, ‘ನಿರ್ದೋಷಿ ಆಗಿರುವ ನನ್ನ ಮೇಲೆ ಇಷ್ಟೆಲ್ಲ ಆರೋಪ ಮಾಡುತ್ತೀರಾ? ನಿಮ್ಮ ಪ್ರಕರಣಗಳ ಕಥೆ ಏನಾಗಿದೆ ಎಂಬುದನ್ನು ಆತ್ಮಸಾಕ್ಷಿಗೆ ಕೇಳಿಕೊಳ್ಳಿ’ ಎಂದರು.
‘ನಾನು ಕೇವಲ ಆರೋಪಿ, ನೀವು ಅಪರಾಧಿ’: ತಮ್ಮ ವಿರುದ್ಧದ ಆರೋಪಗಳಿಗೆ ದಾಖಲೆ ಪ್ರದರ್ಶಿಸಿದ ನಾಗೇಂದ್ರ, ‘ದಾಖಲೆ ತೋರಿಸಿ. ನಿಮ್ಮ ಹಣೆಬರಹ ನನ್ನ ಕೈಯಲ್ಲಿದೆ. ನೀವು ಅಪರಾಧಿ, ನಾನು ಕೇವಲ ಆರೋಪಿ’ ಎಂದು ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದರು.
‘ಭೂಹಗರಣ ಮಾಡಿಲ್ಲವೇ?: ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಅವರೇ, ನಿಮ್ಮ ಆತ್ಮಸಾಕ್ಷಿಗೆ ಉತ್ತರ ನೀಡಿ’ ಎಂದು ಸವಾಲು ಹಾಕಿದರು.
‘ಶಂಭೂಕ ಯಾರು ಗೊತ್ತಿದೆಯೇ?’: ತಮ್ಮನ್ನು ‘ಕಲಿಯುಗದ ಶಂಭೂಕ’ ಎಂದು ರೆಡ್ಡಿ ಟೀಕಿಸಿರುವುದಕ್ಕೆ ಪ್ರತಿಕ್ರಿಯಿಸಿದ ನಾಗೇಂದ್ರ, ‘ಶಂಭೂಕ ಯಾರು ಎನ್ನುವುದು ನಿಮಗೆ ಗೊತ್ತಿದೆಯೇ? ಉತ್ತರಕಾಂಡದಲ್ಲಿ ಬರುವ ಒಂದು ಪಾತ್ರ ಶಂಭೂಕ. ಕನಿಷ್ಠ ಜ್ಞಾನವಿಲ್ಲದೆ ಮಾತನಾಡಬೇಡಿ’ ಎಂದು ತಿರುಗೇಟು ನೀಡಿದರು. ‘ಮನುವಾದ, ಮನುಸ್ಮೃತಿ ಕುರಿತು ಬಹಿರಂಗ ಚರ್ಚೆಗೆ ಬನ್ನಿ. ಮಾಧ್ಯಮಗಳ ಮುಂದೆ ಚರ್ಚೆ ಮಾಡೋಣ’ ಎಂದು ರೆಡ್ಡಿಗೆ ಸವಾಲು ಹಾಕಿದರು.
‘ವಾಲ್ಮೀಕಿ ಹೆಸರು ಹೇಳಿದರೆ ಏಕೆ ಅಸಮಾಧಾನ?’: ‘ವಾಲ್ಮೀಕಿ ಸಮುದಾಯದ ವಿಚಾರ ಬಂದಾಗ ನಿಮಗೆ ಏಕೆ ಅಸಮಾಧಾನ? ದ್ವೇಷ, ಅಸೂಯೆ ಏಕೆ?’ ಎಂದು ಪ್ರಶ್ನಿಸಿದ ನಾಗೇಂದ್ರ, ವಾಲ್ಮೀಕಿ ನಿಗಮ ಪ್ರಕರಣದ ವಿಚಾರದಲ್ಲೂ ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದರು.
‘ನ್ಯಾಯವಾದಿಗಳನ್ನು ಬುಕ್ ಮಾಡಿದವರು ಯಾರು? ಅವರ ಸಾವಿಗೆ ನೀವೇ ಕಾರಣ’ ಎಂದು ರೆಡ್ಡಿ ವಿರುದ್ಧ ಗಂಭೀರ ಆರೋಪ ಮಾಡಿದರು. ‘ವಾಲ್ಮೀಕಿಯವರು ನಿಮ್ಮ ಪಾದದ ಧೂಳಿಗೆ ಸಮ ಎಂದು ಹೇಳುತ್ತೀರಾ? ನಮಗೂ ಸಮಯ ಬರುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ರಾಜೀನಾಮೆ ಪಕ್ಷದ ಗೌರವಕ್ಕಾಗಿ’: ತಮ್ಮ ಸಚಿವ ಸ್ಥಾನಕ್ಕೆ ನೀಡಿದ ರಾಜೀನಾಮೆಯ ಕುರಿತು ಸ್ಪಷ್ಟನೆ ನೀಡಿದ ನಾಗೇಂದ್ರ, ‘ಡಿ.ಕೆ. ಶಿವಕುಮಾರ್ ರಾಜೀನಾಮೆ ಬೇಡ ಎಂದಿದ್ದರು. ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ನಾನು ರಾಜೀನಾಮೆ ನೀಡಿದೆ. ಪಕ್ಷಕ್ಕಾಗಿ ತ್ಯಾಗ ಮಾಡಿದ್ದೇನೆ. ಹತ್ತು ದಿನಗಳ ಹಿಂದೆಯೇ ರಾಜೀನಾಮೆ ನೀಡಿದ್ದೆ’ ಎಂದರು. ‘ನಾನು ರಾಜೀನಾಮೆ ನೀಡಿದ್ದು ರೆಡ್ಡಿ ಅಥವಾ ರಾಮುಲು ಅವರಿಗಾಗಿ ಅಲ್ಲ. ಪಕ್ಷದ ಗೌರವಕ್ಕಾಗಿ’ ಎಂದು ಸ್ಪಷ್ಟಪಡಿಸಿದರು.
