ಹುಬ್ಬಳ್ಳಿ: ಹು-ಧಾ ಪೊಲೀಸ್ ಕಮಿಷನರೇಟ್‌ಗೆ ನೂತನ ಪೊಲೀಸ್ ಆಯುಕ್ತರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿ ಎರಡು ದಿನ ಕಳೆದರೂ, ಯಾರೂ ಅಧಿಕಾರ ವಹಿಸಿಕೊಳ್ಳದೇ ಗೊಂದಲ ಮುಂದುವರೆದಿದೆ.
ರಾಜ್ಯ ಸರ್ಕಾರ ಬೆಳಗಾವಿ ಪೊಲೀಸ್ ಕಮಿಷನರ್ ಭೂಷಣ ಗುಲಾಬರಾವ್ ಬೋರಸೆ ಅವರನ್ನು ಹು-ಧಾ ಮಹಾನಗರ ಪೊಲೀಸ್ ಕಮಿಷನರ್ ಆಗಿ ನೇಮಕ ಮಾಡಿದೆ. ಇವರು ಕರ್ನಾಟಕ ಕೇಡರ್‌ನ 2009ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಬೆಳಗಾವಿಯಲ್ಲೇ ಮುಂದುವರೆಯುವ ಇಚ್ಛೆ ಹೊಂದಿದ್ದಾರೆ ಎನ್ನಲಾಗಿದೆ.
ಇದಕ್ಕೆ ಕಾರಣವೂ ಉಂಟು. ಬೆಳಗಾವಿಯಲ್ಲಿ ಇವರ ಕಾರ್ಯಶೈಲಿ ಜನಮನ ಗೆದ್ದಿದೆಯಂತೆ. ಜನಸ್ನೇಹಿ ಅಧಿಕಾರಿ, ಶಾಂತಿ ಸುವ್ಯವಸ್ಥೆ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎಂಬ ಇಮೇಜ್ ಇದೆ. ಅಲ್ಲಿನ ಜನಪ್ರತಿನಿಧಿಗಳು ಇದೇ ಅಧಿಕಾರಿಯನ್ನು ಬೆಳಗಾವಿ ಕಮೀಶನರ್ ಆಗಿ ಮುಂದುವರಿಸಲು ಸರ್ಕಾರದ ಮಟ್ಟದಲ್ಲಿ ಒತ್ತಡ ಹೇರಿದ್ದಾರಂತೆ. ಹೀಗಾಗಿ ಹುಬ್ಬಳ್ಳಿಗೆ ಬರುವುದು ಡೌಟ್ ಎಂಬ ಮಾತು ಪೊಲೀಸ್ ವಲಯದಲ್ಲಿ ಕೇಳಿಬರುತ್ತಿದೆ.
ಬೆಳಗಾವಿಯಲ್ಲೂ ಅದೇ ಕಥೆ: ಇತ್ತ ವಿಜಯಪುರದಿಂದ ಬೆಳಗಾವಿಗೆ ವರ್ಗಾವಣೆಯಾಗಿರುವ ಪ್ರಕಾಶ ಅಮೃತ್ ನಿಕ್ಕಂ ಅವರು ಕೂಡ ಇನ್ನೂ ಬೆಳಗಾವಿಗೆ ತೆರಳಿ ಅಧಿಕಾರ ವಹಿಸಿಕೊಂಡಿಲ್ಲ. ಸದ್ಯ ವರ್ಗಾವಣೆಯಾಗಿ ಪೋಸ್ಟಿಂಗ್‌ಗಾಗಿ ಕಾಯುತ್ತಿರುವ ಹು-ಧಾ ಮಹಾನಗರ ಹಾಲಿ ಆಯುಕ್ತ ಎನ್. ಶಶಿಕುಮಾರ್ ಅವರೇ ಮುಂದುವರೆದಿದ್ದಾರೆ. ಅವರು ದಾವಣಗೆರೆಗೆ ಐಜಿಪಿಯಾಗಿ ತೆರಳಲಿದ್ದಾರೆ ಎನ್ನಲಾಗಿದೆ. ದಾವಣಗೆರೆಯಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಡಾ. ರವಿಕಾಂತೇಗೌಡ ಅವರ ನಿವೃತ್ತಿಯಿಂದ ಸ್ಥಾನ ತೆರವಾಗಿದ್ದು, ಅಲ್ಲಿಗೆ ಶಶಿಕುಮಾರ್ ಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಮುಂದೇನು?: ಬೆಳಗಾವಿಯಿಂದ ಭೂಷಣ ಅವರು ಹುಬ್ಬಳ್ಳಿ-ಧಾರವಾಡಕ್ಕೆ ಬಾರದಿದ್ದರೆ, ಪ್ರಕಾಶ ನಿಕ್ಕಂ ಅವರನ್ನೇ ನೇರವಾಗಿ ಹು-ಧಾ ಪೊಲೀಸ್ ಕಮಿಷನರೇಟ್‌ಗೆ ನೂತನ ಆಯುಕ್ತರಾಗಿ ನೇಮಕ ಮಾಡುವ ಸಾಧ್ಯತೆ ದಟ್ಟವಾಗಿದೆ. ಒಟ್ಟಾರೆ ನೂತನ ಪೊಲೀಸ್ ಆಯುಕ್ತರ ಅಧಿಕಾರ ಸ್ವೀಕಾರ ಪ್ರಕ್ರಿಯೆ ಸದ್ಯ ಹಾವು-ಏಣಿ ಆಟದಂತಾಗಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.






















