SK Home Ad
Home ಸುದ್ದಿ ರಾಜ್ಯ ತಮಿಳುನಾಡಿಗೆ 9,000 ಕ್ಯೂಸೆಕ್ ಕಾವೇರಿ ನೀರು ಹರಿಸಲು ಆದೇಶ

ತಮಿಳುನಾಡಿಗೆ 9,000 ಕ್ಯೂಸೆಕ್ ಕಾವೇರಿ ನೀರು ಹರಿಸಲು ಆದೇಶ

0
54

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆಯಾಗಿದ್ದು, ಮುಂದಿನ 15 ದಿನಗಳ ಕಾಲ ಪ್ರತಿದಿನ 9,000 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ನಿರ್ದೇಶನ ನೀಡಿದೆ.

ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿದ್ದ ಪ್ರತಿದಿನ 9,000 ಕ್ಯೂಸೆಕ್ ನೀರು ಹರಿಸುವ ಶಿಫಾರಸನ್ನೇ CWMA ಎತ್ತಿಹಿಡಿದಿದೆ. ಇಂದಿನಿಂದಲೇ ಆದೇಶ ಜಾರಿಗೆ ಬರಲಿದ್ದು, ಮುಂದಿನ 15 ದಿನಗಳಲ್ಲಿ ಒಟ್ಟು ಸುಮಾರು 11.66 ಟಿಎಂಸಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಬೇಕಾಗಿದೆ.

ದೆಹಲಿಯ CWMA ಕಚೇರಿಯಲ್ಲಿ ನಡೆದ ಸುಮಾರು ಒಂದೂವರೆ ಗಂಟೆಗಳ ಸಭೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ಅಧಿಕಾರಿಗಳು ಭಾಗವಹಿಸಿದ್ದರು. ಕರ್ನಾಟಕದ ಪರವಾಗಿ ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಹಾಗೂ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಭಾಗವಹಿಸಿದ್ದರು. ತಮಿಳುನಾಡಿನ ಪರವಾಗಿ ನೀರಾವರಿ ಕಾರ್ಯದರ್ಶಿ ಪ್ರಶಾಂತ್ ಮತ್ತು ಕಾವೇರಿ ತಾಂತ್ರಿಕ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯಂ ಪಾಲ್ಗೊಂಡಿದ್ದರು.

ಸಭೆಯಲ್ಲಿ ತಮಿಳುನಾಡಿಗೆ ಹರಿಸುವ ನೀರಿನ ಪ್ರಮಾಣವನ್ನು ಪ್ರತಿದಿನ 6,000 ಕ್ಯೂಸೆಕ್‌ಗೆ ಇಳಿಸಬೇಕು ಎಂದು ಕರ್ನಾಟಕ ಮನವಿ ಮಾಡಿತ್ತು. ಆದರೆ, ಕರ್ನಾಟಕದ ಮನವಿಯನ್ನು CWMA ಪುರಸ್ಕರಿಸಲಿಲ್ಲ. ಬದಲಿಗೆ CWRC ಶಿಫಾರಸಿನಂತೆ 9,000 ಕ್ಯೂಸೆಕ್ ನೀರು ಹರಿಸುವಂತೆ ನಿರ್ದೇಶನ ನೀಡಿದೆ.

ಇದೇ ವೇಳೆ, ತಮಿಳುನಾಡು ಸರ್ಕಾರವು ಹೆಚ್ಚುವರಿಯಾಗಿ 28 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಬೇಡಿಕೆ ಇಟ್ಟಿತ್ತು. ಆದರೆ, ಈ ಬೇಡಿಕೆಯನ್ನು CWMA ತಿರಸ್ಕರಿಸಿದೆ.

ಕಾವೇರಿ ಕಣಿವೆ ಪ್ರದೇಶದಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿರುವ ಹಿನ್ನೆಲೆಯಲ್ಲಿ 9,000 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಪ್ರಾಧಿಕಾರ ಸೂಚಿಸಿದೆ.

ಸಭೆಯ ಬಳಿಕ ಕರ್ನಾಟಕ ಭವನದಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಪ್ರಾಧಿಕಾರವು ನಿನ್ನೆ CWRC ನೀಡಿದ್ದ ಶಿಫಾರಸನ್ನೇ ಪಾಲಿಸುವಂತೆ ಸೂಚಿಸಿದೆ ಎಂದು ತಿಳಿಸಿದರು.

ʻಈಗಿನ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ 9,000 ಕ್ಯೂಸೆಕ್ ನೀರು ಹರಿಸಲು ಯಾವುದೇ ಸಮಸ್ಯೆ ಇಲ್ಲ. ಇಂದಿನ ಬೆಳವಣಿಗೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಮುಂದಿನ ಕಾನೂನು ಹೋರಾಟದ ಕುರಿತು ನಮ್ಮ ಕಾನೂನು ತಜ್ಞರ ತಂಡ ನಿರ್ಧಾರ ಕೈಗೊಳ್ಳಲಿದೆ’ ಎಂದು ಗೌರವ್ ಗುಪ್ತಾ ಹೇಳಿದರು.

CWMA ಆದೇಶದ ಸಂಪೂರ್ಣ ವಿವರಗಳನ್ನು ಮುಖ್ಯಮಂತ್ರಿ ಹಾಗೂ ಸರ್ಕಾರದ ಗಮನಕ್ಕೆ ತಂದು, ಮುಂದಿನ ಕಾನೂನು ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಕರ್ನಾಟಕದ ಅಧಿಕಾರಿಗಳು ತಿಳಿಸಿದ್ದಾರೆ.