‘ರಾಮುಲು ಎಲ್ಲಿಯಾದರೂ ಸ್ಪರ್ಧಿಸಲಿ, ನಾನು ಸಿದ್ಧ’: ಶ್ರೀರಾಮುಲು ವಿರುದ್ಧವೂ ಸವಾಲು ಹಾಕಿದ ನಾಗೇಂದ್ರ, ‘ಮೋಸ್ಟ್ ವೆಲ್‌ಕಮ್ ರಾಮುಲು. ನೀವು ಎಲ್ಲಿಯಾದರೂ ಸ್ಪರ್ಧಿಸಿ, ಅಲ್ಲಿ ನಾನು ಇರುತ್ತೇನೆ. ಇನ್ನೂ ಹತ್ತು ಅವಧಿ ಸ್ಪರ್ಧೆ ಮಾಡುತ್ತೇನೆ. ನಾನು ಇರುವವರೆಗೂ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಪಕ್ಷ ಒಪ್ಪಿದರೆ ಈಗಲೂ ರಾಜೀನಾಮೆ ನೀಡಿ ಮತ್ತೆ ಸ್ಪರ್ಧಿಸಲು ಸಿದ್ಧ’ ಎಂದರು.
‘ಬಳ್ಳಾರಿಯ 10 ಕ್ಷೇತ್ರ ಗೆಲ್ಲುತ್ತೇವೆ’: ʻಜಿಲ್ಲೆಯ ಹತ್ತು ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ. ನಿಮ್ಮನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ’ ಎಂದು ಬಿಜೆಪಿ ವಿರುದ್ಧ ರಾಜಕೀಯ ಸವಾಲು ಹಾಕಿದ ನಾಗೇಂದ್ರ, ಎನ್.ವೈ. ಹನುಮಂತಪ್ಪ ಅವರನ್ನು ಸೋಲಿಸಿದ ವಿಚಾರವನ್ನೂ ಪ್ರಸ್ತಾಪಿಸಿ ರೆಡ್ಡಿ ವಿರುದ್ಧ ಟೀಕಿಸಿದರು.
‘ಇಬ್ಬರು ಅಣ್ಣಂದಿರ ಜೊತೆಯೂ ಸರಿಯಾಗಿ ಇರದವರು ನಮ್ಮನ್ನು ರಾಜಕೀಯವಾಗಿ ಬೆಳೆಸಿದರು ಎಂದು ಹೇಳಿಕೊಳ್ಳುತ್ತಿದ್ದಾರೆ. ಜೊತೆಯಲ್ಲಿದ್ದವರನ್ನೇ ನಿರಂತರವಾಗಿ ತುಳಿಯುವುದು ಜನಾರ್ದನ ರೆಡ್ಡಿ ಅವರ ಕ್ಯಾರೆಕ್ಟರ್’ ಎಂದು ಆರೋಪಿಸಿದರು.
‘ಪಾದಯಾತ್ರೆಗೆ ತಕ್ಕ ಉತ್ತರ’: ‘ಬಿಜೆಪಿ ಪಾದಯಾತ್ರೆಗೆ ವಿರುದ್ಧವಾಗಿ ನಾವು ಯಾವುದೇ ಪಾದಯಾತ್ರೆ ಮಾಡುವುದಿಲ್ಲ. ನಮ್ಮದು ಶಿಸ್ತಿನ ಪಕ್ಷ. ವರಿಷ್ಠರು ಸೂಚಿಸಿದ ರೀತಿಯಲ್ಲಿ ಪಾದಯಾತ್ರೆಗೆ ಕೌಂಟರ್ ಕೊಡುತ್ತೇವೆ. ಬಿಜೆಪಿ ಪಾದಯಾತ್ರೆ ಯಶಸ್ವಿಯಾಗುವುದಿಲ್ಲ. ಅದಕ್ಕೆ ತಕ್ಕ ಉತ್ತರ ನೀಡುತ್ತೇವೆ’ ಎಂದು ನಾಗೇಂದ್ರ ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕ ಆರ್. ಅಶೋಕ ಹಾಗೂ ಬಳ್ಳಾರಿಯ ‘ಸೋಕಾಲ್ಡ್ ಲೀಡರ್‌ಗಳು’ ಸೇರಿಕೊಂಡು ‘ಬಳ್ಳಾರಿ ಚಲೋ’ ನಡೆಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ ಅವರು, ಇದು ‘ಕ್ರೆಡಿಟ್ ವಾರ್’ ಆಗಿದೆ ಎಂದು ಟೀಕಿಸಿದರು.






















