ಸತೀಶ್ ನೀನಾಸಂ, ರಚಿತಾ ರಾಮ್ ಜೋಡಿಯ ಅಯೋಗ್ಯ ೨ ಚಿತ್ರ ೨೫ ದಿನಗಳನ್ನು ಪೂರೈಸಿದೆ. ಭರ್ಜರಿ ಓಪನಿಂಗ್ ಪಡೆದುಕೊಳ್ಳುವ ಮೂಲಕ ಬಾಕ್ಸಾಫೀಸ್‌ನಲ್ಲಿ ಜೋರಾಗಿಯೇ ಸದ್ದು ಮಾಡಿದ ‘ಅಯೋಗ್ಯ’, ಇದೀಗ ಸುಮಾರು ೪೦ ಚಿತ್ರಮಂದಿರಗಳಲ್ಲಿ ೨೫ ದಿನಗಳ ಪ್ರದರ್ಶನ ಕಂಡಿದೆ.
ಜನರು ಥಿಯೇಟರ್‌ನತ್ತ ಮುಖವೇ ಹಾಕುತ್ತಿಲ್ಲ ಎಂಬುವ ಹೊತ್ತಿನಲ್ಲಿ ಜನರನ್ನು ಚಿತ್ರಮಂದಿರದೆಡೆಗೆ ಸೆಳೆದ ಈ ಸಿನಿಮಾಕ್ಕೆ ಈಗಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ೫೦ನೇ ದಿನ ಪೂರೈಸಲಿದೆ ಎಂಬ ವಿಶ್ವಾಸ ಚಿತ್ರತಂಡಕ್ಕಿದೆ. ಪರಭಾಷಾ ಸಿನಿಮಾ ಸೇರಿದಂತೆ ಪ್ಯಾನ್ ಇಂಡಿಯಾ ಸಿನಿಮಾ ತೆರೆಕಂಡರೂ ‘ಅಯೋಗ್ಯ’ನ ಪ್ರದರ್ಶನಕ್ಕೆ ಯಾವುದೇ ರೀತಿಯ ಅಡಚಣೆ ಉಂಟಾಗದಿರುವುದು ವಿಶೇಷ.
೨೫ ದಿನಗಳನ್ನು ಪೂರೈಸಿದ ಖುಷಿಯಲ್ಲಿ ಮಂಡ್ಯ ಚಿತ್ರಮಂದಿರದಲ್ಲಿ ಅಭಿಮಾನಿಗಳೊಂದಿಗೆ ಸಂಭ್ರಮಿಸಿದ ನಟ ನೀನಾಸಂ ಸತೀಶ್ ಹಾಗೂ ಚಿತ್ರತಂಡ, ಕೇಕ್ ಕತ್ತರಿಸಿ ಖುಷಿ ಹಂಚಿಕೊಂಡರು. ಹಾಗೆಯೇ ಇದೇ ಖುಷಿಯಲ್ಲಿ ಟ್ರೇಲರ್ ರಿಲೀಸ್ ಮಾಡಿದೆ ಚಿತ್ರತಂಡ. ಸಿನಿಮಾ ಬಿಡುಗಡೆಗೂ ಮುನ್ನ ಕೇವಲ ಹಾಡಿನಿಂದಲೇ ಸದ್ದು ಮಾಡಿದ್ದ ‘ಅಯೋಗ್ಯ’, ಟ್ರೇಲರ್ ಹರಿಬಿಟ್ಟಿರಲಿಲ್ಲ. ಇದೀಗ ‘೨೫ರ ಸಂಭಮದ ಗುರುತಿಗಾಗಿ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಹಾಗೆಯೇ ರವಿಚಂದ್ರನ್ ಸರ್ ಪಾತ್ರವನ್ನೂ ರಿವೀಲ್ ಮಾಡಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ಎಸ್.ಮಹೇಶ್ ಕುಮಾರ್.
ರವಿಶಂಕರ್, ಸಾಧುಕೋಕಿಲ, ತಬಲ ನಾಣಿ, ಸುಂದರ್ ರಾಜ್, ಶಿವರಾಜ್ ಕೆ.ಆರ್.ಪೇಟೆ, ಗಿಲ್ಲಿ ನಟ, ಅರುಣಾ ಬಾಲರಾಜ್, ಗಿರಿ ಶಿವಣ್ಣ ಹಾಗೂ ಮಂಜು ಪಾವಗಡ ಸೇರಿದಂತೆ ಅನೇಕರು ತಾರಾಗಣದಲ್ಲಿರುವ ಈ ಸಿನಿಮಾದಲ್ಲಿ ನಟಿ ಪ್ರಜ್ಞಾ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ.
ಎಸ್.ವಿ.ಸಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಎಂ.ಮುನೇಗೌಡ ನಿರ್ಮಿಸಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ‘ಬಹದ್ದೂರ್’ ಚೇತನ್ ಕುಮಾರ್ ಸಾಹಿತ್ಯ, ಮಾಸ್ತಿ ಉಪ್ಪಾರಳ್ಳಿ ಸಂಭಾಷಣೆ, ವಿಶ್ವಜಿತ್ ರಾವ್ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಅರ್ಜುನ್ ರಾಜ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.





















