SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಹಣ ಅಕ್ರಮ: ನಾಗೇಂದ್ರ ಸೇರಿದಂತೆ ಪ್ರಭಾವಿಗಳ ಮೇಲೂ ತನಿಖೆಯಾಗಲಿ

ಹಣ ಅಕ್ರಮ: ನಾಗೇಂದ್ರ ಸೇರಿದಂತೆ ಪ್ರಭಾವಿಗಳ ಮೇಲೂ ತನಿಖೆಯಾಗಲಿ

0
58
File Photo

ದಾವಣಗೆರೆ: ಕರ್ನಾಟಕ ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಸುಮಾರು ₹187 ಕೋಟಿ ಹಣ ಅಕ್ರಮವಾಗಿ ವರ್ಗಾವಣೆಯಾದ ಪ್ರಕರಣದಲ್ಲಿ ಮಾಜಿ ಸಚಿವ ನಾಗೇಂದ್ರ ಅವರನ್ನು ಮಾತ್ರ ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ. ಪ್ರಕರಣದ ಹಿಂದೆ ಇರುವ ಪ್ರಭಾವಿ ನಾಯಕರ ಪಾತ್ರ ಹಾಗೂ ಹಣಕಾಸು ಇಲಾಖೆಯಲ್ಲಿನ ಹಸ್ತಕ್ಷೇಪದ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕು ಎಂದು ಮಾಜಿ ಸಚಿವ ಶಿವನಗೌಡ ನಾಯಕ ಆಗ್ರಹಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವ ಆರೋಪ ಗಂಭೀರವಾಗಿದೆ. ನಾಗೇಂದ್ರ ಅವರು ಸ್ವಪ್ರವೃತ್ತಿಯಿಂದ ಹಣ ದುರುಪಯೋಗಪಡಿಸಿಕೊಂಡಿದ್ದಾರೆ ಎನ್ನುವುದಕ್ಕಿಂತ, ಪ್ರಭಾವಿಗಳ ಮಾತು ಹಾಗೂ ನಿರ್ದೇಶನದ ಮೇರೆಗೆ ಅವರು ಈ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಹಣವನ್ನು ಬಳ್ಳಾರಿ ಉಪಚುನಾವಣೆ, ಲೋಕಸಭಾ ಚುನಾವಣೆ ಹಾಗೂ ತೆಲಂಗಾಣ ವಿಧಾನಸಭಾ ಚುನಾವಣೆಯ ವೆಚ್ಚಕ್ಕೆ ಬಳಸಲಾಗಿದೆ ಎಂಬ ಆರೋಪಗಳಿದ್ದು, ಇದರ ಸತ್ಯಾಸತ್ಯತೆ ಹೊರಬರಬೇಕಿದೆ. ಅಂದಿನ ಸಚಿವ ಸಂಪುಟದಲ್ಲಿದ್ದ ಪ್ರಭಾವಿ ನಾಯಕರೂ ಸೇರಿದಂತೆ ಹಣಕಾಸು ಇಲಾಖೆಯ ಪ್ರಮುಖರ ಪಾತ್ರದ ಬಗ್ಗೆಯೂ ಸಿಬಿಐ ಆಳವಾದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಬ್ಯಾಂಕ್‌ನಲ್ಲಿ ಹಣಕಾಸಿನ ವ್ಯವಹಾರಗಳಿಗೆ ಕ್ಯಾಷಿಯರ್ ಅಥವಾ ಮ್ಯಾನೇಜರ್ ಜವಾಬ್ದಾರರಾಗಿರುವಂತೆ, ನಿಗಮದ ಸಚಿವರಾಗಿದ್ದ ಕಾರಣ ನಾಗೇಂದ್ರ ಅವರ ಮೇಲೂ ಜವಾಬ್ದಾರಿ ಇದೆ. ಆದರೆ ಅವರೊಬ್ಬರನ್ನೇ ಗುರಿಯಾಗಿಸಿ ಪ್ರಕರಣವನ್ನು ಮುಗಿಸಬಾರದು. ಹಣದ ಅಕ್ರಮ ವರ್ಗಾವಣೆಯ ಹಿಂದೆ ಇರುವ ‘ಕಾಣದ ಕೈಗಳನ್ನು’ ತನಿಖೆ ಮೂಲಕ ಪತ್ತೆಹಚ್ಚಿ, ನಿಜವಾದ ತಪ್ಪಿತಸ್ಥರನ್ನು ಕಾನೂನಿನ ಮುಂದೆ ತರಬೇಕು ಎಂದರು.

ಅಕ್ರಮವಾಗಿ ವರ್ಗಾವಣೆಯಾದ ಹಣ ಚುನಾವಣಾ ಪ್ರಕ್ರಿಯೆಯಲ್ಲಿ ಬಳಕೆಯಾಗಿದ್ದರೆ, ಅದರ ಮೂಲಕ ಆಯ್ಕೆಯಾದ ಜನಪ್ರತಿನಿಧಿಗಳು ಹಾಗೂ ಸಂಸದರ ಸದಸ್ಯತ್ವದ ಕುರಿತಂತೆಯೂ ಕಾನೂನುಬದ್ಧವಾಗಿ ಪರಿಶೀಲನೆ ನಡೆಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕಾನೂನು ಹೋರಾಟ ನಡೆಸುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ ಎಂದು ಶಿವನಗೌಡ ನಾಯಕ ತಿಳಿಸಿದರು.

