SK Home Ad
Home ಸಿನಿ ಮಿಲ್ಸ್ ‘ಕೂರ್ಮಾವತಾರ’ ಟೀಸರ್ ರಿಲೀಸ್: ಶಿವಣ್ಣ ಅಭಿನಯದ ಬಹುಭಾಷಾ ಚಿತ್ರ ಹೈದರಾಬಾದ್‌ನಲ್ಲಿ ಲೋಕಾರ್ಪಣೆ

‘ಕೂರ್ಮಾವತಾರ’ ಟೀಸರ್ ರಿಲೀಸ್: ಶಿವಣ್ಣ ಅಭಿನಯದ ಬಹುಭಾಷಾ ಚಿತ್ರ ಹೈದರಾಬಾದ್‌ನಲ್ಲಿ ಲೋಕಾರ್ಪಣೆ

0
19

ಹ್ಯಾಟ್ರಿಕ್ ಹೀರೋ’ ಶಿವರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಬಹುನಿರೀಕ್ಷಿತ ಬಹುಭಾಷಾ ಚಿತ್ರ ‘ಕೂರ್ಮಾವತಾರ’ದ ಟೀಸರ್ ಅದ್ಧೂರಿಯಾಗಿ ಲೋಕಾರ್ಪಣೆಗೊಂಡಿದೆ. ನರೇಂದ್ರ ಕೊಂಡ ಅರ್ಪಿಸುವ, ಪಂಚವಕ್ತ್ರ ಪಿಕ್ಚರ್ಸ್ ಹಾಗೂ ರುಕ್ವಿನಾ ಸ್ಟುಡಿಯೋಸ್ ಬ್ಯಾನರ್‌ಗಳಡಿ ಪೂಜಿತಾ ಕೆ. ಮತ್ತು ಕೆ. ಸೇವಿತಾ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಯುವ ನಿರ್ದೇಶಕ ಹರ್ಷವರ್ಧನ್ ಕಡಿಯಾಲ ಆ್ಯಕ್ಷನ್ ಕಟ್ ಹೇಳಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಈ ಅದ್ಧೂರಿ ಸಮಾರಂಭದಲ್ಲಿ ಖ್ಯಾತ ತೆಲುಗು ನಿರ್ಮಾಪಕ ದಿಲ್ ರಾಜು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಚಿತ್ರತಂಡಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಶಿವರಾಜ್‌ಕುಮಾರ್, ಈ ಚಿತ್ರದ ಭಾಗವಾಗಿರುವುದು ತಮ್ಮ ಅದೃಷ್ಟವೆಂದು ಸಂತಸ ವ್ಯಕ್ತಪಡಿಸಿದರು. “ನಾನು ಈ ಹಿಂದೆ ಬಾಲಕೃಷ್ಣ ಅವರ ‘ಗೌತಮೀಪುತ್ರ ಶಾತಕರ್ಣಿ’ ಹಾಗೂ ಇತ್ತೀಚೆಗೆ ರಾಮ್ ಚರಣ್ ಅಭಿನಯದ ‘ಪೆದ್ದಿ’ ಸಿನಿಮಾದಲ್ಲಿ ನಟಿಸಿದ್ದೇನೆ. ಈಗ ‘ಕೂರ್ಮಾವತಾರ’ದಂತಹ ವಿಭಿನ್ನ ಕಥೆಯ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿರುವುದು ಖುಷಿ ತಂದಿದೆ. ನಾನು ಯಾವತ್ತೂ ಹೊಸಬರು-ಹಳಬರು ಎಂದು ಭೇದಭಾವ ಮಾಡುವುದಿಲ್ಲ; ಕಥೆ ಮತ್ತು ನಿರ್ದೇಶಕರ ಮೇಲಿನ ನಂಬಿಕೆಯೇ ನನ್ನ ಆಯ್ಕೆ. ಈ ಚಿತ್ರದಲ್ಲಿ ಗೆಳೆಯ ಸಾಯಿಕುಮಾರ್ ಅವರೊಂದಿಗೆ ಮತ್ತೊಮ್ಮೆ ತೆರೆ ಹಂಚಿಕೊಂಡಿರುವುದು ವಿಶೇಷ ಅನುಭವ ನೀಡಿದೆ” ಎಂದು ಶಿವಣ್ಣ ಮೆಚ್ಚುಗೆ ಸೂಚಿಸಿದರು.

ಟೀಸರ್ ವೀಕ್ಷಿಸಿದ ಬಳಿಕ ಮಾತನಾಡಿದ ನಿರ್ಮಾಪಕ ದಿಲ್ ರಾಜು, ಚಿತ್ರದ ದೃಶ್ಯವೈಭವ ಅದ್ಭುತವಾಗಿ ಮೂಡಿಬಂದಿದೆ ಎಂದು ಪ್ರಶಂಸಿಸಿದರು. “ನಿರ್ದೇಶಕ ಹರ್ಷ ತಮ್ಮ ಕೆಲಸದ ಮೂಲಕ ಎಲ್ಲರಿಗೂ ದೊಡ್ಡ ಸರ್‌ಪ್ರೈಸ್ ನೀಡಿದ್ದಾರೆ. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟದ ಯಶಸ್ಸು ಕಾಣಲಿ. ಶಿವರಾಜ್‌ಕುಮಾರ್ ನಿಜವಾದ ಸೂಪರ್‌ಸ್ಟಾರ್; ಇತ್ತೀಚೆಗೆ ನಾನು ಕೇಳಿದ ಕಥೆಯೊಂದಕ್ಕೆ ಶಿವಣ್ಣ ಅವರೇ ಸೂಕ್ತ ಎಂದು ಭಾವಿಸಿದ್ದು, ಶೀಘ್ರದಲ್ಲೇ ನಮ್ಮ ತಂಡ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದೆ” ಎಂಬ ಮಹತ್ವದ ಸುಳಿವು ನೀಡಿದರು.

