ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಅಭಿಮಾನಿಗಳು ಹಾಗೂ ಸಿನಿಪ್ರಿಯರಿಗೆ ವಿಶೇಷ ಸಂದೇಶವೊಂದನ್ನು ನೀಡಿದ್ದಾರೆ.
ಸಿನಿಮಾಗಳ ಕುರಿತು ಕೇಳಿಬರುವ ನಕಾರಾತ್ಮಕ ಕಾಮೆಂಟ್‌ಗಳು ಮತ್ತು ಟೀಕೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ, ತಮ್ಮ ಮೂಲ ವ್ಯಕ್ತಿತ್ವವನ್ನು ಉಳಿಸಿಕೊಳ್ಳುವಂತೆ ಅವರು ಪರೋಕ್ಷವಾಗಿ ಸಲಹೆ ನೀಡಿದ್ದಾರೆ. ‘Actor & Proud Kannadiga – Be Yourself because an Original is Worth more than a Copy’ ಎಂದು ಅವರು ಬರೆದುಕೊಂಡಿದ್ದಾರೆ.
‘ನೀನು ನೀನಾಗಿಯೇ ಇರು. ಏಕೆಂದರೆ ನಕಲಿಗಿಂತ ಅಸಲಿಯೇ ಹೆಚ್ಚು ಬೆಲೆಬಾಳುವಂಥದ್ದು’ ಎಂಬ ಅರ್ಥದ ಈ ಸಂದೇಶ ಇದೀಗ ಗಮನ ಸೆಳೆಯುತ್ತಿದೆ. ಬೇರೆಯವರು ಏನು ಹೇಳುತ್ತಾರೆ, ಏನು ಇಷ್ಟಪಡುತ್ತಾರೆ ಎಂಬುದನ್ನು ಆಧರಿಸಿ ತಮ್ಮ ವ್ಯಕ್ತಿತ್ವವನ್ನು ಬದಲಿಸಿಕೊಳ್ಳುವ ಅಗತ್ಯವಿಲ್ಲ. ಮತ್ತೊಬ್ಬರ ಇಷ್ಟಕ್ಕೆ ಪಾತ್ರರಾಗಲು ನಕಲಿಯಾಗಿ ವರ್ತಿಸುವ ಬದಲು, ತಮ್ಮದೇ ಆದ ಮೂಲ ವ್ಯಕ್ತಿತ್ವವನ್ನು ಕಾಪಾಡಿಕೊಳ್ಳುವುದು ಮುಖ್ಯ ಎಂಬ ಖಡಕ್ ಸಂದೇಶವನ್ನು ಯಶ್ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಅಭಿಪ್ರಾಯಗಳು, ಟೀಕೆಗಳು ಹಾಗೂ ನಕಾರಾತ್ಮಕ ಕಾಮೆಂಟ್‌ಗಳು ಹೆಚ್ಚಾಗುತ್ತಿವೆ. ಇಂತಹ ಸಂದರ್ಭಗಳಲ್ಲಿ ಅವುಗಳ ಬಗ್ಗೆ ಹೆಚ್ಚು ಚಿಂತಿಸದೆ, ತಮ್ಮ ಕೆಲಸ ಮತ್ತು ವ್ಯಕ್ತಿತ್ವದ ಮೇಲೆ ನಂಬಿಕೆ ಇಟ್ಟುಕೊಳ್ಳಬೇಕು ಎಂಬುದನ್ನು ನಟ ತಮ್ಮ ಪೋಸ್ಟ್ ಮೂಲಕ ಹೇಳಿದಂತಿದೆ.
‘ಒರಿಜಿನಲ್ ವ್ಯಕ್ತಿತ್ವಕ್ಕೆ ತೂಕ ಹೆಚ್ಚು’ ಎಂಬ ಸಂದೇಶವನ್ನು ಸಾರುವ ಈ ಸಾಲುಗಳು ಅಭಿಮಾನಿಗಳ ಗಮನ ಸೆಳೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿವೆ.





















