ಶಿವಮೊಗ್ಗ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ತನ್ನ ಮೂವರು ಮಕ್ಕಳೊಂದಿಗೆ ತುಂಗಾ ನದಿಗೆ ಹಾರಿದ ಘಟನೆ ನಗರದ ಹೊಳೆ ಬಸ್‌ಸ್ಟಾಪ್ ಬಳಿ ನಡೆದಿದೆ.
ಚಿತ್ರದುರ್ಗ ತಾಲೂಕು ಹೊಸೂರು ಗ್ರಾಮದ ನಿವಾಸಿ ಭವಾನಿ ಎಂಬ ಮಹಿಳೆ ತನ್ನ ಮೂವರು ಮಕ್ಕಳ ಜೊತೆ, ಸೋಮವಾರ ಸಂಜೆ ಅರಕೇಶ್ವರ ದೇಗುಲದ ಹಿಂಭಾಗದಿಂದ ನದಿಗೆ ಹಾರಿದ್ದಾರೆ.
ಸ್ಥಳೀಯರ ಸಮಯೋಚಿತ ಕಾರ್ಯಾಚರಣೆಯಿಂದ ಮಹಿಳೆ ಹಾಗೂ 11 ತಿಂಗಳ ಮಗುವನ್ನು ರಕ್ಷಿಸಲಾಗಿದ್ದು, ಇನ್ನಿಬ್ಬರು ಹೆಣ್ಣುಮಕ್ಕಳು ನಾಪತ್ತೆಯಾಗಿದ್ದಾರೆ. ಅವರಿಗಾಗಿ ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಸ್ಥಳೀಯರಾದ ಪ್ರದೀಪ್ ಸೇರಿದಂತೆ ಮತ್ತಿತರರು ತಕ್ಷಣ ಕಾರ್ಯಾಚರಣೆಗೆ ನಡೆಸಿ, ನೀರಿನಲ್ಲಿ ಮುಳುಗುತ್ತಿದ್ದ ಭವಾನಿ ಹಾಗೂ ಅವರ 11 ತಿಂಗಳ ಗಂಡು ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೂಡಲೇ ತಾಯಿ ಮತ್ತು ಮಗುವನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 6 ವರ್ಷ ಮತ್ತು 4 ವರ್ಷದ ಇಬ್ಬರು ಹೆಣ್ಣು ಮಕ್ಕಳು ನೀರುಪಾಲಾಗಿದ್ದಾರೆ. ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.






