ಖ್ಯಾತ ನಟ ಸಾಯಿಕುಮಾರ್ ಮಾತನಾಡಿ, “ಶಿವಣ್ಣ ಈ ಸಿನಿಮಾ ಒಪ್ಪಿಕೊಂಡಿರುವುದೇ ಒಂದು ದೈವಸಂಕಲ್ಪ. ಅವರೊಂದಿಗೆ ಮತ್ತೊಮ್ಮೆ ನಟಿಸುವ ಅವಕಾಶ ಸಿಕ್ಕಿರುವುದು ನನಗೆ ಹೆಮ್ಮೆಯ ವಿಷಯ. ನನ್ನ ತಾಯಿ ಡಾ. ರಾಜ್‌ಕುಮಾರ್ ಅವರೊಂದಿಗೆ ನಟಿಸಿದ್ದರು, ನನ್ನ ತಂದೆ ತೆಲುಗಿನಲ್ಲಿ ರಾಜ್‌ಕುಮಾರ್ ಅವರಿಗೆ ಧ್ವನಿ ನೀಡುತ್ತಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ‘ಪೊಲೀಸ್ ಸ್ಟೋರಿ’ ಚಿತ್ರದ ಮೂಲಕ ನನ್ನನ್ನು ನಾಯಕನನ್ನಾಗಿ ಮಾಡಿ, ನಮ್ಮ ಇಡೀ ಕುಟುಂಬಕ್ಕೆ ಬದುಕು ನೀಡಿದ್ದೇ ಕರ್ನಾಟಕ. ಹೀಗಾಗಿ ಡಾ. ರಾಜ್ ಕುಟುಂಬದ ಜೊತೆಗೆ ನನಗೆ ಎಂದಿಗೂ ಬಿಡಿಸಲಾರದ ಅವಿನಾಭಾವ ನಂಟಿದೆ” ಎಂದು ಹಳೆಯ ದಿನಗಳನ್ನು ನೆನೆದರು.

ಈ ಚಿತ್ರದಲ್ಲಿ ಶಿವರಾಜ್‌ಕುಮಾರ್ ಮತ್ತು ಸಾಯಿಕುಮಾರ್ ಅವರ ಜೊತೆಗೆ ವರಲಕ್ಷ್ಮಿ ಶರತ್‌ಕುಮಾರ್, ರಾಜ್ ತರುಣ್, ಶಿವಾಜಿ, ಆತಿರಾ ರಾಜ್, ರಾಜಾ ರವೀಂದ್ರ, ಬಾಲನಟಿ ಲೌಕ್ಯ ಸಾಯಿ, ಸಪ್ತಗಿರಿ, ತಾಗುಬೋತು ರಮೇಶ್, ಶತ್ರು, ವಿಟಿವಿ ಗಣೇಶ್, ಗೆಟಪ್ ಶ್ರೀನು ಹಾಗೂ ಮಹೇಶ್ ವಿಟ್ಟಾ ಸೇರಿದಂತೆ ಬಹುದೊಡ್ಡ ತಾರಾಗಣವಿದೆ.

ಚಿತ್ರಕ್ಕೆ ಜಗದೀಶ್ ಚೀಕಟಿ ಛಾಯಾಗ್ರಹಣವಿದ್ದು, ಖ್ಯಾತ ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಕೋಟಗಿರಿ ವೆಂಕಟೇಶ್ವರ ರಾವ್ ಸಂಕಲನ, ರಾಘವೇಂದ್ರ ನಾಗರದೋಣ ಕಲಾ ನಿರ್ದೇಶನ ಹಾಗೂ ಲೇಖಕ್ ರಾಮ್ ಅವರ ಚಿತ್ರಕಥೆ-ಸಂಭಾಷಣೆ ಚಿತ್ರಕ್ಕಿದೆ. ಪಿ. ಸ್ನಿಗ್ಧಾ ರೆಡ್ಡಿ ಸಹ-ನಿರ್ಮಾಣ ಹಾಗೂ ಅನಿಲ್ ಕುಮಾರ್ ಮೈಲಾಪುರ್ ಅವರ ಕಾರ್ಯಕಾರಿ ನಿರ್ಮಾಣದಲ್ಲಿ ಸಿನಿಮಾ ಸಿದ್ಧಗೊಳ್ಳುತ್ತಿದೆ. ಅತೀ ಶೀಘ್ರದಲ್ಲೇ ಈ ಸಿನಿಮಾ ರಿಲೀಸ್‌ ಆಗಲಿದೆ.