ರಾಜಕೀಯದಲ್ಲಿ ಗಂಭೀರ ಆರೋಪಗಳು ಎದುರಾದಾಗ ರಾಜೀನಾಮೆ ನೀಡಿ ಜನತಾ ನ್ಯಾಯಾಲಯಕ್ಕೆ ತೆರಳಿ ಜನರ ತೀರ್ಪು ಪಡೆಯುವುದು ಹಿಂದಿನ ಕಾಲದ ರಾಜಕಾರಣದ ಪರಂಪರೆಯಾಗಿತ್ತು. ನಾಗೇಂದ್ರ ಅವರೂ ಜನತಾ ನ್ಯಾಯಾಲಯದ ಮುಂದೆ ಹೋಗಿ ತಮ್ಮ ನಿಲುವನ್ನು ಸ್ಪಷ್ಟಪಡಿಸಬಹುದು ಎಂದು ಅವರು ಹೇಳಿದರು.

ದಲಿತ ಹಾಗೂ ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನು ಚುನಾವಣಾ ರಾಜಕಾರಣಕ್ಕೆ ಬಳಸಿರುವ ಆರೋಪ ಅತ್ಯಂತ ಗಂಭೀರವಾಗಿದ್ದು, ಇದರ ಸಂಪೂರ್ಣ ಸತ್ಯವನ್ನು ಜನರ ಮುಂದೆ ತರಬೇಕು ಎಂದು ಶಿವನಗೌಡ ನಾಯಕ ಒತ್ತಾಯಿಸಿದರು.

ರಾಜ್ಯಪಾಲರ ಮುಂದೆ ಈ ಹಿಂದೆ ಕೂಡ ನಾಲ್ಕೈದು ಬಾರಿ ಇಂತಹ ಪ್ರಾಸಿಕ್ಯೂಷನ್ ವಿಚಾರಗಳು ಬಂದಿರುವ ಉದಾಹರಣೆಗಳಿವೆ. ಪ್ರಸ್ತುತ ಬಂದಿರುವ ಮಾಹಿತಿಯ ಪ್ರಕಾರ, ಕೇವಲ ಒಬ್ಬರಷ್ಟೇ ಅಲ್ಲದೆ ಮೂವರು ಪ್ರಮುಖ ವ್ಯಕ್ತಿಗಳ (ವಿಪಕ್ಷದ ನಾಯಕರನ್ನೂ ಒಳಗೊಂಡಂತೆ) ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಕೋರಿ ರಾಜ್ಯಪಾಲರಿಗೆ ಮನವಿ ಸಲ್ಲಿಕೆಯಾಗಿದೆ ಎನ್ನಲಾಗಿದೆ. ಜನಪ್ರತಿನಿಧಿಗಳು ಅಥವಾ ಸಚಿವರ ಮೇಲೆ ತನಿಖಾ ಸಂಸ್ಥೆಗಳು ಅಥವಾ ಸಿಬಿಐ ಪ್ರಾಸಿಕ್ಯೂಷನ್ ಕ್ರಮ ಕೈಗೊಳ್ಳಬೇಕಾದರೆ ರಾಜ್ಯಪಾಲರ ಅಥವಾ ಸ್ಪೀಕರ್ ಅವರ ಪೂರ್ವಾನುಮತಿ ಅಗತ್ಯವಾಗಿರುತ್ತದೆ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ, ಶಾಸಕ ನಾಗೇಂದ್ರ ಅವರ ರಾಜೀನಾಮೆ ಮತ್ತು ಪಾದಯಾತ್ರೆ ಕುರಿತು ಪ್ರತಿಕ್ರಿಯಿಸಿ, “ಆರೋಪಗಳಿಂದ ಮುಕ್ತರಾಗಲು ಹಾಗೂ ತಾವು ಸ್ವಚ್ಛರೆಂದು ನಿರೂಪಿಸಿಕೊಳ್ಳಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸಾರ್ವಜನಿಕರ ಬಳಿಗೆ ಹೋಗುವುದು ಹಿಂದಿನಿಂದಲೂ ನಡೆದುಬಂದಿರುವ ರಾಜಕೀಯ ಸಂಪ್ರದಾಯ. ಅದೇ ದಾರಿಯಲ್ಲಿ ಬಿ.ನಾಗೇಂದ್ರ ಅವರು ಹೆಜ್ಜೆ ಇಟ್ಟು ಜನತೆ ಮುಂದೆ ಹೋಗಿ ಗೆಲುವು ಸಾಧಿಸಿ ಸಾಬೀತು ಪಡಿಸಬಹುದು

ಮಾಜಿ ಸಚಿವ ಶಿವನಗೌಡ ನಾಯಕ