SK Home Ad
Home ಸಿನಿ ಮಿಲ್ಸ್ ದರ್ಶನ್‌ ಸಾಂಗ್‌ ಬಿಗ್‌ ಬಾಸ್‌ನಲ್ಲಿ ಯಾಕೆ ಹಾಕಲ್ಲ?: ‘ಈ ಪ್ರಶ್ನೆ ಟಾಕ್ಸಿಕ್‌’ ಎಂದ ಕಿಚ್ಚ

ದರ್ಶನ್‌ ಸಾಂಗ್‌ ಬಿಗ್‌ ಬಾಸ್‌ನಲ್ಲಿ ಯಾಕೆ ಹಾಕಲ್ಲ?: ‘ಈ ಪ್ರಶ್ನೆ ಟಾಕ್ಸಿಕ್‌’ ಎಂದ ಕಿಚ್ಚ

0
25

ಬೆಂಗಳೂರು: ಬಿಗ್‌ ಬಾಸ್‌ ಮನೆಯಲ್ಲಿ ನಟ ದರ್ಶನ್‌ ಅವರ ಹಾಡುಗಳನ್ನು ಯಾಕೆ ಪ್ರಸಾರ ಮಾಡುವುದಿಲ್ಲ ಎಂಬ ಪ್ರಶ್ನೆಗೆ ನಟ ಹಾಗೂ ಬಿಗ್‌ ಬಾಸ್‌ ನಿರೂಪಕ ಕಿಚ್ಚ ಸುದೀಪ್‌ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ‘ಈ ಪ್ರಶ್ನೆ ಟಾಕ್ಸಿಕ್‌’ ಎಂದು ವ್ಯಂಗ್ಯವಾಡಿರುವ ಸುದೀಪ್‌, ಕನ್ನಡ ಚಿತ್ರರಂಗದಲ್ಲಿ ಯಾರನ್ನೂ ತುಳಿಯುವ ಉದ್ದೇಶ ತಮ್ಮದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ದರ್ಶನ್‌ ಅವರ ಹಾಡುಗಳನ್ನು ಬಿಗ್‌ ಬಾಸ್‌ ಮನೆಯಲ್ಲಿ ಯಾಕೆ ಹಾಕುವುದಿಲ್ಲ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸುದೀಪ್‌, “ನಾನು ಇದನ್ನು ಲೀಗಲ್‌ ಟೀಮ್‌ಗೆ ಕಳುಹಿಸುತ್ತೇನೆ. ಈ ಪ್ರಶ್ನೆ ಟಾಕ್ಸಿಕ್‌. ಇದು ಬೇಡವಾದ ಪ್ರಶ್ನೆ” ಎಂದು ಹೇಳಿದ್ದಾರೆ.

ಇದೇ ವೇಳೆ ಬಿಗ್‌ ಬಾಸ್‌ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರ ಮೇಲೂ ಪ್ರೀತಿ ಇದೆ, ಯಾರ ಮೇಲೂ ದ್ವೇಷವಿಲ್ಲ ಎಂದು ಸುದೀಪ್‌ ಸ್ಪಷ್ಟಪಡಿಸಿದ್ದಾರೆ.

“ಓಪನ್‌ ಆಗಿ ಹೇಳ್ತೀನಿ. ನಮಗೆ ಪ್ರತಿಯೊಬ್ಬರ ಮೇಲೂ ಪ್ರೀತಿ ಇದೆ, ದ್ವೇಷ ಇಲ್ಲ. ಯಾರನ್ನೂ ತುಳಿಯುವ ಉದ್ದೇಶ ನನ್ನಿಂದ ಆಗಲ್ಲ. ಯಾರನ್ನ ತುಳಿಯೋದಕ್ಕೆ ಯಾವ ನನ್ನ ಮಗನಿಂದಲೂ ಆಗಲ್ಲ” ಎಂದು ಸುದೀಪ್‌ ಖಡಕ್‌ ಆಗಿ ಹೇಳಿದ್ದಾರೆ.

ಇದನ್ನೂ ಓದಿ: ಇಸ್ಲಾಂ ಧರ್ಮ ಶ್ರೇಷ್ಠ, ಹಜ್‌ ಯಾತ್ರೆಗೆ ಹೋಗುವ ಆಸೆಯಿದೆ: ರಾಯರಡ್ಡಿ

‘ಹಾಡು ಹಾಕದಿರಲು ಬೇರೆ ಕಾರಣ ಇರಬಹುದಲ್ವಾ?’ ಬಿಗ್‌ ಬಾಸ್‌ ಮನೆಯಲ್ಲಿ ದರ್ಶನ್‌ ಅವರ ಹಾಡುಗಳನ್ನು ಪ್ರಸಾರ ಮಾಡದಿರುವುದಕ್ಕೆ ಬೇರೆ ಕಾರಣಗಳೂ ಇರಬಹುದು ಎಂದು ಸುದೀಪ್‌ ಹೇಳಿದ್ದಾರೆ.

