ದಾಂಡೇಲಿ (ಉತ್ತರ ಕನ್ನಡ) ಸಂ.ಕ. ಸಮಾಚಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮನೆಗಳ ಕಳ್ಳತನ ತಡೆಗಟ್ಟುವ ಹಾಗೂ ಸಾರ್ವಜನಿಕರ ಮನೆಗಳನ್ನು ಸುರಕ್ಷಿತವಾಗಿಡುವ ಉದ್ದೇಶದಿಂದ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ‘ರಕ್ಷಾ’ (Locked House Beat System) ಎಂಬ ವಿಶೇಷ ಕಾರ್ಯಕ್ರಮವನ್ನು ಆರಂಭಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಅವರು, ಜಿಲ್ಲೆಯ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕುಟುಂಬ ಸಮೇತ ಮನೆ ಬಿಟ್ಟು ಬೇರೆ ಊರಿಗೆ ತೆರಳುವ ಸಾರ್ವಜನಿಕರು ಈ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಮನೆಗೆ ಬೀಗ ಹಾಕಿ ಪರ ಊರಿಗೆ ತೆರಳುವವರು ತಮ್ಮ ಹೆಸರು, ವಿಳಾಸ, ಗೂಗಲ್ ಲೊಕೇಶನ್ ಹಾಗೂ ಸೆಲ್ಫಿ ಫೋಟೋ ಸೇರಿದಂತೆ ಅಗತ್ಯ ಮಾಹಿತಿಯನ್ನು ಪೊಲೀಸ್ ಕಂಟ್ರೋಲ್ ರೂಮ್‌ಗೆ ನೀಡಬೇಕು. ಮಾಹಿತಿ ಪಡೆದ ಬಳಿಕ ರಾತ್ರಿ ವೇಳೆಯಲ್ಲಿ ಪೊಲೀಸ್ ಗಸ್ತು ಸಿಬ್ಬಂದಿ ಸಂಬಂಧಿಸಿದ ಮನೆಗೆ ಎರಡು ಬಾರಿ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಈ ಮೂಲಕ ಮನೆಗಳ ಕಳ್ಳತನವನ್ನು ತಡೆಗಟ್ಟಲು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಅಲ್ಲದೆ, ಮನೆ ಬಿಟ್ಟು ತೆರಳುವ ಸಂದರ್ಭದಲ್ಲಿ ಚಿನ್ನಾಭರಣ, ನಗದು ಹಣ ಸೇರಿದಂತೆ ಮೌಲ್ಯಯುತ ವಸ್ತುಗಳನ್ನು ಮನೆಯಲ್ಲಿ ಇರಿಸದೆ, ಅವುಗಳನ್ನು ಬ್ಯಾಂಕ್ ಲಾಕರ್‌ನಲ್ಲಿ ಸುರಕ್ಷಿತವಾಗಿ ಇಡುವಂತೆ ಪೊಲೀಸರು ಸಲಹೆ ನೀಡಿದ್ದಾರೆ.
‘ರಕ್ಷಾ’ ಕಾರ್ಯಕ್ರಮದ ಸೌಲಭ್ಯ ಪಡೆಯಲು ಸಾರ್ವಜನಿಕರು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮ್: 8277988303 ಸಂಖ್ಯೆಗೆ ಕರೆ ಮಾಡಿ ತಮ್ಮ ಮನೆಯ ವಿವರಗಳನ್ನು ತಿಳಿಸಬಹುದು.
ಜಿಲ್ಲೆಯ ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು, ಮನೆ ಕಳ್ಳತನ ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಮನವಿ ಮಾಡಿದೆ.
- ‘ಪ್ರತಿ FIR 1 ಮೆಡಲ್ ಇದ್ದಹಾಗೆ’: 100 FIR ಗುರಿಯಿದೆ ಎಂದ ರಾಹುಲ್
- ಹಣದುಬ್ಬರದ ಒತ್ತಡಕ್ಕೆ RBI ಕ್ರಮ: ಮೂರುವರೆ ವರ್ಷಗಳ ಬಳಿಕ ರೆಪೊ ದರ 5.50%ಕ್ಕೆ ಹೆಚ್ಚಳ
- ಡಿಸೆಂಬರ್ 30ರೊಳಗೆ ಸ್ಥಳೀಯ ಚುನಾವಣೆ: ನಾಳೆ ಮೀಸಲಾತಿ ಪ್ರಕಟ
- ರಸಾಯನಶಾಸ್ತ್ರ ನೊಬೆಲ್ ಗರಿ: ಅಣುಗಳ ‘ಕನ್ನಡಿ ರಹಸ್ಯ’ ಬಿಡಿಸಿದ ಕಗನ್, ಸೋಯ್
- ಸಿಎಂ ವಿಡಿಯೋ ಕಾನ್ಫರೆನ್ಸ್ ಮಾಡಿದರೆ ಬರ ನಿರ್ವಹಿಸಲು ಸಾಧ್ಯವಿಲ್ಲ






