“ಹಾಕಬಾರದು ಅಂತಿದ್ದರೆ ಅದಕ್ಕೆ ಬೇರೆ ಕಾರಣವೂ ಇರಬಹುದಲ್ವಾ? ಕನ್ನಡ ಚಿತ್ರರಂಗ ತುಂಬಾ ವಿಶಾಲವಾಗಿದೆ. ಇಲ್ಲಿ ಯಾರೂ ಯಾರನ್ನೂ ತುಳಿಯೋಕೆ ಬಂದಿಲ್ಲ” ಎಂದು ಅವರು ಹೇಳಿದ್ದಾರೆ.

ಯಾವುದಾದರೂ ಹಾಡನ್ನು ಬಿಗ್‌ ಬಾಸ್‌ ಮನೆಯಲ್ಲಿ ಪ್ರಸಾರ ಮಾಡಿದಾಗ ಅದರ ಬಗ್ಗೆಯೂ ಪ್ರಶ್ನೆಗಳು ಎದುರಾಗಬಹುದು ಎಂದು ಸುದೀಪ್‌ ತಿಳಿಸಿದ್ದಾರೆ.

“ಯಾವುದಾದರೂ ಸಾಂಗ್‌ ಪ್ಲೇ ಮಾಡಿದರೆ, ‘ಈ ಸಾಂಗ್‌ ಯಾಕೆ ಪ್ಲೇ ಮಾಡ್ತೀರಾ?’ ಎಂದು ಪ್ರಶ್ನೆ ಮಾಡುವವರು ಇರಬಹುದು. ಬೆದರಿಕೆಯೂ ಇರಬಹುದು ಅಲ್ವಾ?” ಎಂದು ಅವರು ಹೇಳಿದ್ದಾರೆ.

‘ಎಷ್ಟೋ ಕಲಾವಿದರ ಹಾಡು ಹಾಕಲ್ಲ, ಅದನ್ನು ಕೇಳಲ್ಲ’ ಕನ್ನಡ ಚಿತ್ರರಂಗದಲ್ಲಿ ಅನೇಕ ಕಲಾವಿದರ ಹಾಡುಗಳು ಬಿಗ್‌ ಬಾಸ್‌ ಮನೆಯಲ್ಲಿ ಪ್ರಸಾರವಾಗುವುದಿಲ್ಲ. ಆದರೆ, ಅದಕ್ಕೆಲ್ಲಾ ಪ್ರಶ್ನೆ ಮಾಡುವುದಿಲ್ಲ ಎಂದು ಸುದೀಪ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಗೃಹಲಕ್ಷ್ಮೀ 3ನೇ ವರ್ಷಾಚರಣೆ: ಪಿಂಕ್ ಲೈಟ್‌ನಲ್ಲಿ ಮಿಂಚಿದ ಹಂಪಿ ಕಲ್ಲಿನ ತೇರು

ಚಿತ್ರರಂಗದಲ್ಲಿ ಎಲ್ಲರೊಂದಿಗೂ ಉತ್ತಮ ಸಂಬಂಧ ಮತ್ತು ಪರಸ್ಪರ ಗೌರವ ಇರಬೇಕು ಎಂಬುದನ್ನೂ ಅವರು ಇದೇ ವೇಳೆ ಒತ್ತಿ ಹೇಳಿದ್ದಾರೆ. “ನಮಗೆ ಪ್ರತಿಯೊಬ್ಬರ ಮೇಲೂ ಪ್ರೀತಿ ಇದೆ, ದ್ವೇಷ ಇಲ್ಲ. ಚಿತ್ರರಂಗದ ಎಲ್ಲರೊಂದಿಗೂ ಉತ್ತಮ ಸಂಬಂಧ ಮತ್ತು ಗೌರವ ಇರಬೇಕು” ಎಂಬ ಸುದೀಪ್‌ ಅವರ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿವೆ.

ದರ್ಶನ್‌ ಕುರಿತ ಪ್ರಶ್ನೆಗೆ ಸುದೀಪ್‌ ನೀಡಿರುವ ಈ ನೇರ ಹಾಗೂ ಖಾರವಾದ ಉತ್ತರದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.